ದಾವಣಗೆರೆ : ವಿದ್ಯಾರ್ಥಿಗಳನ್ನು ಭವಿಷ್ಯದ ಶ್ರೇಷ್ಠ ಪ್ರಜೆಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ ಶಿಕ್ಷಕರಿಗೆ ನೈತಿಕ, ಆಧ್ಯಾತ್ಮಿಕ ಶಿಕ್ಷಣ ನೀಡುವ ಅಗತ್ಯವಿದೆ ಎಂದು, ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ದಾವಣಗೆರೆ ಕೇಂದ್ರದ ಮುಖ್ಯಸ್ಥೆ ಲೀಲಾಜಿ ಹೇಳಿದರು.
ಇಲ್ಲಿನ ಮಹಿಳಾ ಸೇವಾ ಸಮಾಜದ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ರಜತ ಮಹೋತ್ಸವ ಸಮಾರಂಭದಲ್ಲಿ ಶುಕ್ರವಾರ ಮಾತನಾಡಿದರು.
ಮಕ್ಕಳು ಹೇಳಿದ್ದನ್ನು ಕೇಳುವುದಕ್ಕಿಂತ ನಮ್ಮ ವರ್ತನೆಯನ್ನು ನೋಡಿ ಕಲಿಯುವುದೇ ಹೆಚ್ಚು. ಹಾಗಾಗಿ ಮೊದಲು ಶಿಕ್ಷಕರಿಗೆ ತರಬೇತಿ ನೀಡಿದರೆ ಅವರ ಮೂಲಕ ವಿದ್ಯಾರ್ಥಿಗಳಲ್ಲಿ ಮೌಲ್ಯಗಳನ್ನು ಬಿತ್ತಲು ಸಹಾಯಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ವಿನಯ, ಸಹನೆಗಳು ಮಾಯವಾಗಿವೆ. ವಿದ್ಯಾರ್ಥಿಗಳು ವಿಧ್ವಂಸಕ ಪ್ರವೃತ್ತಿಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಇದನ್ನು ಗಮನಿಸದೆ ಶಿಕ್ಷಕರು ತಮ್ಮ ಪಾಡಿಗೆ ತಾವು ಕೆಲಸ ಮಾಡುವುದು ಕಂಡುಬರುತ್ತದೆ. ಈ ಪರಿಸ್ಥಿತಿ ಬದಲಾಗಬೇಕಿದೆ. ಈ ನಿಟ್ಟಿನಲ್ಲಿ ತಮ್ಮ ಸಂಸ್ಥೆಯಿಂದ ಶಿಕ್ಷಕರಿಗೆ ಆಧ್ಯಾತ್ಮಿಕ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ಶಾಲೆಗಳಲ್ಲಿ ವಾರಕ್ಕೆ ಒಮ್ಮೆಯಾದರೂ ನೈತಿಕ ಶಿಕ್ಷಣ ನೀಡಬೇಕೆಂಬ ನಿಯಮವಿದೆ. ಆದರೆ ಅದು ಸರಿಯಾಗಿ ಪಾಲನೆಯಾಗುತ್ತಿಲ್ಲ. ಮಾತೃ ದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ ಎಂಬ ಮಾತಿದೆ. ಆದರೆ ಇಂದಿನ ಮಕ್ಕಳು ಆ ಗೌರವ ನೀಡುತ್ತಿಲ್ಲ. ಶಿಕ್ಷಕರೇ ಹೆದರಬೇಕಾದ ಸನ್ನಿವೇಶವಿದೆ ಎಂದು ತಿಳಿಸಿದರು.
ಪಾಲಕರ ಜವಾಬ್ದಾರಿಯೂ ಅಷ್ಟೇ ಮುಖ್ಯವಾಗಿದೆ. ಅವರೇ ಮೊಬೈಲ್‌ನಲ್ಲಿ ಕಳೆದುಹೋದರೆ ಮಕ್ಕಳಿಗೆ ಮಾರ್ಗದರ್ಶನ ನೀಡುವವರು ಯಾರು. ಮಕ್ಕಳನ್ನು ಮೊಬೈಲ್ ಮತ್ತು ಟಿವಿ ವ್ಯಾಮೋಹದಿಂದ ಹೊರ ತರಬೇಕು ಎಂದು ಕರೆ ನೀಡಿದರು.
ಬಾಲ್ಯದಲ್ಲೇ ಮಕ್ಕಳಿಗೆ ಒಳ್ಳೆಯ ಸಂದೇಶ ನೀಡುವ ಕಥೆಗಳನ್ನು ಹೇಳಬೇಕು. ಅವರಲ್ಲಿ ಸದ್ಗುಣಗಳನ್ನು ಬೆಳೆಸಬೇಕು, ಚಾರಿತ್ರೃ ನಿರ್ಮಾಣ ಮಾಡಬೇಕು. ಓದಿ ಹಣ ಸಂಪಾದನೆ ಮಾಡಬೇಕು, ಇಂಜಿನಿಯರ್ ಅಥವಾ ವೈದ್ಯರಾಗಬೇಕು, ಮಕ್ಕಳು ವಿದೇಶಕ್ಕೆ ಹೋಗಬೇಕು ಎಂದಷ್ಟೇ ಸೀಮಿತವಾಗಿ ಆಲೋಚನೆ ಮಾಡದೆ ವ್ಯಕ್ತಿತ್ವ ನಿರ್ಮಾಣದ ಕಡೆಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.