ದಾವಣಗೆರೆ ಜಿಪಂ ಸಭಾಂಗಣದಲ್ಲಿ ಮಂಗಳವಾರ ಎಸ್ಸಿ-ಎಸ್ಟಿ ಆಯೋಗದಿಂದ ಹಮ್ಮಿಕೊಂಡಿದ್ದ, ಕುಂದುಕೊರತೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆಯೋಗದ ಅಧ್ಯಕ್ಷ ಡಾ.ಎಲ್. ಮೂರ್ತಿ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಇದ್ದರು.  
ದಾವಣಗೆರೆ

ಶೀಘ್ರವೇ ಅಂಬೇಡ್ಕರ್ ಭವನದ ಕಾಮಗಾರಿ

ಡಿ. ಎಂ. ಮಹೇಶ್

ಪ್ರಮುಖ ಮುಖ್ಯಾಂಶಗಳು

  • ಎಸ್ಸಿ-ಎಸ್ಟಿ ಆಯೋಗದ ಅಧ್ಯಕ್ಷ ಡಾ.ಎಲ್. ಮೂರ್ತಿ ಭರವಸೆ
  • ದಾವಣಗೆರೆ ಜಿಲ್ಲಾ ಪಂಚಾಯಿತಿಯಲ್ಲಿ ಕುಂದು ಕೊರತೆ ಸಭೆ
  • ಮದ್ಯದಂಗಡಿ ಹಾವಳಿ, ರುದ್ರಭೂಮಿ ಸಮಸ್ಯೆಗಳ ಅನಾವರಣ
ದಾವಣಗೆರೆ: ಶೀಘ್ರದಲ್ಲೇ ಜಿಲ್ಲಾ ಅಂಬೇಡ್ಕರ್ ಭವನದ ಕಾಮಗಾರಿ ಆರಂಭಿಸಲಾಗುತ್ತಿದ್ದು, ಜಯಂತ್ಯುತ್ಸವ ಬರುವವರೆಗೆ ಕಾಯುವುದಿಲ್ಲ ಎಂದು ಎಸ್ಸಿ-ಎಸ್ಟಿ ಆಯೋಗದ ಅಧ್ಯಕ್ಷ ಡಾ.ಎಲ್. ಮೂರ್ತಿ ಭರವಸೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಎಸ್ಸಿ-ಎಸ್ಟಿ ಆಯೋಗದಿಂದ ಹಮ್ಮಿಕೊಂಡಿದ್ದ, ಕುಂದುಕೊರತೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಭವನ ನಿರ್ಮಾಣಕ್ಕೆ ಭೂಮಿಪೂಜೆಯಾಗಿ ವರ್ಷವಾದರೂ ಕಾಮಗಾರಿ ಶುರುವಾಗಿಲ್ಲ. ಮತ್ತೊಂದು ಅಂಬೇಡ್ಕರ್ ಜಯಂತ್ಯುತ್ಸವವೇ ಬರಬೇಕಾ? ಎಂದು ಮುಖಂಡರಾದ ಆಲೂರು ಲಿಂಗರಾಜು, ಎಚ್.ಸಿ. ಗುಡ್ಡಪ್ಪ ಪ್ರಶ್ನಿಸಿದರು.
ಜಿಲ್ಲಾಡಳಿತ ಗುರುತಿಸಿದ ಒಂದೂವರೆ ಎಕರೆ ಜಾಗದಲ್ಲಿ ಭವನ ಕಾಮಗಾರಿ ಶುರುವಾಗಲಿದೆ. ಮಂಜೂರಾದ 5 ಕೋಟಿಯಲ್ಲಿ 4 ಕೋಟಿ ರೂ. ಬಿಡುಗಡೆಯಾಗಿದೆ. ಹೆಚ್ಚಿನ ಅನುದಾನಕ್ಕಾಗಿ ಆಯೋಗ ಮನವಿ ಮಾಡಲಿದೆ ಎಂದು ಮೂರ್ತಿ ಹೇಳಿದರು.
ಮೀಸಲಿಟ್ಟ ಅರ್ಧ ಎಕರೆ ಜತೆಗೆ ಖರಾಬು ಜಮೀನು ಸೇರಿ 1.5 ಎಕರೆ ಆಗಲಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು. ಅಲ್ಲಿನ ಹೈಟೆನ್ಷ್ಷೆನ್ ಮಾರ್ಗ ಪಾರ್ಕಿಂಗ್ ವ್ಯವಸ್ಥೆಗೆ ಬಳಕೆಯಾಗಲಿದೆ ಎಂಬ ಉತ್ತರ ಕೇಳಿಬಂದಿತು.
