ದಾವಣಗೆರೆ : ಭದ್ರಾ ಬಲದಂಡೆ ನಾಲೆಯನ್ನು ಸೀಳಿ ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಗಳಿಗೆ ನೀರು ಪೂರೈಸುವ ಕಾಮಗಾರಿ ವಿರೋಧಿಸಿ ಜಿಲ್ಲಾ ರೈತರ ಒಕ್ಕೂಟ ಶನಿವಾರ ಕರೆ ನೀಡಿದ್ದ ದಾವಣಗೆರೆ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ವ್ಯಾಪಾರ, ವಹಿವಾಟು ಕೆಲವು ರಸ್ತೆಗಳಲ್ಲಿ ಮಾತ್ರ ಬಂದ್ ಆಗಿತ್ತು. ಶಾಲಾ ಕಾಲೇಜುಗಳ ಎಂದಿನಂತೆ ಕಾರ್ಯ ನಿರ್ವಹಿಸಿದವು. ಖಾಸಗಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳು, ಆಟೋಗಳ ಸಂಚಾರ ಎಂದಿನಂತಿತ್ತು. ಪೆಟ್ರೋಲ್ ಬಂಕ್‌ಗಳು ತೆರೆದಿದ್ದವು. ಹೋರಾಟದ ಕಾವು ಹೆಚ್ಚಾಗಿದ್ದ ಜಯದೇವ ವೃತ್ತ, ಮಹಾತ್ಮ ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತದ ಸುತ್ತಮುತ್ತ, ಅಶೋಕ ರಸ್ತೆ, ಹದಡಿ ರಸ್ತೆ, ಪಿ.ಬಿ. ರಸ್ತೆಗಳಲ್ಲಿ ಅಂಗಡಿ, ಮುಂಗಟ್ಟುಗಳು ಬಂದ್ ಆಗಿದ್ದವು. ಉಳಿದ ಕಡೆ ಜನಜೀವನ ಸಹಜವಾಗಿತ್ತು. ಹಳೆಯ ನಗರದಲ್ಲಿ ಮಂಡಿಪೇಟೆ, ಬಿನ್ನಿ ಕಂಪನಿ ರಸ್ತೆಯಲ್ಲಿ ಬಹಳಷ್ಟು ಅಂಗಡಿಗಳು ಮುಚ್ಚಿದ್ದವು. ಪ್ರತಿ ಶನಿವಾರ ಮಧ್ಯಾಹ್ನದ ನಂತರ ಮಾರುಕಟ್ಟೆಗೆ ರಜೆ ಇರುತ್ತದೆ. ಹಾಗಾಗಿ ಬಂದ್‌ನಿಂದ ಆ ಭಾಗದಲ್ಲಿ ಹೆಚ್ಚೇನೂ ಪರಿಣಾಮ ಆಗಲಿಲ್ಲ.