ದಾವಣಗೆರೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಪ್ರಗತಿ ಪರಿಶೀಲನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಮಾತನಾಡಿದರು. ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್, ಡಾ.ಎ.ಬಿ. ರಾಮಚಂದ್ರಪ್ಪ, ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಮಧುಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಇದ್ದರು.  
ದಾವಣಗೆರೆ

ಈ ವರ್ಷದಲ್ಲೇ ವಿಶ್ವ ಕನ್ನಡ ಸಮ್ಮೇಳನ

ಪ್ರಮುಖ ಮುಖ್ಯಾಂಶಗಳು

  • ಅಖಿಲ ಭಾರತ ಸಮ್ಮೇಳನ ನಡೆಯದಿದ್ದಲ್ಲಿ ಆದ್ಯತೆ ನೀಡಿ
  • ರಾಜ್ಯ ಸರ್ಕಾರಕ್ಕೆ ಪ್ರಾಧಿಕಾರ ತರಲಿದೆ ಒತ್ತಡ
  • ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಮಾಹಿತಿ
ದಾವಣಗೆರೆ: ಕನ್ನಡ ಸಾಹಿತ್ಯ ಪರಿಷತ್ತಿನ ಗೊಂದಲ ಹಿನ್ನೆಲೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯದಿದ್ದಲ್ಲಿ ಈ ವರ್ಷ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸುವಂತೆ ಸರ್ಕಾರಕ್ಕೆ ಒತ್ತಡ ತರಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ತಿಳಿಸಿದರು.
ದಾವಣಗೆರೆಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ದಾವಣಗೆರೆಯಲ್ಲಿ ಉದ್ದೇಶಿತ ವಿಶ್ವ ಕನ್ನಡ ಸಮ್ಮೇಳನ 9 ವರ್ಷದಿಂದ ನನೆಗುದಿಯಲ್ಲಿದೆ. ಈ ಬಾರಿಯಾದರೂ ಆಯೋಜಿಸುವಂತೆ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಿದ್ದು, ಪ್ರಾಧಿಕಾರ ಕೂಡ ಆಗ್ರಹಿಸಲಿದೆ ಎಂದು ತಿಳಿಸಿದರು.
ಪಾರಂಪರಿಕ ಶಾಲೆಗಳಾಗಿ ಮಾರ್ಪಾಡು
ರಾಜ್ಯದಲ್ಲಿ ಶತಮಾನ ಕಂಡ 3900 ಶಾಲೆಗಳಿವೆ. ಇದರಲ್ಲಿ ಮಿರ್ಜಾ ಇಸ್ಮಾಯಿಲ್, ದೇವರಾಜ ಅರಸು, ಕೆಂಗಲ್ ಹನುಮಂತಯ್ಯ ಮೊದಲಾದ ಮಹಾತ್ಮರು ಓದಿದ್ದಾರೆ. ಕನಿಷ್ಠ ಪಕ್ಷ ಇಂತಹ ಶಾಲೆಗಳನ್ನು ಪಾರಂಪರಿಕ ಶಾಲೆಗಳಾಗಿ ಉಳಿಸುವಂತೆಯೂ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.
ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ 8.5 ಲಕ್ಷ ಮಕ್ಕಳಲ್ಲಿ ಶೇ. 20ರಷ್ಟು ಅಂದರೆ 1.62 ಲಕ್ಷ ಮಕ್ಕಳು ಅನುತ್ತೀರ್ಣರಾಗಿರುವುದು ಗಂಭೀರ ವಿಚಾರವಾಗಿದೆ. ಈ ಬಗ್ಗೆ ಶಿಕ್ಷಣ ತಜ್ಞ ನಿರಂಜನಾರಾಧ್ಯ ಸೇರಿ ಪ್ರೌಢಶಾಲಾ ಶಿಕ್ಷಕರು ಒಳಗೊಂಡಂತೆ ತಯಾರಿಸಿದ ವರದಿಯನ್ನು ಇನ್ನು 10 ದಿನದಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗುತ್ತಿದೆ. ನಲಿ-ಕಲಿ ಯೋಜನೆ ವಿಫಲತೆಯ ಬಗ್ಗೆಯೂ ಅಧ್ಯಯನ ವರದಿ ಸಲ್ಲಿಸಲಾಗಿದೆ ಎಂದರು.
ರಾಜ್ಯದ 180 ಮದರಸಾಗಳಲ್ಲಿ ಪ್ರಾಥಮಿಕ ಕನ್ನಡ ಕಲಿಕಾ ಕೇಂದ್ರಗಳನ್ನು ಆರಂಭಿಸಲಾಗಿದ್ದು, 2026ರ ಮಾರ್ಚ್ ಅಂತ್ಯಕ್ಕೆ 1,200 ಮದರಸಾಗಳಿಗೆ ಇದನ್ನು ವಿಸ್ತರಿಸುವ ಗುರಿಯಿದ್ದು, ಇದರಿಂದ ಉರ್ದು ಶಾಲೆಗಳಲ್ಲಿ ಕನ್ನಡ ಕಲಿಕೆಗೆ ಅನುಕೂಲವಾಗಲಿದೆ. ಈ ಯೋಜನೆಗೆ ಅಲ್ಪಸಂಖ್ಯಾತರ ಇಲಾಖೆ ಮುಂದಾಗಿದೆ ಎಂದು ಮಾಹಿತಿ ನೀಡಿದರು.
ವಾಣಿಜ್ಯ, ಕೈಗಾರಿಕಾ ನಾಮಫಲಕಗಳಲ್ಲಿ ಸರ್ಕಾರದ ನಿಯಮದನ್ವಯ ಶೇ.60:40ರ ಅನುಪಾತದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು. ನಿಯಮ ಉಲ್ಲಂಘಿಸಿದ ಅಂಗಡಿ ಮುಂಗಟ್ಟುಗಳಿಂದ ಕಳೆದೊಂದು ವರ್ಷದಲ್ಲಿ ದಾವಣಗೆರೆ ಜಿಲ್ಲಾಡಳಿತ, ನಗರಪಾಲಿಕೆ 80 ಸಾವಿರ ರೂ. ದಂಡ ಸಂಗ್ರಹಿಸಿದ್ದು ಮಾದರಿ ಕೆಲಸ. ಇತರೆ ಜಿಲ್ಲೆಗಳಲ್ಲೂ ಈ ಬಗ್ಗೆ ಪ್ರಶ್ನಿಸುವ ಅವಕಾಶ ದಕ್ಕಿದೆ ಎಂದರು.
ಕನ್ನಡ ಅನುಷ್ಠಾನ ಕಾಯ್ದೆ ಶೀಘ್ರ ಜಾರಿ
ಇನ್ನು 2-3 ತಿಂಗಳಲ್ಲೇ ಸಮಗ್ರ ಕನ್ನಡ ಅನುಷ್ಠಾನ ವಿಧೇಯಕ-2022 ಕಾಯ್ದೆ ಆಗಿ ಮಾರ್ಪಡಲಿದ್ದು, ಕನ್ನಡ ಅನುಷ್ಠಾನದಲ್ಲಿ ನಿರ್ಲಕ್ಷಿಸುವ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಿ ನೇರ ಕಾನೂನು ಕ್ರಮ ಕೈಗೊಳ್ಳುವ ಅಧಿಕಾರ ಸಿಗಲಿದೆ. ಫೆ.11ಕ್ಕೆ ಈ ವಿಚಾರವಾಗಿ ಸಭೆ ನಡೆಯಲಿದೆ ಎಂದ ಅವರು, 31 ಜಿಲ್ಲೆಗಳಲ್ಲಿ ಕನ್ನಡ ಭಾಷಾ ಬಳಕೆ ಪ್ರಗತಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.
ವೈದ್ಯಕೀಯ ಕ್ಷೇತ್ರದಲ್ಲಿ ಹಂತ ಹಂತವಾಗಿ ಕನ್ನಡ ಅನುಷ್ಠಾನಗೊಳಿಸುವತ್ತ ಪ್ರಾಧಿಕಾರ ಚಿಂತನೆ ನಡೆಸಿದೆ. ವೈದ್ಯರು ಇಂಗ್ಲಿಷ್‌ನಲ್ಲಿ ಪ್ರಿಸ್ಕ್ರಿಕ್ಷನ್ ಬರೆದುಕೊಡದಂತೆ, ಆದಷ್ಟು ಕನ್ನಡದಲ್ಲೇ ಹೆಸರು ಬರೆಯುವಂತೆ ಸೂಚಿಸಲಾಗುತ್ತಿದೆ. ಮರಣಪ್ರಮಾಣ ಪತ್ರ ಹಾಗೂ ಮರಣೋತ್ತರ ಪರೀಕ್ಷೆ ವರದಿಯನ್ನೂ ಕನ್ನಡದಲ್ಲೇ ನೀಡಲು ಸಲಹೆ ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಖಾಸಗಿ ಶಾಲೆಗಳಲ್ಲಿ ನಾಡಗೀತೆ ಹಾಡಿಸದಿರುವ ದೂರುಗಳಿದ್ದು, ಜಿಲ್ಲಾಡಳಿತ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ಎಲ್ಲೆಡೆ ಜಾತಿ ಕೇಂದ್ರಿತ ಭವನಗಳು ಹೆಚ್ಚಿವೆ. ಚನ್ನಗಿರಿಯಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಹಣ ತೆಗೆದಿರಿಸಲು ಸರ್ಕಾರಕ್ಕೆ ಒತ್ತಡ ತರಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್, ಸದಸ್ಯರಾದ ಡಾ.ಎ.ಬಿ. ರಾಮಚಂದ್ರಪ್ಪ, ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಮಧುಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಇದ್ದರು.