ಶಂಕರವಿಹಾರ ಬಡಾವಣೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ಅಕ್ಕಿ ಕಳ್ಳರನ್ನು ಜೀವದ ಹಂಗು ತೊರೆದು ಹಿಡಿದುಕೊಟ್ಟರೂ ಪೊಲೀಸರು ಕ್ರಮ ಕೈಗೊಳ್ಳಲಿಲ್ಲ. ಆಹಾರ ಇಲಾಖೆಯಡಿ 28 ಕೇಸ್ ಎದುರಿಸುತ್ತಿರುವ ಆರೋಪಿಗಳನ್ನು ಜೈಲಿಗೆ ಹಾಕದಿದ್ದರೆ ಅಕ್ರಮಕ್ಕೆ ಕಡಿವಾಣ ಹೇಗೆ? ಎಂದು ಲಿಂಗರಾಜ್ ಪ್ರಶ್ನಿಸಿದರು.
‘ಸುಪ್ರೀಂಕೋರ್ಟ್ ಆದೇಶದಂತೆ ನಮಗೆ ನೇರವಾಗಿ ಬಂಧಿಸಲು ಅವಕಾಶವಿಲ್ಲ’ ಎಂದು ಎಸ್ಪಿ ಉಮಾ ಪ್ರಶಾಂತ್ ಹೇಳಿದರು. ಈ ಬಗ್ಗೆ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸುವುದಾಗಿ ಅಧ್ಯಕ್ಷರು ಹೇಳಿದರು.
ಹಳೇ ಚಿಕ್ಕನಹಳ್ಳಿ ಬಡಾವಣೆ ನಿವಾಸಿಗಳು ಎಪಿಎಂಸಿ ಹಿಂಬದಿಯ ಹಳ್ಳದ ಪಕ್ಕ, ತಾತ್ಕಾಲಿಕ ಶೆಡ್‌ಗಳಲ್ಲಿ ವಾಸಿಸುತ್ತಿದ್ದು ಪ್ರವಾಹ ಇತರೆ ಸಮಸ್ಯೆ ಎದುರಿಸುದ್ದಾರೆ. ಹಿಂದಿನ ಡಿಸಿ ಅಂಜನ್‌ಕುಮಾರ್ ವಡ್ನಳ್ಳಿ ಬಳಿ ಮೀಸಲಿಟ್ಟಿದ್ದ ಜಾಗವನ್ನು ನಂತರ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ವಜಾ ಮಾಡಿದರು. ಈ ಜನರು ನರಕದಲ್ಲೇ ಬದುಕಬೇಕೆ ಎಂದು ನಿಂಗರಾಜ್ ಪ್ರಶ್ನಿಸಿದರು.
ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ದಲಿತರ ಶವಸಂಸ್ಕಾರಕ್ಕೆ ಸ್ಮಶಾನಭೂಮಿ ಇಲ್ಲ. ಬಿ.ಕಲಪನಹಳ್ಳಿಯಲ್ಲಿ ಹೆದ್ದಾರಿ ಪಕ್ಕದಲ್ಲೇ ಶವವೊಂದನ್ನು ಹೂಳಲಾಗಿದೆ ಎಂದು ಮುಖಂಡ ಎಚ್.ಸಿ. ಗುಡ್ಡಪ್ಪ ಸಭೆ ಗಮನ ಸೆಳೆದರು. ದಲಿತರಿಗೆ ಪಾಲಿಕೆಯಲ್ಲಿ ಮೀಸಲಿಟ್ಟ ಶೇ. 22.75ರ ಹಣದಲ್ಲಿ ದಾವಣಗೆರೆಯಲ್ಲಿ ಕೆಲಸವಾಗಿಲ್ಲ. ಈ ಹಣ ಹೋಗಿದ್ದೆಲ್ಲಿ? ಎಂದೂ ಪ್ರಶ್ನಿಸಿದರು.
