ದಾವಣಗೆರೆ : ಜಾನಪದ 64 ವಿದ್ಯೆಗಳಿಗೆ ತಾಯಿಬೇರು. ಶಿಕ್ಷಣದ ಮೂಲಕ ಇಂದಿನ ಮಕ್ಕಳಿಗೆ ಅದರ ಜ್ಞಾನವನ್ನು ನೀಡುವ ಅಗತ್ಯವಿದೆ. ಲೋಕಾನುಭವದ ಈ ನಿಧಿಯ ಬಗ್ಗೆ ಪ್ರಾಥಮಿಕ ಹಂತದಿಂದಲೇ ಪರಿಚಯಿಸಬೇಕು.
ಮಾರ್ಚ್ 4 ಮತ್ತು 5ರಂದು ಚನ್ನಗಿರಿ ತಾಲೂಕು ಹರನಹಳ್ಳಿ-ಕೆಂಗಾಪುರದಲ್ಲಿ ನಡೆಯುವ ಜಿಲ್ಲಾಮಟ್ಟದ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಾನಪದ ಕವಿ ಯುಗಧರ್ಮ ರಾಮಣ್ಣ ಅವರ ಅಭಿಪ್ರಾಯವಿದು.
ವಿಜಯವಾಣಿಯೊಂದಿಗೆ ಮಾತನಾಡಿದ ಅವರು, ಕನ್ನಡ ಭಾಷೆ, ಸಾಹಿತ್ಯ, ಜಾನಪದದ ಬಗ್ಗೆ ಮನದಾಳವನ್ನು ಬಿಚ್ಚಿಟ್ಟರು.
ಈಗಿರುವ ವ್ಯವಸ್ಥೆಯಲ್ಲಿ ಹೊಟ್ಟೆ ಹೊರೆಯುವ ಶಿಕ್ಷಣವನ್ನು ನೋಡುತ್ತಿದ್ದೇವೆ, ಆದರೆ ಜಾನಪದ ನೆತ್ತಿ ಹೊರೆಯುವ ಶಿಕ್ಷಣವಾಗಿದೆ. ಇದರ ಬಗ್ಗೆ ಸರ್ಕಾರ, ಸಮಾಜ, ಶಿಕ್ಷಣ ತಜ್ಞರಿಗೆ ಒಲವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಾಹಿತ್ಯ ಚಳವಳಿಗಳಿಗೆ ಹೆಚ್ಚಿನ ಆಯಸ್ಸಿಲ್ಲ, ಕಾಲಕ್ರಮೇಣ ಅವು ನಶಿಸಿ ಹೋಗುತ್ತವೆ. ಆದರೆ ಜಾನಪದ ಹಾಗಲ್ಲ, ಅದರ ತಾಕತ್ತಿನಿಂದ ನಿರಂತರವಾಗಿರುತ್ತದೆ. ಸಾಹಿತ್ಯದಲ್ಲಿ ಜಾನಪದವನ್ನು ಪ್ರತ್ಯೇಕವಾಗಿ ಕಾಣುತ್ತಾರೆ, ಇದು ಸರಿಯಲ್ಲ ಎಂದು ಹೇಳಿದರು.
ಜನಪದರು ನಿಜವಾದ ಕವಿಗಳು. ಅವರು ಶಾಲೆಗೆ ಹೋದವರಲ್ಲ, ಸ್ವಾನುಭವದಿಂದ ಸಾಹಿತ್ಯ ರಚನೆಯಲ್ಲಿ ತೊಡಗಿದವರು. ಅವರ ಭಾಷೆ, ಸಾಹಿತ್ಯವೇ ನಿಜವಾದುದು ಎಂದು ತಿಳಿಸಿದರು.
‘ಆಡು ಭಾಷೆಯಲ್ಲಿ ಆಕಾಶವನ್ನು ಅಳೆಯಬಹುದು, ಅದರಿಂದ ಜ್ಞಾನದ ಉತ್ಪತ್ತಿಯಾಗುತ್ತದೆ. ಬೇರೆ ಭಾಷೆಗಳಿಂದ ವ್ಯವಹಾರ ಮಾಡಬಹುದು, ಆದರೆ ಮಾತೃಭಾಷೆಗೆ ಇರುವ ಶಕ್ತಿ ಅವುಗಳಿಗಿಲ್ಲ’ ಎಂದರು.
ನಾವೀಗ ನಮ್ಮತನ ಕಳೆದುಕೊಂಡಿದ್ದೇವೆ. ಮಮ್ಮಿ, ಡ್ಯಾಡಿ, ಆಂಟಿ ಎನ್ನುವ ಸಂಸ್ಕೃತಿ ಬೆಳೆಯುತ್ತಿದೆ, ಪರಕೀಯ ವ್ಯಾಮೋಹಕ್ಕೆ ಒಳಗಾಗಿದ್ದೇವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ 5-10 ವರ್ಷಗಳಲ್ಲಿ ಕನ್ನಡದ ತಿಥಿ ಮಾಡುವ ಪರಿಸ್ಥಿತಿ ಬರಬಹುದು ಎಂದು ಆತಂಕ ವ್ಯಕ್ತಪಡಿಸಿ, ನಮ್ಮ ಭಾಷೆಯನ್ನು ಉಳಿಸಬೇಕಿದೆ ಎಂದು ಪ್ರತಿಪಾದಿಸಿದರು.
ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ಮಾಡುವುದರ ಬಗ್ಗೆ ನನಗೆ ಇಷ್ಟವಿಲ್ಲ, ಯಾವುದೇ ವ್ಯಕ್ತಿಗೆ ಅಲ್ಲ, ಕನ್ನಡ ಭಾಷೆಗೆ ಆ ಗೌರವ ಸಿಗಬೇಕು ಎಂದು ಅಭಿಪ್ರಾಯಪಟ್ಟರು.