ಜಿಲ್ಲೆ

ವಿಜಯ ಸಂಕಲ್ಪ ಯಾತ್ರೆ ಫಲಪ್ರದ

reporterctd

ದಾವಣಗೆರೆ : ರಾಜ್ಯದ 4 ದಿಕ್ಕುಗಳಿಂದ ಕೈಗೊಂಡ ವಿಜಯ ಸಂಕಲ್ಪ ಯಾತ್ರೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು.
 ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಾತ್ರೆಯು ಒಟ್ಟಾರೆ 5600 ಕಿ.ಮೀ. ಕ್ರಮಿಸಿದ್ದು 49 ಸಾರ್ವಜನಿಕ ರ‌್ಯಾಲಿ, 132 ರೋಡ್ ಶೋಗಳಾಗಿವೆ. 52 ಮಂದಿ ರಾಷ್ಟ್ರೀಯ ನಾಯಕರು ಭಾಗವಹಿಸಿದ್ದಾರೆ ಎಂದು ಮಾಹಿತಿ ನೀಡಿದರು.
 ಮಲೇ ಮಹದೇಶ್ವರ ಬೆಟ್ಟದಿಂದ ಆರಂಭವಾದ ಯಾತ್ರೆ 10 ಜಿಲ್ಲೆಗಳಲ್ಲಿ ಸಂಚರಿಸಿದೆ. ಬೆಳಗಾವಿಯ ನಂದಗಡದಿಂದ ಶುರುವಾದ ಯಾತ್ರೆ 8 ಜಿಲ್ಲೆಗಳಿಗೆ ಭೇಟಿ ನೀಡಿದೆ. ಬಸವಕಲ್ಯಾಣದಿಂದ ಆರಂಭವಾದ ಯಾತ್ರೆ 45 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿದೆ. ದೇವನಹಳ್ಳಿಯಿಂದ ಚಾಲನೆಗೊಂಡ ಯಾತ್ರೆ 8 ಜಿಲ್ಲೆಗಳಲ್ಲಿ ಹಾದು ಹೋಗಿದೆ ಎಂದು ವಿವರಿಸಿದರು.
 ವಿಜಯ ಸಂಕಲ್ಪ ಯಾತ್ರೆಗಳು ದಾವಣಗೆರೆ ತಲುಪಿದ್ದು, ನಗರದಲ್ಲಿ ಶುಕ್ರವಾರ ಅವುಗಳ ರೋಡ್ ಶೋ ನಡೆಸುವ ಚಿಂತನೆಯಿದೆ ಎಂದು ತಿಳಿಸಿದರು.
 ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ನಗರದಲ್ಲಿ ಆಯೋಜಿಸಲಾಗಿರುವ ವಿಜಯ ಸಂಕಲ್ಪ ಯಾತ್ರೆಯ ಮಹಾಸಂಗಮ ಸಮಾವೇಶವು ನಭೂತೋ ನಭವಿಷ್ಯತಿ ಎನ್ನುವ ರೀತಿಯಲ್ಲಿ ನಡೆಯಲಿದೆ. 150 ಸೀಟುಗಳನ್ನು ಗೆಲ್ಲಿಸಲು ಇದರಿಂದ ಅನುಕೂಲವಾಗಲಿದೆ ಎಂದರು.
 ಸಮಾವೇಶಕ್ಕೆ ದಾವಣಗೆರೆ ಜಿಲ್ಲೆಯಿಂದಲೇ 3 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ. ನೆರೆಯ ಚಿತ್ರದುರ್ಗ, ಶಿವಮೊಗ್ಗ, ಹಾವೇರಿ, ವಿಜಯನಗರ, ಬಳ್ಳಾರಿ, ಗದಗ ಜಿಲ್ಲೆಗಳಿಂದಲೂ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಬರಲಿದ್ದಾರೆ ಎಂದು ತಿಳಿಸಿದರು.
 ಶಾಸಕರಾದ ಎಸ್.ಎ. ರವೀಂದ್ರನಾಥ್, ಪ್ರೊ.ಎನ್. ಲಿಂಗಣ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಎಂ. ವೀರೇಶ ಹನಗವಾಡಿ, ಮಾಜಿ ಶಾಸಕ ಎಂ. ಬಸವರಾಜ ನಾಯ್ಕ, ಮುಖಂಡ ಡಿ.ಎಸ್. ಶಿವಶಂಕರ್ ಇದ್ದರು.
 ...