ಪೌರಕಾರ್ಮಿಕರು ನಗರ ಸ್ವಚ್ಛಗೊಳಿಸಿ, ಬೇರ್ಪಡಿಸಿ ನೀಡಿದ ತ್ಯಾಜ್ಯವನ್ನು ಗುತ್ತಿಗೆದಾರರು ಉಚ್ಚಂಗಿದುರ್ಗದ ಕ್ವಾರಿಯಲ್ಲಿ ಹಾಕುತ್ತಿದ್ದು, ಅವರಿಗೆ ಜಿಲ್ಲಾಡಳಿತ ಬಿಲ್ ಮೊತ್ತ ನೀಡುತ್ತಿದೆ. ಈ ಬಗ್ಗೆ ಕೇಳಿದರೆ ‘ನನ್ನನ್ನೂ ಸೇರಿಸಿ ಲೋಕಾಯುಕ್ತರಿಗೆ ಮಾಹಿತಿ ಕೊಡಿ’ ಎಂದು ಡಿಸಿ ಹೇಳಿದ್ದಾಗಿ ಗುಡ್ಡಪ್ಪ ಅಸಮಾಧಾನ ಹೊರಹಾಕಿದರು. ‘ನಾನು ಹಾಗೆ ಹೇಳಿಲ್ಲ. ಅದು ವಿಜಯನಗರ ಜಿಲ್ಲೆ ವ್ಯಾಪ್ತಿಗೆ ಬರಲಿದೆ’ ಎಂದು ಡಿಸಿ ಹೇಳಿದರು.
ದಲಿತರ ಕಾಲನಿಗಳಲ್ಲಿನ ಮದ್ಯದಂಗಡಿಗಳನ್ನು ತೆರವುಗೊಳಿಸಬೇಕು. ಸುಳ್ಳು ಜಾತಿ ಪ್ರಮಾಣಪತ್ರ ಪಡೆದವರ ವಿರುದ್ಧ ಶಿಕ್ಷೆಯಾಗಬೇಕು. ಜಿಲ್ಲೆಯ ಕೆಲವು ಹಾಸ್ಟೆಲ್‌ಗಳಲ್ಲಿ ಕಳಪೆ ಆಹಾರ ನೀಡಲಾಗುತ್ತಿದೆ ಎಂದೂ ದೂರಿದರು.
ರಾಜಕೀಯ ಪ್ರಭಾವ ಇನ್ಯಾವುದೋ ಕಾರಣಕ್ಕೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಎಂಆರ್‌ಐ ಸ್ಕಾೃನಿಂಗ್ ಯಂತ್ರವಿಲ್ಲ. ಇದಕ್ಕಾಗಿ ಚಿತ್ರದುರ್ಗಕ್ಕೆ ತೆರಳಬೇಕಿದೆ. ಬಡವರು ಹೊರಗೆ 6 ಸಾವಿರ ರೂ. ವೆಚ್ಚ ಮಾಡಬೇಕಿದೆ ಎಂದು ಮುಖಂಡರೊಬ್ಬರು ಅಸಮಾಧಾನ ಹೊರಹಾಕಿದರು.
ಗಾಂಧಿನಗರದಲ್ಲಿ ಅಂಬೇಡ್ಕರ್ ಭವನ ಹಂದಿ-ನಾಯಿ ಗೂಡಾಗಿದೆ. ಮಕ್ಕಳಿಗೆ ಓದುವ ದೃಷ್ಟಿಯಿಂದ ಪಾಲಿಕೆ ವ್ಯವಸ್ಥೆ ಮಾಡಿಕೊಡಬೇಕು. ಬಾಬು ಜಗಜೀವನರಾಂ ಭವನ ಕೂಡ ಇದ್ದೂ ಇಲ್ಲದಂತಿದೆ ಎಂದು ರಘುಕುಮಾರ್ ದೂರಿದರು. ಈ ಭವನದಲ್ಲಿ ಕಚೇರಿ ಸ್ಥಳಾಂತರಿಸುವುದಾಗಿ ಅಧಿಕಾರಿಗಳು ತಿಳಿಸಿದರು.
