ದಾವಣಗೆರೆ : ಮಲೇಬೆನ್ನೂರಿನ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ವಿಚಾರಣೆ ನಡೆಸುವಂತೆ ಸಂಸದ ಜಿ.ಎಂ. ಸಿದ್ದೇಶ್ವರ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಸಮಿತಿಯ ಸದಸ್ಯ ಎಂ. ಗುರುನಾಥ್ ವಿಷಯ ಪ್ರಸ್ತಾಪಿಸಿ, ಮಲೇಬೆನ್ನೂರಿನ ಸಂತೆ ಮೈದಾನದಲ್ಲಿ 38.75 ಲಕ್ಷ ರೂ. ವೆಚ್ಚದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲಾಗಿದ್ದು ಅದರಲ್ಲಿ ಬಹಳಷ್ಟು ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.
ಅಂದಾಜು ಪಟ್ಟಿಯಲ್ಲಿ ಹೆಚ್ಚಿನ ಬೆಲೆಯ ಸಾಮಗ್ರಿಗಳನ್ನು ತೋರಿಸಿ, ಕಟ್ಟಡಕ್ಕೆ ಕಡಿಮೆ ಬೆಲೆಯ ವಸ್ತುಗಳನ್ನು ಬಳಸಲಾಗಿದೆ. ಈ ಅಂದಾಜು ಪಟ್ಟಿಗೆ ಸಂಬಂಧಿಸಿದ ಅಧಿಕಾರಿಗಳು ಒಪ್ಪಿಗೆ ನೀಡಿದ್ದು ಏಕೆ ಎಂದು ಪ್ರಶ್ನಿಸಿದರು.
ಸಂಸದ ಸಿದ್ದೇಶ್ವರ ಮಾತನಾಡಿ, ಈ ರೀತಿಯ ಅವ್ಯವಹಾರಗಳಿಂದ ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ ಕೆಟ್ಟ ಹೆಸರು ಬರುತ್ತದೆ. ಈ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ತಿಳಿಸಿದರು.
ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಗಳಲ್ಲೂ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸುತ್ತಿರುವ ಬಗ್ಗೆ ದೂರುಗಳಿವೆ. ಇದರಲ್ಲಿ ಹಣದ ಅವ್ಯವಹಾರ ನಡೆದಿರುವ ಸಾಧ್ಯತೆಯಿದೆ. ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಿದರೆ ಹೀಗೆ ಆಗುವುದಿಲ್ಲ ಎಂದು ಜಿ.ಎಂ. ಸಿದ್ದೇಶ್ವರ ಹೇಳಿದರು.
ಇಂಥ ಪ್ರಕರಣಗಳಿಂದ ನಮಗೆಲ್ಲ ಕೆಟ್ಟ ಹೆಸರು ಬರುತ್ತದೆ. ಅಂಡರ್ ಬ್ರಿಡ್ಜ್ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ನನ್ನ ವಿರುದ್ಧ ಕೆಲವರು ಆರೋಪ ಮಾಡುತ್ತಾರೆ ಎಂದು ಅಸಮಾಧಾನ ಹೊರ ಹಾಕಿದರು.