ಜಿಲ್ಲೆ

ಹರಿಹರ ರೈಲು ನಿಲ್ದಾಣ ಪುನರ್ ನಿರ್ಮಾಣ

ರಮೇಶ ಜಹಗೀರದಾರ್

‘ಅಮೃತ ಭಾರತ್’ ಯೋಜನೆಯಡಿ ಇಂದು ಶಂಕುಸ್ಥಾಪನೆ
 ವಿಜಯವಾಣಿ ಸುದ್ದಿಜಾಲ ದಾವಣಗೆರೆ
 ‘ಅಮೃತ ಭಾರತ್’ ಯೋಜನೆಯಡಿ ಹರಿಹರ ರೈಲು ನಿಲ್ದಾಣ ಪುನರ್ ನಿರ್ಮಾಣ ಯೋಜನೆಗೆ ಭಾನುವಾರ ಶಂಕುಸ್ಥಾಪನೆ ನೆರವೇರಲಿದೆ.
 ಈ ಯೋಜನೆಯಡಿ ದೇಶದ 508 ರೈಲು ನಿಲ್ದಾಣಗಳನ್ನು ಪುನರ್ ನಿರ್ಮಾಣ ಮಾಡುವ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಅಂದು ಬೆಳಗ್ಗೆ 9.15ಕ್ಕೆ ವಿಡಿಯೋ ಕಾನ್‌ಫರೆನ್ಸ್ ಮೂಲಕ ಏಕ ಕಾಲದಲ್ಲಿ ಶಂಕುಸ್ಥಾಪನೆ ಮಾಡಲಿದ್ದಾರೆ.
 ಹರಿಹರ ರೈಲು ನಿಲ್ದಾಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಬಿ.ಪಿ. ಹರೀಶ್ ಇನ್ನಿತರ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಭಾಗವಹಿಸುವರು.
 ಈ ಯೋಜನೆಯಡಿ ಮೈಸೂರು ವಿಭಾಗದ 15 ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು ಗುರುತಿಸಲಾಗಿದ್ದು ಮೊದಲ ಹಂತದಲ್ಲಿ ಹರಿಹರ ಮತ್ತು ಅರಸೀಕೆರೆ ರೈಲು ನಿಲ್ದಾಣಗಳು ಆಯ್ಕೆಯಾಗಿವೆ.
 ದಿನಕ್ಕೆ ಸರಾಸರಿ 4886 ಪ್ರಯಾಣಿಕರು ಭೇಟಿ ನೀಡುವ ಈ ನಿಲ್ದಾಣವನ್ನು 25.2 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗುವುದು. ಈ ಯೋಜನೆಯಡಿ ನೂತನ ಬುಕಿಂಗ್ ಕಚೇರಿ, ವಿಶ್ರಾಂತಿ ಕೊಠಡಿಗಳ ನಿರ್ಮಾಣ, ಗ್ರಾನೈಟ್ ಮತ್ತು ಕಾಂಕ್ರಿಟ್ ಫ್ಲೋರಿಂಗ್, 2 ಮತ್ತು 4 ಚಕ್ರಗಳ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗುವುದು.
 ಪ್ಲಾೃಟ್‌ಫಾರ್ಮ್ ಉದ್ದಕ್ಕೂ ಶೆಲ್ಟರ್ ವ್ಯವಸ್ಥೆ, ಚರಂಡಿಗಳ ನಿರ್ಮಾಣ, ಪಾದಚಾರಿಗಳಿಗೆ ಮೇಲ್‌ಸೇತುವೆ, 1 ಲಿಫ್ಟ್, 2 ಎಸ್ಕಲೇಟರ್‌ಗಳು, ಪ್ಲಾೃಟ್‌ಫಾರ್ಮ್‌ಗಳಲ್ಲಿ ಶೌಚಗೃಹ, ಸಿಸಿಟಿವಿ ಸೌಲಭ್ಯ, ವೈಫೈ ವ್ಯವಸ್ಥೆ, ಬರುವ, ಹೋಗುವ ರೈಲುಗಳ ಮಾಹಿತಿ ಪ್ರದರ್ಶಿಸುವ ಎಲ್‌ಇಡಿ ಪರದೆಗಳನ್ನು ಅಳವಡಿಸುವುದು ಯೋಜನೆಯಲ್ಲಿ ಒಳಗೊಂಡಿದೆ.
 ...