ದಾವಣಗೆರೆ ಜಿಲ್ಲಾಡಳಿತ ಹಮ್ಮಿಕೊಂಡಿದ್ದ, ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಬಸವಂತಪ್ಪ ಉದ್ಘಾಟಿಸಿದರು. ರೇಣುಕಾ, ರೇಷಾ ್ಮಕೌಸರ್, ಮಧುಸೂದನ್, ಜಿ.ಕೊಟ್ರೇಶ್, ರವಿಚಂದ್ರ ಇದ್ದರು.
- ಜಿಲ್ಲಾಡಳಿತದಿಂದ ಸಂವಿಧಾನ ದಿನಾಚರಣೆ
- ಹಲವು ಸಮಸ್ಯೆಗಳಿಗೆ ಪರಿಹಾರ ನೀಡಲಿದೆ ಸಂವಿಧಾನ
- ಹಕ್ಕುಗಳ ಜತೆಗೆ ಕರ್ತವ್ಯವನ್ನು ತಿಳಿದು ನಡೆಯಬೇಕು
ದಾವಣಗೆರೆ: ಭಾರತದ ಸಂವಿಧಾನದ ಪರಿಣಾಮವಾಗಿ ಮಹಿಳೆಯರು ಪ್ರಗತಿಪಥದಲ್ಲಿದ್ದಾರೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.
ಜಿಲ್ಲಾಡಳಿತ, ಜಿಪಂ, ಮಹಾನಗರಪಾಲಿಕೆ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಭಾರತೀಯ ಸಂವಿಧಾನ ಎಲ್ಲರ ಜೀವನದ ಧರ್ಮಗ್ರಂಥ. ಇದು ಯಾವುದೇ ಜಾತಿ, ಮತ, ಧರ್ಮ ಭೇದವಿಲ್ಲದೆ ಎಲ್ಲ ನಾಗರೀಕರಿಗೆ ಅನ್ವಯವಾಗುವ ಪವಿತ್ರ ಗ್ರಂಥವಾಗಿದೆ ಎಂದು ತಿಳಿಸಿದರು.
ಹಿಂದೆಲ್ಲ ಕಾನೂನು ದಿನವಾಗಿ ಆಚರಣೆಯಲ್ಲಿತ್ತು. ಭಾರತ ಸರ್ಕಾರ 2015 ರಲ್ಲಿ ಸಂವಿಧಾನ ದಿನವಾಗಿ ಆಚರಿಸುವಂತೆ ಘೋಷಣೆ ಮಾಡಿತು. ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕವಾಗಿ ತನ್ನ ಕರ್ತವ್ಯದ ಅನುಸಾರ ಸಂವಿಧಾನವನ್ನು ರಚಿಸಲಾಯಿತು. ಸಂವಿಧಾನದ ರಚನೆಯಲ್ಲಿ ಅನೇಕ ಮಹಿಳೆಯರು ಭಾಗವಹಿಸಿದ್ದರು ಎಂದರು.
ಭಾರತದಲ್ಲಿ ಸಂವಿಧಾನವೇ ಸರ್ವೋಚ್ಛವಾಗಿದೆ. ಜನರೇ ಅಧಿಕಾರದ ಮೂಲವಾಗಿದ್ದಾರೆ. ರಾಷ್ಟ್ರದ ಏಕತೆ, ವ್ಯಕ್ತಿಗೌರವ ಮತ್ತು ಸಾಮಾಜಿಕ ಶಾಂತಿಯನ್ನು ಕಾಪಾಡುವುದು ಸಂವಿಧಾನದ ಕರ್ತವ್ಯವಾಗಿದೆ. ಇದು ನಮಗೆ ಆರ್ಥಿಕ, ಸಾಮಾಜಿಕ ಮತ್ತು ಸಮಾನತೆಯ ಗೌರವ ನೀಡಿದೆ. ಹಕ್ಕುಗಳ ಜತೆಗೆ ಕರ್ತವ್ಯವನ್ನು ತಿಳಿದು ನಡೆಯಬೇಕು ಎಂದು ಹೇಳಿದರು.
ಉಪನ್ಯಾಸ ನೀಡಿದ ಎವಿಕೆ ಕಾಲೇಜಿನ ಉಪನ್ಯಾಸಕ ರಣಧೀರ, ಅಂಬೇಡ್ಕರ್ ಹಾಗೂ ಸಂವಿಧಾನದ ಬಗ್ಗೆ ಸಾರ್ವಜನಿಕದಲ್ಲಿ ಜಾಗೃತಿ ಮೂಡಿಸುವುದೇ ಸಂವಿಧಾನ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ. ಸಂವಿಧಾನವನ್ನು ಸಂಪೂರ್ಣವಾಗಿ ಕೈಬರಹದಲ್ಲಿ ಬರೆಯಲಾಗಿದ್ದು, ಇದನ್ನು ಈಗಲೂ ಹೀಲಿಯಂ ಕೋಟಿಂಗ್ ಮೂಲಕ ಸಂರಕ್ಷಣೆ ಮಾಡಲಾಗಿದೆ ಎಂದು ತಿಳಿಸಿದರು.
ಜಗತ್ತಿನ ಅತೀ ದೊಡ್ಡ ಸಂವಿಧಾನವೇ ಭಾರತದ್ದು. ಪ್ರಪಂಚದ ಎಲ್ಲಾ ದೇಶಗಳ ಸಂವಿಧಾನದ ಅಂಶಗಳನ್ನು ಎರವಲು ಪಡೆದು ನಮ್ಮ ನೆಲಕ್ಕೆ ಸರಿಹೊಂದುವಂತೆ ರಚಿಸಲಾಗಿದೆ. ಸಂವಿಧಾನ ಒಂದು ಕಾದಂಬರಿ, ಕವಿತೆಯಲ್ಲ, ಅದು ಒಂದು ಪವಿತ್ರ ಗ್ರಂಥವಾಗಿದ್ದು ದೇಶದ ಹಲವು ಸಮಸ್ಯೆಗಳಿಗೆ ಪರಿಹಾರ ನೀಡಲಿದೆ ಎಂದು ಹೇಳಿದರು.
ಸಂವಿಧಾನ ದಿನಾಚರಣೆ ಅಂಗವಾಗಿ ಬೆಳಗ್ಗೆ ನಗರದ ಅಂಬೇಡ್ಕರ್ ವೃತ್ತದಿಂದ ಆರಂಭವಾದ ಮೆರವಣಿಗೆಯು ಹೈಸ್ಕೂಲ್ ಮೈದಾನದಲ್ಲಿ ಮುಕ್ತಾಯಗೊಂಡಕಿತು. ಜಿಪಂ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ ಸಂವಿಧಾನ ಪೀಠಿಕೆ ಓದಿದರು. ಪಾಲಿಕೆ ಆಯುಕ್ತೆ ರೇಣುಕಾ, ಜಿ.ಪಂ ಯೋಜನಾ ನಿರ್ದೇಶಕಿ ರೇಷಾ ್ಮಕೌಸರ್, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಮಧುಸೂದನ್, ಡಿಡಿಪಿಐ ಜಿ.ಕೊಟ್ರೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಇದ್ದರು.