ಜಿಲ್ಲೆ

ಮತದಾನದ ಬಗ್ಗೆ ಜಾಗೃತಿ, ತರಬೇತಿ ಕಾರ್ಯಕ್ರಮ

reporterctd

ದಾವಣಗೆರೆ : ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮತದಾನ ಪ್ರಕ್ರಿಯೆಯ ಬಗ್ಗೆ ಜಾಗೃತಿ ಮೂಡಿಸಿ ತರಬೇತಿ ನೀಡುವ ಕಾರ್ಯಕ್ರಮ ದಾವಣಗೆರೆ ದಕ್ಷಿಣ ಮತ್ತು ಉತ್ತರ ವಿಧಾನಸಭಾ ಕ್ಷೇತ್ರಗಳಲ್ಲಿ ಮಂಗಳವಾರದಿಂದ ಆರಂಭವಾಗಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಹೇಳಿದರು.
 ಪಾಲಿಕೆಯ ನೌಕರರ ಸಂಘದ ಕಟ್ಟಡದಲ್ಲಿ ಆರಂಭಿಸಲಾಗಿರುವ ವಿದ್ಯುನ್ಮಾನ ಮತಯಂತ್ರಗಳ ಪ್ರಾತ್ಯಕ್ಷಿಕೆ ಕೇಂದ್ರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
 ದಾವಣಗೆರೆ ಉತ್ತರ ಕ್ಷೇತ್ರ ವ್ಯಾಪ್ತಿಯ 136, ದಾವಣಗೆರೆ ದಕ್ಷಿಣದ 132 ಕಡೆಗಳಲ್ಲಿ 10 ದಿನಗಳ ಕಾಲ ಸೆಕ್ಟರ್ ಅಧಿಕಾರಿಗಳು ಜಾಗೃತಿ ಮೂಡಿಸಲಿದ್ದಾರೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.
 ಪಾಲಿಕೆಯ ನೌಕರರ ಸಂಘದ ಕಟ್ಟಡದಲ್ಲಿ ಆರಂಭಿಸಲಾಗಿರುವ ವಿದ್ಯುನ್ಮಾನ ಮತಯಂತ್ರಗಳ ಪ್ರಾತ್ಯಕ್ಷಿಕೆ ಕೇಂದ್ರದಲ್ಲಿ ತರಬೇತಿಯನ್ನು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಉದ್ಘಾಟಿಸಿದರು. ರಾಜಕೀಯ ಪಕ್ಷಗಳ ಮುಖಂಡರಿಗೆ ಜಾಗೃತಿ ಮೂಡಿಸಲಾಯಿತು ಎಂದು ಹೇಳಿದರು.
 ಅದೇ ರೀತಿ ಮಾಧ್ಯಮದವರು, ವಿವಿಧ ಸಂಘ ಸಂಸ್ಥೆಯವರು, ಪಾಲಿಕೆಗೆ ಬರುವ ಸಾರ್ವಜನಿಕರಿಗೆ ಬೆಳಗ್ಗೆ 10.30 ರಿಂದ ಸಂಜೆ 5.30ರ ವರೆಗೆ ತರಬೇತಿ ನಡೆಯಲಿದೆ. ಇದಕ್ಕಾಗಿ ಮಾಸ್ಟರ್ ಟ್ರೇನರ್‌ಗಳು ಇರಲಿದ್ದು ಇವಿಎಂಗಳನ್ನಿಡಲು ಭದ್ರತಾ ಕೊಠಡಿಯನ್ನು ಸ್ಥಾಪಿಸಲಾಗಿದೆ, ಪೊಲೀಸರನ್ನು ನಿಯೋಜಿಸಲಾಗಿದೆ ಎಂದರು.
 ಈ ತಿಂಗಳ ಅಂತ್ಯದಲ್ಲಿ ನಡೆಯುವ ಮೇಯರ್ ಚುನಾವಣೆಯ ಮತದಾರರ ಪಟ್ಟಿಗೆ ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯರನ್ನು ಸೇರ್ಪಡೆ ಮಾಡಿಲ್ಲ ಎಂದು ಆಕ್ಷೇಪ ವ್ಯಕ್ತವಾಗಿರುವ ಬಗ್ಗೆ ಪ್ರತಿಕ್ರಿಯಿಸಿ, ಆಯೋಗದ ನಿಯಮಗಳ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
 ಮಹಾನಗರ ಪಾಲಿಕೆಯ ಕೌನ್ಸಿಲ್ ಕಾರ್ಯದರ್ಶಿ ಕೆ. ಜಯಣ್ಣ, ಸಾರ್ವಜನಿಕ ಸಂಪರ್ಕ ಅಧಿಕಾರಿ ಜಿ.ಎಂ. ಸುನೀಲ್ ಇದ್ದರು.