ಜಿಲ್ಲೆ

ಶ್ರೀನಿವಾಸ ನಗರ ಹಳ್ಳಿಯಲ್ಲಿ ನಾಳೆ ಹಸಿರೋತ್ಸವ ಸಹಜ ಕೃಷಿ ಸಂವಾದ

ಡಿ. ಎಂ. ಮಹೇಶ್

ದಾವಣಗೆರೆ: ಐಕಾಂತಿಕ ಬುಡಕಟ್ಟು ಸಮುದಾಯ ವತಿಯಿಂದ ಸಹಜ ಕೃಷಿಗೆ ಉತ್ತೇಜನ ನೀಡುವ ದಿಸೆಯಲ್ಲಿ ಹರಿಹರ ತಾಲೂಕಿನ ಶ್ರೀನಿವಾಸ ನಗರ ಹಳ್ಳಿಯಲ್ಲಿ ಹಸಿರೋತ್ಸವ ಕಾರ್ಯಕ್ರಮ ಜೂ. 2ರಂದು ನಡೆಯಲಿದೆ.
ಕಾರ್ಯಕ್ರಮದಲ್ಲಿ ಸಹಜ ಕೃಷಿ ಕುರಿತಂತೆ ಐಕಾಂತಿಕ ಸಮುದಾಯದ ಸದಸ್ಯರು ಅನುಭವಗಳನ್ನು ಹಂಚಿಕೊಳ್ಳುವು. ರೈತರ ಜತೆ ಸಂವಾದ ನಡೆಯಲಿದೆ. ಪಾರಂಪರಿಕ ಬೀಜಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಐವಾಂತಿಕ ಸಂಸ್ಥೆ ಸಂಸ್ಥಾಪಕ ರಾಘವ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಹಜ ಕೃಷಿಕರು ಹಾಗೂ ಪಾರಂಪರಿಕ ಬೀಜಗಳ ಸಂರಕ್ಷಣೆಯಲ್ಲಿ ತೊಡಗಿರುವ ಕತ್ತಲಗೆರೆ ಗ್ರಾಮದ ವಸಂತಮ್ಮ, ರಾಣೆಬೆನ್ನೂರು ತಾಲೂಕಿನ ಮುದೇನೂರು ಗ್ರಾಮದ ಶಂಕರಗೌಡ- ಸುನೀತಾ ದಂಪತಿ, ಹೊನ್ನಾಳಿ ತಾಲೂಕು ಯರೆಹಳ್ಳಿ ಗ್ರಾಮದ ಹನುಮಂತಪ್ಪ- ಪರಿಮಳಾ ಭಾಗವಹಿಸುವರು. ತಾರಸಿ ಕೈ ತೋಟದ ಬಗ್ಗೆ ಬೆಂಗಳೂರಿನ ಶೈಲಜಾ ಅನಿಸಿಕೆ ಹಂಚಿಕೊಳ್ಳುವರು.
ವಿವಿಧ ರೀತಿಯ ತರಕಾರಿ ತಳಿಗಳು, ಅಕ್ಕಿ, ಸಿರಿಧಾನ್ಯಗಳು, ಬೇಳೆಕಾಳುಗಳ ಮಾರಾಟ, ಸಾಂಪ್ರದಾಯಕ ತರಕಾರಿ, ನೈಸರ್ಗಿಕ ಮಾವು ಸೇರಿ ಇತರ ಹಣ್ಣ್ಣುಗಳು, ಹಾಗೂ ಭತ್ತದ ತಳಿಗಳ ಪ್ರದರ್ಶನ ಇರಲಿದೆ. ಬೀಜ ಹಾಗೂ ಗಿಡಗಳ ವಿನಿಮಯ ಇರಲಿದೆ. ಅಪರೂಪದ ಬೀಜ, ತಳಿ ಖರೀದಿಸಬಹುದು. ನೈಸರ್ಗಿಕ ಬಣ್ಣದ ಹತ್ತಿಯ ಉಡುಪುಗಳು, ಮಣ್ಣಿನ ಮಡಕೆ, ಮಕ್ಕಳ ಆಟಿಕೆಗಳು ಸಿಗಲಿವೆ. ಸಹಜ ಕೃಷಿ ಕುರಿತ ಪುಸ್ತಕಗಳು,
ಕುಂಬಾರಿಕೆ ಗಾಲಿ ಮೇಲೆ ಮಣ್ಣಿನ ಮಡಕೆ ಮಾಡುವ ಹಾಗೂ ಬಿಲ್ಲುಗಾರಿಕೆಗೆ ಅವಕಾಶ, ಕಾಗದದ ಕರಕುಶಲ ಅರಿವು,  ವಿಷಮುಕ್ತ ಆಹಾರೋತ್ಪನ್ನಗಳು ಸಿಗಲಿವೆ. ಆರೋಗ್ಯಕರ ಆಹಾರ ತಿನಿಸುಗಳೂ ಇಲ್ಲಿ ಸಿಗಲಿವೆ ಎಂದು ಹೇಳಿದರು.
ಪರಿಸರ ನೀತಿ ಕಥೆ, ದಾವಣಗೆರೆ ಜಿಲ್ಲೆಯ ಆರೋಗ್ಯ ಉದ್ಯಮ, ನೈಸರ್ಗಿಕ ಕಟ್ಟಡಗಳು, ವಿಷಮುಕ್ತ ಅಡುಗೆ ಪಾತ್ರೆಗಳು, ಕೈಗಾರೀಕೃತ ಹಾಲು, ಪ್ಲಾಸ್ಟಿಕ್ ಭೂತ, ಸ್ಯಾನಿಟರಿ ಪ್ಯಾಡ್‌ಗಳಿಗೆ ಸುಸ್ಥಿರ ಪರ್ಯಾಯಗಳು, ಕೈಗಾರೀಕೃತ ಮೊಟ್ಟೆ ಮತ್ತು ಮಾಂಸ, ಸಂಸ್ಕರಿಸಿದ ಸಕ್ಕರೆ ಮೊದಲಾದ ವಿಚಾರಗಳ ಬಗ್ಗೆ ತಜ್ಞರಿಂದ ಸಂವಾದ ಇರಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಿಟ್ಟೂರಿನ ಸುಜಿತ್ ಇಟ್ಟಿಗಿ, ಅಭಿಷೇಕ್, ಪಾಂಡುರಂಗ, ಕೆರೆಹಳ್ಳಿಯ ಹನುಮಂತಪ್ಪ ಇದ್ದರು.