ಮ್ಯಾಗ್ನೆಟ್ ಯೋಜನೆಯಿಂದ ಕನ್ನಡ ಶಾಲೆಗಳಿಗೆ ಮುಚ್ಚುವ ಆತಂಕವಿರುವ ಪ್ರಶ್ನೆಗೆ ‘ಕನ್ನಡ ಶಾಲೆಗಳನ್ನು ಮುಚ್ಚದಂತೆ ಪ್ರಾಧಿಕಾರ ಸರ್ಕಾರಕ್ಕೆ ಕಟು ಶಬ್ಧಗಳಲ್ಲಿ ಪತ್ರ ಬರೆದಿದೆ. ಈ ವಿಚಾರದಲ್ಲಿ ಜನರಿಂದ ನಿರೀಕ್ಷಿತ ಪ್ರೋತ್ಸಾಹ ಸಿಗುತ್ತಿಲ್ಲ. ಇಂಗ್ಲಿಷ್ ಪರವಾಗಿ ನನ್ನ ಕಚೇರಿಗೆ ಬಂದ ಕೆಲವರು ಬಂದು ಧರಣಿ ಕೂರುವುದಾಗಿ ಎಚ್ಚರಿಕೆ ನೀಡಿದರು. ನಾನೂ ಸಹ ಕನ್ನಡದ ಪರವಾಗಿ ವಿಧಾನಸೌಧದಲ್ಲಿ ಧರಣಿ ಕೂರುವುದಾಗಿ ಹೇಳಿದ್ದೆ’ ಎಂದು ಡಾ.ಪುರುಷೋತ್ತಮ ಬಿಳಿಮಲೆ ಉತ್ತರಿಸಿದರು.