ಜಿಲ್ಲೆ

ಮಕ್ಕಳಲ್ಲಿ ನೀಗಿಸಿ ಮೊಬೈಲ್ ವ್ಯಸನ   ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಮನವಿ

ದಾವಣಗೆರೆ: ಮೊಬೈಲ್ ಗೀಳಿನಿಂದ ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗಲಿದ್ದು ಒತ್ತಡವೂ ಹೆಚ್ಚಲಿದೆ. ಈ ವ್ಯಸನ ತಪ್ಪಿಸಬೇಕು ಎಂದು  ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಆಶಿಸಿದರು.
ವ್ಯಸನಮುಕ್ತ ದಿನಾಚರಣೆ, ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ರಾಮನಗರದ ಗಾಂಧಿಭವನದಲ್ಲಿ ಗುರುವಾರ ಏರ್ಪಡಿಸಿದ್ದ ವ್ಯಸನಮುಕ್ತ ಶಿಬಿರ ಮತ್ತು ಕ್ವಿಟ್ ಇಂಡಿಯಾ ಚಳವಳಿ ಒಂದು ನೆನಪು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ವ್ಯಸನಗಳಿಗೆ ಬಲಿಯಾಗದೆ ದೈಹಿಕ ಬೆಳವಣಿಗೆಗೆ ಪೂರಕ ಕ್ರೀಡೆ ಮತ್ತು ಮಾನಸಿಕ ಬೆಳವಣಿಗೆಗೆ ಬೇಕಾದ ಜ್ಞಾನಾರ್ಜನೆಗೆ ಒತ್ತು ಕೊಡಬೇಕು. ಮೊಬೈಲ್ ವ್ಯಸನ ಆರೋಗ್ಯಕ್ಕೆ ಅಪಾಯಕಾರಿಯಾಗಿದ್ದು ಕುತ್ತಿಗೆ, ಬೆನ್ನು, ಕೈ ನೋವು ಕೂಡ ಕಾಡಬಹುದು. ಅನವಶ್ಯಕ ಮೊಬೈಲ್ ಬಳಕೆಗೆ ಕಡಿವಾಣ ಹಾಕಬೇಕಿದೆ ಎಂದರು.
ಮಕ್ಕಳು ವ್ಯಸನಮುಕ್ತರಾಗಿ ಆರೋಗ್ಯಯುತ ಸಮಾಜ ನಿರ್ಮಾಣಕ್ಕಾಗಿ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಂಡು ತಮ್ಮ ದೈಹಿಕ ಹಾಗೂ ಮಾನಸಿಕ ವಿಕಸನಕ್ಕಾಗಿ ಸದಾ ಕ್ರಿಯಾಶೀಲರಾಗಿರಬೇಕು ಎಂದು ಹೇಳಿದರು.
ಜಿಲ್ಲಾಡಳಿತಕ್ಕೆ ಬರುವ ಎಲ್ಲ ಪುಸ್ತಕಗಳನ್ನು ಗಾಂಧಿ ಭವನದ ಗ್ರಂಥಾಲಯಕ್ಕೆ ನೀಡಲಾಗುತ್ತಿದೆ. ಓದುಗರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು.  ಸ್ಪರ್ಧಾತ್ಮಕ ಪರೀಕ್ಷೆ, ಸಾಹಿತ್ಯ ಪುಸ್ತಕಗಳನ್ನು ಓದಬೇಕು ಎಂದು ತಿಳಿಸಿದರು.
ಡಿಎಚ್‌ಒ ಡಾ.ಷಣ್ಮುಖಪ್ಪ ಮಾತನಾಡಿ ಪಾಶ್ಚಾತ್ಯ ಸಂಸ್ಕತಿ ಪ್ರಭಾವದಿಂದಾಗಿ ಇತ್ತೀಚೆಗೆ ವ್ಯಸನಗಳ ಪ್ರಮಾಣ ಹೆಚ್ಚಿದೆ. ಇದು ಆರಂಭದಲ್ಲಿ ಕುತೂಹಲ ಹುಟ್ಟಿಸಲಿದ್ದು, ನಂತರದಲ್ಲಿ ಪರಿಣಾಮ ತಿಳಿದುಬರಲಿದೆ. ತಂಬಾಕು ಜಗಿಯುವವರು ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆಗೆ ಬಂದಾಗ ತಪ್ಪು ಮಾಡಿದೆ ಎಂದು ಹೇಳುತ್ತಾರೆ. ದೇಶ ಸದೃಢವಾಗಲು ಆರೋಗ್ಯವಂತ ಮಾನವ ಸಂಪನ್ಮೂಲ ಇರಬೇಕೆಂದು ತಿಳಿಸಿದರು.
ಕ್ವಿಟ್ ಇಂಡಿಯಾ ಚಳುವಳಿ ಕುರಿತು ಉಪನ್ಯಾಸ ನೀಡಿದ  ನಿವೃತ್ತ ಪ್ರಾಂಶುಪಾಲ ದಾದಾಪೀರ್  ನವಿಲೇಹಾಳ್, ಸ್ವಾತಂತ್ರ್ಯ ಚಳವಳಿಯಲ್ಲಿ ಮಹಾತ್ಮ ಗಾಂಧೀಜಿ ಪಾತ್ರ ಪ್ರಮುಖವಾಗಿದೆ. ಭಾರತ ಸ್ವಾತಂತ್ರ್ಯ ಗಳಿಸಲು 90 ವರ್ಷಗಳ ಅವಧಿ ಬೇಕಾಯಿತು. ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದಾಗಿನಿಂದ ಅಸಹಕಾರ ಚಳವಳಿ ಮೂಲಕ ತೀವ್ರ ಸ್ವರೂಪ ಪಡೆದುಕೊಂಡಿತು ಎಂದು ವಿವರಿಸಿದರು.
