ಜಿಲ್ಲೆ

ಕಲಾಸೇವೆಗೆ ಸಂದ ಅಕಾಡೆಮಿ ಗೌರವ  ನೀಲಗುಂದ ಬಸವನಗೌಡರ ಮಾಗದ ಉತ್ಸಾಹ

ಡಿ. ಎಂ. ಮಹೇಶ್

ಡಿ.ಎಂ.ಮಹೇಶ್, ದಾವಣಗೆರೆ
ವಯಸ್ಸು ಎಪ್ಪತ್ತೊಂದು. ನಾಟಕ ಎಂದರೆ ಸಾಕು ಇವರ ಮನಸ್ಸು ಇಪ್ಪತ್ತೊಂದರ ಹುಡುಗನಂತೆ ಕುಣಿದಾಡುತ್ತದೆ! ಲೆಕ್ಕವಿಲ್ಲದಷ್ಟು ರಂಗ ಪ್ರಯೋಗಗಳಿಗೆ ಹಾರ್ಮೋನಿಯಂ, ಕೀಬೋರ್ಡ್ ನುಡಿಸಿದವರು. ಸಂಗೀತ ಸಂಯೋಜನೆ ಜತೆಗೆ ನಾಟಕ ನಿರ್ದೇಶನದಲ್ಲೂ ಸೈ ಎನಿಸಿಕೊಂಡವರು. ಎಂಟನೇ ತರಗತಿ ಓದಿದ್ದರೂ ಏಳು ನಾಟಕಗಳನ್ನು ಬರೆದು ಹುಬ್ಬೇರುವಂತೆ ಮಾಡಿದವರು.
ದಾವಣಗೆರೆ ಯಲ್ಲಮ್ಮನಗರ ನಿವಾಸಿ ನೀಲಗುಂದ ಬಸವನಗೌಡ ಇದರ ಕಥಾನಾಯಕ. ಇವರ 58 ವರ್ಷದ ಕಲಾಸೇವೆಗೆ ಕರ್ನಾಟಕ ನಾಟಕ ಅಕಾಡೆಮಿಯಿಂದ 2023-24ನೇ ಸಾಲಿನ ವಾರ್ಷಿಕ ಪ್ರಶಸ್ತಿ ಅರಸಿ ಬಂದಿದೆ. ತಡವಾಗಿಯಾದರೂ ಗೌರವ ಸಂದಿರುವುದಕ್ಕೆ ಮನೆಯಲ್ಲೂ ಸಂತೋಷದ ಲಯ ಮೂಡಿದೆ.
ಹರಪನಹಳ್ಳಿ ತಾಲೂಕಿನ ನೀಲಗುಂದ ಮೂಲದ ಅಜ್ಜ ಬಸವನಗೌಡ ಶ್ರೀಶೈಲ ಮಲ್ಲಿಕಾರ್ಜುನ ನಾಟಕ ಸಂಘ ಹುಟ್ಟಿಹಾಕಿ, ನಟನೆ-ನಿರ್ದೇಶನ ಎರಡರಲ್ಲೂ ಗಮನ ಸೆಳೆದರು. ಅವರಿಂದ ಪ್ರೇರಿತ ನೀಲಗುಂದ ಬಸವನಗೌಡ ಕೂಡ 12ನೇ ವಯಸ್ಸಿನಿಂದಲೇ ನಾಟಕದ ಹುಚ್ಚು ಬೆಳೆಸಿಕೊಂಡರು.
