ದಾವಣಗೆರೆ : ವ್ಯಕ್ತಿಯ ಅಂತರಂಗದಲ್ಲಿ ಪರಿವರ್ತನೆಗೊಂಡು, ದೇಶದ ಬೆಳವಣಿಗೆ ಹಾಗೂ ವಿಶ್ವ ಶಾಂತಿಯ ಗುರಿಯೊಂದಿಗೆ ಜೀವನ ಸಾಗಿಸಬೇಕು ಎಂದು ಹೊರನಾಡು ಶ್ರೀ ಆದಿಶಕ್ತಾತ್ಮಕ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಶ್ರೀ ಭೀಮೇಶ್ವರ ಜೋಶಿ ಹೇಳಿದರು.
ನಗರದ ದೇವರಾಜ ಅರಸು ಬಡಾವಣೆ ‘ಎ’ ಬ್ಲಾಕ್‌ನಲ್ಲಿರುವ ಶ್ರೀಮಾತಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಶನಿವಾರ, ಪ್ರತಿಷ್ಠಾಪನೆ ರಜತ ಮಹೋತ್ಸವ ಮತ್ತು ರಥೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ನಮ್ಮೊಳಗೇ ಇರುವ ದೇವರ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಸಂಸ್ಕಾರವಂತರಾಗಿ, ಧಾರ್ಮಿಕ ಕಾರ್ಯಗಳಲ್ಲಿ ತೊಡಗುವ ಮೂಲಕ ನೆಮ್ಮದಿಯನ್ನು ಕಂಡುಕೊಳ್ಳುವ ಜತೆಗೆ ಸಮಾಜದ ಹಿತವನ್ನು ಬಯಸಬೇಕು ಎಂದು ತಿಳಿಸಿದರು.
ದೇವಸ್ಥಾನಗಳು ಸಮಾಜದ ಸರ್ವಾಂಗೀಣ ಬೆಳವಣಿಗೆಯ ಶ್ರದ್ಧಾ ಕೇಂದ್ರಗಳಾಗಿವೆ. ಮನೆಯಲ್ಲಿ ನಡೆಯುವ ಪೂಜೆಗೂ, ದೇಗುಲಗಳಲ್ಲಿ ನಡೆಯುವ ಆಚರಣೆಗಳಿಗೂ ವ್ಯತ್ಯಾಸವಿದೆ. ಇಲ್ಲಿ ಸಮಷ್ಟಿಯ ಕಲ್ಪನೆ, ಎಲ್ಲರಿಗೂ ಒಳಿತಾಗಲಿ ಎಂಬ ಪ್ರಾರ್ಥನೆ ಮಾಡಲಾಗುತ್ತದೆ ಎಂದರು.
ದೇವರು ಎಲ್ಲಿದ್ದಾನೆ, ಹೇಗಿದ್ದಾನೆ ಎಂದು ಹೇಳುವುದು ಕಷ್ಟ. ಅದು ನಮ್ಮ ಅನುಭವಕ್ಕೆ ಬರುವ ವಿಷಯವಾಗಿದೆ. ಪರಮಾತ್ಮನ ದಿವ್ಯ ದರ್ಶನ ನಮ್ಮ ಕಡೆಗೇ ಆಗಲಿ ಎಂಬ ಉದ್ದೇಶದಿಂದ ದೇವಸ್ಥಾನಗಳಿಗೆ ಹೋಗುತ್ತೇವೆ ಎಂದು ಹೇಳಿದರು.
ಚಂಚಲವಾದ ಮನಸ್ಸನ್ನು ಹಿಡಿದಿಟ್ಟು ಏಕಾಗ್ರತೆ ಮೂಡಿಸಲು ದೇಗುಲಗಳು ಸಹಕಾರಿಯಾಗಿವೆ. ನಾವು ಬಾಗಿದರೆ ಭಗವಂತನ ಅನುಗ್ರಹವಾಗುತ್ತದೆ. ಯಾವುದರ ಕಡೆಗೆ ನಾವು ವಾಲಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಬಹಳಷ್ಟು ದೇವಸ್ಥಾನಗಳಲ್ಲಿ ವಿಜೃಂಭಣೆಯಿಂದ ರಥೋತ್ಸವ ಇನ್ನಿತರ ಧಾರ್ಮಿಕ ಕಾರ್ಯಗಳಲ್ಲಿ ಭಕ್ತರು ಭಾಗಿಯಾಗುತ್ತಾರೆ. ಆ ಕಾರ್ಯಕ್ರಮಗಳು ಮುಗಿದ ನಂತರ ಅತ್ತ ಕಡೆ ಸುಳಿಯುವುದಿಲ್ಲ. ಹಾಗೆ ಆಗಬಾರದು, ಆಡಳಿತ ಮಂಡಳಿಯವರೊಂದಿಗೆ ಕೈಜೋಡಿಸಿ ಸೇವೆ ಮಾಡಬೇಕು ಎಂದು ಹೇಳಿದರು.
ನಾವು ಸರಿಯಾಗಿದ್ದರೆ, ಸಂಸ್ಕಾರ ಬೆಳೆಸಿಕೊಂಡರೆ ಸಂಸಾರದಲ್ಲೂ ಬದಲಾವಣೆಯಾಗುತ್ತದೆ, ಅಂಥ ಕುಟುಂಬಗಳಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಅದರ ಲಾಭ ದೇಶಕ್ಕೆ ದೊರೆಯುತ್ತದೆ ಎಂದು ತಿಳಿಸಿದರು.