ಕಾನೂನುಭಂಗ ಚಳುವಳಿ, ಉಪ್ಪಿನಸತ್ಯಾಗ್ರಹ ನಂತರ ಅಂತಿಮ ಘಟ್ಟವಾಗಿ ಮಾಡು ಇಲ್ಲವೇ ಮಡಿ, ಭಾರತ ಬಿಟ್ಟು ಚಳವಳಿಯಿಂದಾಗಿ ದೇಶಕ್ಕೆ ಸ್ವಾತಂತ್ರ್ಯ ನೀಡಲೇಬೇಕಾದ ಸ್ಥಿತಿಗೆ ತಲುಪಿದ್ದರಿಂದ ಕ್ವಿಟ್ ಇಂಡಿಯಾ ಚಳವಳಿ ಇತಿಹಾಸದಲ್ಲೇ ಮಹತ್ವದ್ದಾಗಿದೆ ಎಂದರು.
 ಇಂದಿನ ವಿದ್ಯಾರ್ಥಿಗಳು ದೇಶದ ಸ್ವಾತಂತ್ರ್ಯ ಇತಿಹಾಸದ ಬಗ್ಗೆ ತಿಳಿದುಕೊಳ್ಳುವ ಮೂಲಕ ದೇಶದ ಬಗೆಗಿನ ಗೌರವ ಭಾವನೆ ಬೆಳೆಸಿಕೊಂಡು ಸಾರ್ವಜನಿಕ ಆಸ್ತಿ ಪಾಸ್ತಿ ರಕ್ಷಣೆ ಮಾಡಬೇಕೆಂದರು.
ಮನೋವೈದ್ಯ ಡಾ.ಮರುಳಸಿದ್ದಪ್ಪ ಮಾತನಾಡಿ ಮದ್ಯ ಮತ್ತು ಮಾದಕ ವಸ್ತುಗಳಿಂದಾಗಿ ವ್ಯಕ್ತಿಗತವಾಗಿ ಮತ್ತು ಸಾಮಾಜಿಕವಾಗಿ ಸಾಕಷ್ಟು ನಷ್ಟವಾಗಲಿದೆ. ವ್ಯಸನಮುಕ್ತಿಗೆ ಚಿಕಿತ್ಸೆ ಇದೆ. ವ್ಯಸ ಮುಕ್ತರಾಗಿಸಲು ಚಿಗಟೇರಿ ಜಿಲ್ಲಾಸ್ಪತ್ರೆ ಮತ್ತು ಎಸ್.ಎಸ್. ಮತ್ತು ಬಾಪೂಜಿ ಆಸ್ಪತ್ರೆಯಲ್ಲಿ ಮನೋವೈದ್ಯರಿದ್ದು ಚಿಕಿತ್ಸೆ ಪಡೆಯಬಹುದು ಎಂದರು.
ಡಿಡಿಪಿಯು ಕರಿಸಿದ್ದಪ್ಪ, ಜಿಲ್ಲಾ ಮುಖ್ಯ ಗ್ರಂಥಾಲಯಾಧಿಕಾರಿ ಪಿ.ಆರ್. ತಿಪ್ಪೇಸ್ವಾಮಿ, ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಮಂಜುನಾಥ ಪಾಟೀಲ್, ಪದವಿ ಪೂರ್ವ ಶಿಕ್ಷಣ ಇಲಾಖೆ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಪ್ರದೀಪ್‌ಕುಮಾರ್, ಗ್ರಾಮ ಸ್ವರಾಜ್ ಅಭಿಯಾನದ ಆವರಗೆರೆ ರುದ್ರಮುನಿ, ಜಿಲ್ಲಾ ಸ್ವಾತಂತ್ರ್ಯ ಯೋಧರ ಉತ್ತರಾಧಿಕಾರಿಗಳ ಸಂಘದ ಅಧ್ಯಕ್ಷ ಐಗೂರು ತಿಮ್ಮಣ್ಣ, ರೈತ ಮುಖಂಡರಾದ ತೇಜಸ್ವಿ ಪಟೇಲ್ ಇದ್ದರು.
ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ  ಇಲಾಖೆ, ಚಿಗಟೇರಿ ಜಿಲ್ಲಾಸ್ಪತ್ರೆ, ಎನ್ಸೆಸ್ಸೆಸ್, ಭಾರತ ಸೇವಾದಳ, ಗ್ರಾಮ ಸ್ವರಾಜ್ ಅಭಿಯಾನ ಸಹಯೋಗದಲ್ಲಿ ಕಾರ್ಯಕ್ರಮ ಏರ್ಪಾಡಾಗಿತ್ತು. ವಾರ್ತಾ ಇಲಾಖೆ ಅಧಿಕಾರಿ ಬಿ. ಧನಂಜಯ ಸ್ವಾಗತಿಸಿದರು. ಎನ್ನೆಸ್ಸೆಸ್ ಜಿಲ್ಲಾ ಕಾರ್ಯಕ್ರಮ ಸಂಯೋಜನಾಧಿಕಾರಿ ನಾಗರಾಜ್ ಕಾರ್ಯಕ್ರಮ ನಿರ್ವಹಿಸಿದರು.