ಪ್ರಗತಿಪರ ಕೃಷಿಕ ಈಶ್ವರಗೌಡ- ವೀರಮ್ಮ ದಂಪತಿಯ ಮಗನಾದ ನೀಲಗುಂದ ಬಸವನಗೌಡ ಬಯಸಿದ್ದರೆ ದೊಡ್ಡ ಹಿಡುವಳಿದಾರ  ಆಗಬಹುತ್ತೀನೋ. ತಾತನ ಕಾಲದಲ್ಲಿದ್ದ 180 ಎಕರೆ, ಕಾಲಕ್ರಮೇಣ ಹಂಚಿಕೆಯಾಗಿ ಇವರಿಗೆ ಸಿಕ್ಕಿದ್ದು ಹತ್ತು ಎಕರೆ. ಅದೆಲ್ಲವನ್ನೂ, ತನ್ನನ್ನು ನಂಬಿದ್ದ 30 ಮಂದಿ ಕಲಾವಿದರಿಗಾಗಿ ಮಾರಿ ಬರಿಗೈಯಲ್ಲೇ ನಾಟಕಗಳನ್ನು ನಡೆಸುತ್ತಲೇ ಜೀವನ ಸಾಗಿಸುತ್ತಿರುವ ಅಪ್ಪಟ ರಂಗಪ್ರೇಮಿ.
ಕಂದಗಲ್ ಹುನಮಂತರಾಯರ ಬಡತನದ ಭೂತ ನಾಟಕದಲ್ಲಿ ಹಾರ್ಮೋನಿಯಂ ವಾದಕರಾಗಿ ಪದಾರ್ಪಣೆ ಮಾಡಿದ ಬಸವನಗೌಡ ದಾವಣಗೆರೆಯಲ್ಲದೆ ಸುಮಾರು 8 ಜಿಲ್ಲೆಗಳಲ್ಲಿ ಹಳ್ಳಿ-ಹಳ್ಳಿ ಸುತ್ತಿ ಜನರಲ್ಲಿ ನಾಟಕದ ಅಭಿರುಚಿ ಬೆಳೆಸಿದ್ದಾರೆ. ಮೈಸೂರು ದಸರಾ, ಹಂಪಿ, ಲಕ್ಕುಂಡಿ ಉತ್ಸವ, ನೆರೆಯ ಆಂಧ್ರಪ್ರದೇಶದಲ್ಲೂ ನಾಟಕದ ರುಚಿ ಉಣಬಡಿಸಿದ್ದಾರೆ.
ಇಲ್ಲಿನ ಕೆಬಿಆರ್ ಡ್ರಾಮಾ ಕಂಪನಿ, ಜಯಲಕ್ಷ್ಮೀ ನಾಟಕ ಸಂಘ, ಕಮ್ಮತಗಿಯ ಶ್ರೀ ಹುಚ್ಚೇಶ್ವರ ನಾಟ್ಯ ಸಂಘ, ಗುಡಗೇರಿಯ ಶ್ರೀ ಗುರು ಸಂಗಮೇಶ್ವರ ನಾಟ್ಯ ಸಂಘ, ನರೇಗಲ್‌ನ ಶ್ರೀ ಸಿದ್ದಲಿಂಗೇಶ್ವರ ನಾಟ್ಯ ಸಂಘ, ಚಿತ್ತರಗಿಯ ಶ್ರೀ ಕುಮಾರೇಶ್ವರ ನಾಟ್ಯ ಸಂಘ, ಚಿತ್ರದುರ್ಗದ ಶ್ರೀ ಕುಮಾರೇಶ್ವರ ನಾಟ್ಯ ಸಂಘ, ಮಂಗಳೂರಿನ ಶ್ರೀ ನಂದಿಕೇಶ್ವರ ನಾಟ್ಯ ಸಂಘ, ಜೇವರ್ಗಿಯ ಶ್ರೀ ಗುರು ವಿಶ್ವಾರಾಧ್ಯ ನಾಟ್ಯ ಸಂಘ, ಶ್ರೀ ವಿಶ್ವ ಜ್ಯೋತಿ ಪಂಚಾಕ್ಷರ ನಾಟ್ಯ ಸಂಘಗಳಲ್ಲಿ ಕೆಲಸ ಮಾಡಿದ್ದಾರೆ.
