ಜಿಲ್ಲೆ

ಮೊಬೈಲ್ ಕರೆನ್ಸಿ ಹೆಚ್ಚಳಕ್ಕೆ ವಿರೋಧ ಎಐಡಿವೈಒ ಪ್ರತಿಭಟನೆ

ಡಿ. ಎಂ. ಮಹೇಶ್

ದಾವಣಗೆರೆ: ಕೆಲವು ಮೊಬೈಲ್ ಕಂಪನಿಗಳು ಕರೆನ್ಸಿ ದರವನ್ನು ಹೆಚ್ಚಿಸಿದ ಕ್ರಮ ವಿರೋಧಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್‌ನಿಂದ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಮೊಬೈಲ್ ಇಂದು ಎಲ್ಲರ ನಿತ್ಯ ಅವಶ್ಯಕತೆಗಳಲ್ಲಿ ಒಂದಾಗಿದೆ. ಮಕ್ಕಳ ವಿದ್ಯಾಭ್ಯಾಸ, ಎಲ್ಲಾ ಕಚೇರಿಗಳ ಕೆಲಸದಲ್ಲಿ, ಜನರ ಸಂಪರ್ಕದಲ್ಲಿ ಮುಖ್ಯ ಪಾತ್ರ ವಹಿಸಿದೆ. ಕೆಲವು ಕಂಪನಿಗಳು ಮೊಬೈಲ್ ಕರೆನ್ಸಿ ದರವನ್ನು ಹೆಚ್ಚಳ ಮಾಡಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಖಾಸಗಿ ಕಂಪನಿಗಳು ಏರಿಸುವ ದರದ ಮೇಲೆ ನಿಯಂತ್ರಣ ಸಾಧಿಸಲಾಗದ ಟ್ರಾಯ್ ಸಂಸ್ಥೆಯು ಹಲ್ಲು ಕಿತ್ತ ಹಾವಂತಾಗಿದೆ. ಟ್ರಾಯ್ ಕೂಡ ಖಾಸಗಿ ಸಂಸ್ಥೆಗಳಂತೆ ಕೆಲಸ ಮಾಡುತ್ತಿದೆ. ಇದು ಜನವಿರೋಧಿಯಾಗಿದೆ ಎಂದು ಟೀಕಿಸಿದರು.
ಸರ್ಕಾರದ ಖಾಸಗೀಕರಣ ನೀತಿಯಿಂದಾಗಿ ಹಲವು ಖಾಸಗಿ ಕಂಪನಿಗಳು ದೇಶದ ದೂರಸಂಪರ್ಕ ಕ್ಷೇತ್ರದಲ್ಲಿ ಹಿಡಿತ ಸಾಧಿಸಿವೆ. ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ರೆಕ್ಕೆಯಿಲ್ಲದ ಹಕ್ಕಿಯಂತಾಗಿದೆ. ಖಾಸಗಿ ಕಂಪನಿಗಳ ಜೊತೆ ಸ್ಪರ್ಧಿಸಲಾಗದೆ ಸಾವಿನಂಚಿನಲ್ಲಿದೆ. ಇದು ಸರ್ಕಾರದ ಉದ್ದೇಶ ಪೂರಿತ ನಿಲುವು. ಖಾಸಗಿ ಕಂಪನಿಗಳ ಅತ್ಯಧಿಕ ಲಾಭದ ಗಳಿಕೆಯು ದೇಶದ ಜನರ ಮೇಲೆ ಪರಿಣಾಮ ಬೀರಲಿದೆ ಎಂದು ಸಂಘಟನೆಯ ಜಿಲ್ಲಾ ಸಂಚಾಲಕ ಪರಶುರಾಮ್ ಹೇಳಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಅಭಿಷೇಕ್, ಅನಿಲ್ ಬಳ್ಳಾರಿ, ಗುರು, ಶಶಿ ಹಾಗೂ ವಿದ್ಯಾರ್ಥಿಗಳಾದ  ಮಂಜುನಾಥರೆಡ್ಡಿ, ಹರಿಪ್ರಸಾದ್, ಗಿರೀಶ್, ಬಸವರಾಜ್, ರೇವಣಸಿದ್ದಪ್ಪ ಹಾಗೂ ಯುವಕರಿದ್ದರು.
----