ದಾವಣಗೆರೆ : ನಗರದ ಹಳೇಪೇಟೆ ಶ್ರೀ ವೀರಭದ್ರೇಶ್ವರ ಸ್ವಾಮಿ ಗುಗ್ಗಳ ಅಪಾರ ಭಕ್ತರ ಸಮ್ಮುಖದಲ್ಲಿ ಬುಧವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ದೇಗುಲದ ಆವರಣವನ್ನು ತೋರಣ, ಬಾಳೆಕಂದು, ತೆಂಗಿನ ಗರಿ, ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ದೇವಸ್ಥಾನದ ಮುಂಭಾಗದಲ್ಲಿ ಅಗ್ನಿಕುಂಡ ನಿರ್ಮಿಸಲಾಗಿತ್ತು. ವಾದ್ಯಗಳ ಸದ್ದು ಮೊಳಗುತ್ತಿತ್ತು.
ಎಲ್ಲೆಲ್ಲೂ ವೀರಭದ್ರ ದೇವರ ಸ್ಮರಣೆ. ಮಹಿಳೆಯರು, ಮಕ್ಕಳು ಸೇರಿ ಕುಟುಂಬದ ಸದಸ್ಯರೊಂದಿಗೆ ಭಕ್ತರು ಆಗಮಿಸಿದ್ದರು.
ಬೆಳಗ್ಗೆ ರುದ್ರಾಭಿಷೇಕ ನಡೆಯಿತು. ನಿಶಾನಿ ಹರಾಜಿನ ನಂತರ ಸಂಪ್ರದಾಯದಂತೆ ಭಕ್ತರು ಕೆಂಡ ಹಾಯ್ದರು. ಕೆಲವರು ಅಕ್ಕಪಕ್ಕದ ಕಟ್ಟಡಗಳ ಮೇಲೆ ನಿಂತು ಆ ದೃಶ್ಯವನ್ನು ಕಣ್ತುಂಬಿಕೊಂಡರು. ಅದಾದ ನಂತರ ಪುಷ್ಪಾಲಂಕೃತ ಪಲ್ಲಕ್ಕಿಯ ಉತ್ಸವ ನೆರವೇರಿತು. ಇದೇ ಸಂದರ್ಭದಲ್ಲಿ ಭಕ್ತರು ಶಸ್ತ್ರ ಹಾಕಿಸಿಕೊಳ್ಳುವ ಸಂಪ್ರದಾಯ ಕಂಡುಬಂದಿತು. ಗುರುವಾರ ಸಂಜೆ 7ಕ್ಕೆ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವ ನಡೆಯಲಿದೆ.
..