ಹೊನ್ನಾಳಿ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ ಎಚ್.ಎಸ್. ರುದ್ರೇಶ್ ಮಾತನಾಡಿದರು. ಎಂ.ಎಸ್. ರೇವಪ್ಪ, ಕೆ. ಶೇಖರಪ್ಪ, ಡಿ.ಎಂ. ನಿಜಲಿಂಗಪ್ಪ, ಗೋವಿಂದಪ್ಪ, ಕತ್ತಿಗೆ ನಾಗರಾಜ್, ರಾಜು.ಜಿ.ಎಚ್, ಕೆ.ಸಿದ್ದಪ್ಪ ಇತರರಿದ್ದರು. study
- ಡಾ. ರುದ್ರೇಶ್ ಸಲಹೆ
- ಸರ್ಕಾರಿ ಪ್ರೌಢಶಾಲೆಯಲ್ಲಿ ಕವಿಗೋಷ್ಠಿ
ಹೊನ್ನಾಳಿ: ಸಮಾಜವನ್ನು ತಿದ್ದುವ ಹಾಗೂ ಪ್ರಾಚೀನ ಸಂಸ್ಕೃತಿ, ಸಂಸ್ಕಾರಗಳು ಆಧುನಿಕ ಯುವ ಮನಸ್ಸುಗಳಲ್ಲಿ ಉಳಿಸುವ ರೀತಿಯಲ್ಲಿ ಕವಿಗಳು ಕವನ ರಚನೆಗೆ ಮುಂದಾಗಬೇಕು ಎಂದು ಸಾಹಿತಿ, ನಿವೃತ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್. ರುದ್ರೇಶ್ ಹೇಳಿದರು. study
ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ತಾಲೂಕು ಕಸಾಪ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಇವರುಗಳ ಸಹಯೋಗದಲ್ಲಿ ಆಯೋಜಿಸಿದ್ದ ಕವಿಗೋಷ್ಠಿಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು. ಕವನಗಳು ಮಾನವನ ಋಣಾತ್ಮಕ ಅಂಶಗಳನ್ನು ಬದಲಾಯಿಸಿ, ಧನಾತ್ಮಕ ಗುಣಗಳನ್ನು ರೂಪಿಸಿಕೊಳ್ಳುವಂತಿರಬೇಕು. ಓದುಗರ ಮನಸ್ಸಿನಲ್ಲಿ ಮತ್ತೆ ಮತ್ತೆ ಮೆಲುಕು ಹಾಕುವಂತಿದ್ದರೆ ಅಂತಹ ಕವನಗಳು ಸದಾ ನೆನಪಿನಲ್ಲಿರುತ್ತವೆ ಎಂದು ಹೇಳಿದರು.
ಪುಸ್ತಕಗಳ ಅಧ್ಯಯನದಿಂದ ಮಾತ್ರ ಜಗತ್ತಿನ ಪರಿಚಯ ಸಾಧ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗೀಳು ಓದುವ ಹವ್ಯಾಸದಿಂದ ಯುವಕರನ್ನು ದೂರ ಮಾಡುತ್ತಿದೆ ಎಂದು ವಿಷಾದಿಸಿದರು. ಲೇಖಕ, ನಿವೃತ್ತ ಉಪನ್ಯಾಸಕ ಯು.ಎನ್. ಸಂಗನಾಳಮಠ ಮಾತನಾಡಿ, ಉತ್ತಮ ಕವನ ರಚನೆಯಾಗಲು ಸತತ ಅಭ್ಯಾಸ ಮುಖ್ಯ. ಕವಿಯಲ್ಲಿ ಅಡಗಿರುವ ಅಗಾಧವಾದ ಅಕ್ಷರಗಳ ಸಂಪತ್ತು ಕವನಗಳಾಗಿ ಹೊರ ಹೊಮ್ಮಬೇಕು ಎಂದು ಹೇಳಿದರು. ಸಾಹಿತಿ ಡಾ. ಕೊಟ್ರೇಶ್ ಉತ್ತಂಗಿ ಮಾತನಾಡಿ, ವಾಸ್ತವಾಂಶಗಳಿಗೆ ಒತ್ತು ನೀಡಿ ಕವನಗಳನ್ನು ರಚಿಸಬೇಕು, ಪ್ರಸ್ತುತ ದಿನಗಳ ಯುದ್ಧಗಳು, ಪ್ರಕೃತಿ ಮೇಲೆ ದೌರ್ಜನ್ಯಗಳು, ರಾಜಕೀಯ ಮೇಲಾಟಗಳು ನಡೆಯುತ್ತಿದ್ದು ಇಂತಹ ವಿಷಯಗಳ ಮೇಲೆ ಬೆಳಕು ಚೆಲ್ಲುವ ಕೆಲಸವಾಗಬೇಕು ಎಂದರು.
ಉಪ ಪ್ರಾಚಾರ್ಯೆ ಕೆ. ರೇಣುಕಮ್ಮ ಕವಿಗೋಷ್ಠಿ ಉದ್ಘಾಟಿಸಿದರು. ತಾಲೂಕು ಕಸಾಪ ಅಧ್ಯಕ್ಷ ಜಿ. ಮುರಿಗಪ್ಪಗೌಡ ಪ್ರಾಸ್ತಾವಿಕ ನುಡಿದರು. ಗೋಷ್ಠಿಯಲ್ಲಿ ಕವಿಗಳಿಂದ ಕವನ ವಾಚನ ಮಾಡಲಾಯಿತು. ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಎಸ್. ರೇವಪ್ಪ, ಕಾರ್ಯದರ್ಶಿ ಕೆ. ಶೇಖರಪ್ಪ, ಖಜಾಂಚಿ ಡಿ.ಎಂ. ನಿಜಲಿಂಗಪ್ಪ, ಗೋವಿಂದಪ್ಪ, ನಿರ್ದೇಶಕ ಕತ್ತಿಗೆ ನಾಗರಾಜ್, ರಾಜು ಜಿ.ಎಚ್ ಇತರರಿದ್ದರು.