ಶೇಖರಪ್ಪ ಮಾತನಾಡಿ ಹಿರೇಮಳಲಿ ಗ್ರಾಮದಲ್ಲಿ 300 ಎಕರೆ ಜಾಗದಲ್ಲಿ 1973-74ರಲ್ಲಿ ಪರಿಶೀಲನೆ ಬಳಿಕವೇ, ನಿವಾಸಿ ದಲಿತ, ಹಿಂದುಳಿದ ಜನರಿಗೆ ಸಾಗುವಳಿ ಭೂಮಿ ನೀಡಲಾಗಿತ್ತು. ದಾಖಲಾತಿ ಗೊಂದಲದಿಂದಾಗಿ ಬ್ಯಾಂಕ್‌ಗಳು ಸಾಲ ನೀಡುತ್ತಿಲ್ಲ. ಚನ್ನಗಿರಿ ತಹಸೀಲ್ದಾರ್ ಅವರು ಅರಣ್ಯ ಇಲಾಖೆ ಪರಿಶೀಲನೆ ನಡೆಸಲಿದೆ ಎಂದು ಹೇಳಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರದಲ್ಲಿ ನಿಗಮಗಳ ಅನುದಾನ ಬಿಡುಗಡೆಯಲ್ಲೂ ತಾರತಮ್ಯವಾಗಿದ್ದು, ಜಿಲ್ಲಾವಾರು ಹೆಚ್ಚು ಸಂಖ್ಯೆಯುಳ್ಳ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಕೆಲವು ಬ್ಯಾಂಕ್‌ಗಳು ಕೂಡ ದಲಿತರಿಗೆ ಸಾಲ ನೀಡುತ್ತಿಲ್ಲ ಎಂದು ರವಿಕುಮಾರ್ ಪ್ರಸ್ತಾಪಿಸಿದರು.
ನ್ಯಾಯಾಲಯ ಹಂತದಲ್ಲಿರುವ, ಎಸ್‌ಒಜಿ ಕಾಲನಿಯ ರಸ್ತೆ ಜಾಗವನ್ನು ನಿರಾಶ್ರಿತರಿಗೆ ಮನೆ ನಿರ್ಮಿಸಿಕೊಳ್ಳಲು ಪಾಲಿಕೆ ಅವಕಾಶ ಮಾಡಿಕೊಡುತ್ತಿದೆ ಎಂದು ಹೆಗ್ಗೆರೆ ರಂಗಪ್ಪ ದೂರಿದರು.
ಎಸ್ಸಿ-ಎಸ್ಟಿ ಜನರಿಗೆ ನೀಡುವ ಸಬ್ಸಿಡಿಯನ್ನು 5 ಲಕ್ಷ ರೂ.ನಿಂದ 10 ಲಕ್ಷ ರೂ.ಗೆ ಏರಿಸಬೇಕು. ಜಾತಿ ನಿಂದನೆ ಪ್ರಕರಣಗಳಲ್ಲಿ ನೊಂದವರಿಗೇ ನ್ಯಾಯ ಸಿಗುತ್ತಿಲ್ಲ. ಹೋರಾಟ ಹತ್ತಿಕ್ಕಲಾಗುತ್ತಿದೆ. ಟೆಂಡರ್ ದರದಲ್ಲಿ ದಲಿತ ಸಮಾಜಕ್ಕೆ ಅನ್ಯಾಯ ಆಗುತ್ತಿದೆ. ನಕಾಶೆ ದಾರಿ ಬಿಡುವಲ್ಲಿ ಸವರ್ಣೀಯರು ಅಡ್ಡಿಪಡಿಸುತ್ತಿದ್ದಾರೆ ಎಂದು ಮುಖಂಡರು ಹೇಳಿಕೊಂಡರು.
ಸಭೆಯಲ್ಲಿ ಆಯೋಗದ ಕಾರ್ಯದರ್ಶಿ ಡಾ. ಎಚ್.ಎಸ್. ಶಿವರಾಮು, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ಎಎಸ್ಪಿ ಪರಮೇಶ್ವರ ಹೆಗಡೆ ಇತರರಿದ್ದರು.

ಡೀಮ್ಡ್ ಅರಣ್ಯ ಪ್ರದೇಶದ ದಲಿತ ನಿವಾಸಿಗಳನ್ನು ಒಕ್ಕಲೆಬ್ಬಿಸದಿರಲು ಸುಪ್ರೀಂಕೋರ್ಟ್ ಆದೇಶವಿದೆ. ಹೀಗಾಗಿ ಒಕ್ಕಲೆಬ್ಬಿಸಲು ಆಯೋಗ ಅವಕಾಶ ಕೊಡುವುದಿಲ್ಲ. ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ ಅರಣ್ಯ ಇಲಾಖೆಯೊಂದಿಗೆ ಪತ್ರ ವ್ಯವಹಾರ ಮಾಡಲಾಗಿದ್ದು ಸಿಎಂ ಮೂಲಕ ಆದೇಶ ಕೊಡಿಸಲಾಗುವುದು.