ದಾವಣಗೆರೆ: ಕೋಲ್ಕತ್ತಾದ ಕಿರಿಯ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ಖಂಡಿಸಿ ಎಐಡಿವೈಒ, ಎಐಎಂಎಸ್‌ಎಸ್ ಹಾಗೂ ಎಐಡಿಎಸ್‌ಒ ಸಂಘಟನೆಗಳು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದವು.
ನಗರದ ಗುಂಡಿ ಸರ್ಕಲ್‌ನಲ್ಲಿ ಸೇರಿದ ಸಂಘಟನೆಗಳ ಕಾರ್ಯಕರ್ತರು ಮಾನವೀಯತೆ ಹಾಗೂ ಸಂಸ್ಕೃತಿ ಉಳಿಸಿ ಎಂಬ ಘೋಷಣೆ ಕೂಗಿದರು.
ಎಐಎಂಎಸ್‌ಎಸ್ ಜಿಲ್ಲಾಧ್ಯಕ್ಷೆ ಜ್ಯೋತಿ ಕುಕ್ಕುವಾಡ ಮಾತನಾಡಿ, ಕೊಲ್ಕತ್ತಾ ಘಟನೆ ಅನಾಗರಿಕತೆ, ಕುಸಂಸ್ಕೃತಿ ಪ್ರತಿನಿಧಿಸುತ್ತದೆ. ಇದು ಇಡೀ ದೇಶಕ್ಕೆ ಹಾಗೂ ಮನುಷ್ಯತ್ವಕ್ಕೆ ಮಾಡಿದ ಅಪಮಾನ. ಇಂತಹ ಅನ್ಯಾಯದ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಕಟ್ಟಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದರು.
ಎಐಡಿವೈಒ ಸಂಚಾಲಕ ಎಸ್.ಪರಶುರಾಮ್ ಮಾತನಾಡಿ, ಘಟನೆಯು ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತದ್ದಾಗಿದೆ. ಸರ್ಕಾರ ಇಂತಹ ಅಪರಾಧ ತಡೆಗಟ್ಟಬೇಕು ಹಾಗೂ ದೌರ್ಜನ್ಯಕಾರರಿಗೆ ನಿದರ್ಶನೀಯ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಎಐಎಂಎಸ್‌ಎಸ್ ಅಖಿಲ ಭಾರತ ಉಪಾಧ್ಯಕ್ಷೆ ಬಿ.ಆರ್. ಅಪರ್ಣ ಮಾತನಾಡಿ, ಮಹಿಳೆಯರ ಮೇಲಿನ ಅತ್ಯಾಚಾರ ದೌರ್ಜನ್ಯ ಪ್ರಕರಣಗಳಿಗೆ ಸಮಾಜದಲ್ಲಿ ಬೇರೂರಿರುವ ಪುರುಷ ಪ್ರಧಾನ ಮನೋಭಾವ ಹಾಗೂ ಅಪರಾಧಿಗಳಿಗೆ ಶಿಕ್ಷೆಯಾಗದಿರುವುದು ಪ್ರಮುಖ ಕಾರಣವಾಗಿದೆ ಎಂದರು.
ಎಐಡಿಎಸ್‌ಒ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ, ಕೆನರಾ ಬ್ಯಾಂಕ್ ಅಸೋಷಿಯೇಷನ್‌ನ ಎಸ್.ಆರ್. ಹಿರೇಮಠ ಎಂಎಸ್‌ಸಿ ಮೆಡಿಕಲ್ ಸರ್ವಿಸ್ ಸೆಂಟರ್‌ನ ರಾಜ್ಯ ಕಾರ್ಯದರ್ಶಿ ಡಾ. ವಸುದೇಂದ್ರ ಮಾತನಾಡಿದರು.
ಎಐಕೆಕೆಎಂಎಸ್ ಸಂಘಟನೆಯ ಅಖಿಲ ಭಾರತ ಉಪಾಧ್ಯಕ್ಷ ಟಿ.ಎಸ್. ಸುನೀತ್‌ಕುಮಾರ್, ತಿಪ್ಪೇಸ್ವಾಮಿ, ಬನಶ್ರೀ, ನಾಗಜ್ಯೋತಿ, ಮಮತಾ, ಬಿ.ಎನ್. ರತ್ನಮಾಲಾ ಹಾಗೂ ವೖದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.