ದಾವಣಗೆರೆ : ರಾಜ್ಯದಲ್ಲಿ ನೇಕಾರ ಸಮುದಾಯಗಳ ಅಭಿವೃದ್ಧಿ ನಿಗಮವನ್ನು ಮುಂಬರುವ ವಿಧಾನಸಭಾ ಚುನಾವಣೆಯ ಒಳಗಾಗಿ ಸ್ಥಾಪಿಸಬೇಕು ಎಂದು ಮಾಜಿ ಶಾಸಕ ಎಂ.ಡಿ. ಲಕ್ಷ್ಮೀನಾರಾಯಣ ಆಗ್ರಹಿಸಿದರು.
ಯಾದಗಿರಿ ಜಿಲ್ಲೆ ಮುದನೂರು ಮಹಾ ಸಂಸ್ಥಾನ ಮಠ ಟ್ರಸ್ಟ್ ಹಾಗೂ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದಿಂದ, ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಮುದಾಯ ಭವನದಲ್ಲಿ ಗುರುವಾರ ಆಯೋಜಿಸಿದ್ದ, ನೇಕಾರ ಸಮುದಾಯಗಳ ರಾಜ್ಯಮಟ್ಟದ ಸ್ನೇಹ ಸಮ್ಮಿಲನ ಸಮಾರಂಭದಲ್ಲಿ ಮಾತನಾಡಿದರು.
ನಮಗೆ ಸ್ಪಂದಿಸುವವರಿಗೆ ಸಮುದಾಯ ಬೆಂಬಲ ನೀಡಲಿದೆ. ಬೇಡಿಕೆ ಈಡೇರದಿದ್ದರೆ ಚುನಾವಣೆಯಲ್ಲಿ ಮತ ಚಲಾವಣೆ ಮಾಡುವುದಿಲ್ಲ ಎಂಬ ಸಂಕಲ್ಪ ಕೈಗೊಳ್ಳುವಂತೆ ತಿಳಿಸಿದರು.
ಸಮುದಾಯದ ಜನಸಂಖ್ಯೆ 60 ಲಕ್ಷಕ್ಕೂ ಹೆಚ್ಚಿದ್ದು ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. 9.3 ರಷ್ಟಿದ್ದೇವೆ. ಧಾರ್ಮಿಕ, ಶೈಕ್ಷಣಿಕ ಇನ್ನಿತರ ಕ್ಷೇತ್ರಗಳಲ್ಲಿ ಅಭಿವೃದ್ಧಿಯ ದೃಷ್ಟಿಯಿಂದ ನಿಗಮದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಇತರ ಸಮುದಾಯದ ಅಭಿವೃದ್ಧಿ ನಿಗಮಗಳಿಗೆ ಸರ್ಕಾರ ಸಾವಿರ ಕೋಟಿ ರೂ.ಗಳನ್ನು ನೀಡಿದೆ. ನಮ್ಮ ಜನಸಂಖ್ಯೆಗೆ ತಕ್ಕಂತೆ 500 ಕೋಟಿ ರೂ.ಗಳನ್ನಾದರೂ ನಿಗಮಕ್ಕೆ ಮೀಸಲಿಡಬೇಕು ಎಂದು ಒತ್ತಾಯಿಸಿದರು.
ಇದು ಭಿಕ್ಷೆಯಲ್ಲ, ನಮ್ಮ ಹಕ್ಕಾಗಿದೆ. ಮಠಗಳು, ವಿದ್ಯಾರ್ಥಿ ನಿಲಯಗಳ ಅಭಿವೃದ್ಧಿಗೆ ಸರ್ಕಾರದ ನೆರವಿನ ಅಗತ್ಯವಿದೆ ಎಂದು ತಿಳಿಸಿದರು.
ಮುದನೂರಿನಲ್ಲಿ ಮಠ ಕಟ್ಟಬೇಕಿದೆ. ಅದಕ್ಕೆ ಬೇಕಾದ ನಿವೇಶನಕ್ಕಾಗಿ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು. ಮಠದ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು.
ಸರ್ಕಾರದ ಅಂಕಿ ಅಂಶಗಳ ಪ್ರಕಾರ ನಮ್ಮ ಸಮುದಾಯದ ಜನಸಂಖ್ಯೆ ಕೇವಲ 5.70 ಲಕ್ಷ ಇದ್ದು, 29ನೇ ಸ್ಥಾನದಲ್ಲಿದ್ದೇವೆ. ಆದರೆ ನಮ್ಮ ನಿಜವಾದ ಬಲ ಎಷ್ಟಿದೆ ಎಂಬುದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕಿದೆ ಎಂದರು.
ನೇಕಾರ ಸಮಾಜದಲ್ಲಿ 29 ಪಂಗಡಗಳಿವೆ. 1462 ಜಾತಿಗಳು ನೇಕಾರಿಕೆ ವೃತ್ತಿಯಲ್ಲಿ ಬರುತ್ತವೆ. ಅವುಗಳಲ್ಲಿ ಹಿಂದುಳಿದ ವರ್ಗಗಳ 197 ಜಾತಿಗಳು ಸೇರಿವೆ ಎಂದು ಮಾಹಿತಿ ನೀಡಿದರು.