ಇವರ ಕುಟುಂಬವೇ ರಂಗಭೂಮಿಯ ಸೇವೆ ಧಾರೆಯೆರೆದಿದೆ. ಪತ್ನಿ ಸಾವಿತ್ರಮ್ಮ, ಮಕ್ಕಳಾದ ಮಂಜುಳಾ, ಸುಜಾತಾ ಕೂಡ ರಂಗನಟಿಯರಾಗಿ ಬದುಕಿನ ಬಂಡಿಗೆ ಸಾಥ್ ನೀಡಿದ್ದಾರೆ. ‘ನಾಟಕದ ಗೀಳಿಗಾಗಿ ಎಲ್ಲ ಕಳೆದುಕೊಂಡವರು ನನ್ನಪ್ಪ. ಅವರ ಪರಿಶ್ರಮಕ್ಕೆ ತಡವಾಗಿಯಾದರೂ ಯಶಸ್ಸು ಸಿಕ್ಕಿದ್ದಕ್ಕೆ ಸಂತೋಷವಿದೆ’ ಎನ್ನುವ ಮಗಳು ಸುಜಾತಾ ಸದ್ಯಕ್ಕೆ ರಂಗ ನಿವೃತ್ತಿ ಪಡೆದಿಲ್ಲ.
ಬಸವನಗೌಡರ ನಿರ್ದೇಶನದ ಎಚ್ಚರ ತಂಗಿ ಎಚ್ಚರ, ಸೊಸೆ ತಂದ ಸೌಭಾಗ್ಯ ಮೊದಲಾದ ನಾಟಕಗಳು ಹೆಚ್ಚು ಪ್ರದರ್ಶನ ಕಂಡಿವೆ. ತವರಿನ ಸಿರಿ, ಕಟುಕನ ಕುರಿ, ಧರ್ಮಯುದ್ಧದಲ್ಲಿ ಜಯ ಸಾಧಿಸಿದ ಹುಲಿ ಮೊದಲಾದ ನಾಟಕಗಳನ್ನು ರಚಿಸಿ ಪ್ರಯೋಗಕ್ಕಿಳಿಸಿದ್ದಾರೆ. ನಾಟಕ ಟಿಬಿ ಕಾಯಿಲೆ ಇದ್ದಂಗೆ. ಬೇರೆ ಕೆಲಸ ಮಾಡಲಾಗದು.  ಸ್ವಾಭಿಮಾನ ಕೂಡ ಅಡ್ಡವಾಗಿದೆ ಎಂದೆನ್ನುವ ಬಸವನಗೌಡ ರಂಗಭೂಮಿ ತಾಯಿ ನನಗೆ ಎಲ್ಲವನ್ನೂ ಕೊಟ್ಟಿದ್ದಾಳೆ. ಇದಕ್ಕೆ ಸಾವಿಲ್ಲ ಎಂದು ಘಂಟಾಘೋಷವಾಗಿ ಹೇಳುತ್ತಾರೆ. ಕೈಕಾಲು ಗಟ್ಟಿ ಇರುವವರೆಗೂ ರಂಗ ಸೇವೆ ಮಾಡುತ್ತೇನೆ ಎಂದೂ ಶಪಥ ಮಾಡುತ್ತಾರೆ.
--
ನನಗೆ ಪ್ರಶಸ್ತಿ ಸಿಕ್ಕಿದ್ದಕ್ಕೆ ಸಂತೋಷವಿದೆ. ದಾವಣಗೆರೆಯಲ್ಲಿ ಅನೇಕ ಹಿರಿಯ ಕಲಾವಿದರು ಎಲೆಮರೆಯ ಕಾಯಿಯಂತಿದ್ದಾರೆ. ಯಾರ ಬೆಂಬಲವಿಲ್ಲದ ಇಂಥವರಿಗೆ ಅವಕಾಶ ಸಿಗಬೇಕು. ರಾಜ್ಯೋತ್ಸವ ಪ್ರಶಸ್ತಿ, ಅಕಾಡೆಮಿ ಗೌರವ ಸಿಗಬೇಕೆಂಬುದೇ ನನ್ನಾಸೆ.
ನೀಲಗುಂದ ಬಸವನಗೌಡ
ರಂಗ ನಿರ್ದೇಶಕ.
---