ದಾವಣಗೆರೆ : ಜಿಲ್ಲೆಯಲ್ಲಿ ಅಂದಾಜು 20 ಕೋಟಿ ರೂ. ಯೋಜನಾ ವೆಚ್ಚದಲ್ಲಿ 7 ಕೈಗಾರಿಕಾ ಘಟಕಗಳ ಸ್ಥಾಪನೆಗೆ ಜಿಲ್ಲಾಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಅನುಮೋದನೆ ದೊರಕಿದೆ.
ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ಸಮಿತಿಯ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ ಒಪ್ಪಿಗೆ ನೀಡಲಾಯಿತು.
ನೇಕಾರರ ವಿಶೇಷ ಪ್ಯಾಕೇಜ್ ಯೋಜನೆಯ ವಿಶೇಷ ಘಟಕ ಮತ್ತು ಗಿರಿಜನ ಉಪ ಯೋಜನೆಯಡಿ ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದ 6 ಸಣ್ಣ ಮತ್ತು ಅತಿ ಸಣ್ಣ ಘಟಕಗಳನ್ನು ಸಾರಥಿ-ಕುರುಬರಹಳ್ಳಿ, ಹನಗವಾಡಿ ಕೈಗಾರಿಕಾ ಪ್ರದೇಶ, ಕರೂರು ಕೈಗಾರಿಕಾ ಪ್ರದೇಶ, ಹರ್ಲಾಪುರ ಇನ್ನಿತರ ಕಡೆಗಳಲ್ಲಿ ಸ್ಥಾಪಿಸಲು ಪ್ರಸ್ತಾವನೆಯನ್ನು ಸಭೆಯ ಮುಂದಿಡಲಾಯಿತು.
ಅವುಗಳಲ್ಲಿ ವಿದ್ಯುತ್ ಮಗ್ಗಗಳು, ಸಿದ್ಧ ಉಡುಪು ಘಟಕಗಳೂ ಇದ್ದು, 280ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಸೃಜನೆಗೆ ಅವಕಾಶವಿದೆ. ಅವುಗಳ ಸ್ಥಾಪನೆಗೆ ಬೇಕಾಗುವ ಭೂಮಿ, ಕಟ್ಟಡ, ವಿದ್ಯುತ್ ಹಾಗೂ ನೀರಿನ ಬೇಡಿಕೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಮೀಸಲಾದ ಈ ಘಟಕಗಳು ತಲಾ 2 ರಿಂದ 3 ಕೋಟಿ ರೂ. ಒಳಗಿನ ಯೋಜನಾ ವೆಚ್ಚದಿಂದ ಕೂಡಿದ್ದು ಅವುಗಳಿಗೆ ಶೇ. 90ರ ವರೆಗೂ ಸಬ್ಸಿಡಿ ನೀಡಲು ಅವಕಾಶವಿದೆ.
ಲೋಕಿಕೆರೆ ರಸ್ತೆಯ ಕೆ.ಐ.ಎ.ಡಿ.ಬಿ ಕೈಗಾರಿಕಾ ಪ್ರದೇಶದಲ್ಲಿ 4.55 ಕೋಟಿ ರೂ. ವೆಚ್ಚದಲ್ಲಿ ಸೈಂಟಿಫಿಕ್ ಆರ್ಗ್ಯಾನಿಕ್ಸ್ ಘಟಕ ಸ್ಥಾಪಿಸಲು ಅನುಮೋದನೆ ನೀಡಲಾಯಿತು. ಈ ಘಟಕದಿಂದ 53 ಉದ್ಯೋಗ ಸೃಜನೆಯ ಅವಕಾಶಗಳಿವೆ.
ಸಾರಥಿ-ಕುರುಬರಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 182 ಎಕರೆಯಷ್ಟು ಜಾಗ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸ್ಥಾಪನೆಗೆ ಲಭ್ಯವಿದೆ. ಇದುವರೆಗೆ 500 ಅರ್ಜಿಗಳು ಬಂದಿವೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಡಿ.ಕೆ. ಲಿಂಗರಾಜ್ ತಿಳಿಸಿದರು.
ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮಾತನಾಡಿ, ಕೈಗಾರಿಕಾ ಪ್ರದೇಶಗಳಿಗೆ ರಸ್ತೆ ಸಂಪರ್ಕ ಉತ್ತಮವಾಗಿರುವಂತೆ ನೋಡಿಕೊಳ್ಳಬೇಕು. ತೆರಿಗೆ ಪಾವತಿಸುವ ಉದ್ಯಮಿಗಳಿಗೆ ಸೌಲಭ್ಯ ಕಲ್ಪಿಸುವ ಬಗ್ಗೆ ಮಹಾನಗರ ಪಾಲಿಕೆ ಗಮನ ಹರಿಸಬೇಕು ಎಂದು ಸೂಚನೆ ನೀಡಿದರು.
ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆಯಡಿ ಆಗಿರುವ ಪ್ರಗತಿಯ ವಿವರಗಳನ್ನು ಅಧಿಕಾರಿಗಳು ನೀಡಿದರು.