ಆತ್ಮಹತ್ಯೆ ಮಾಡಿಕೊಂಡ ಹರೀಶ್, ರುದ್ರೇಶ್.  
ದಾವಣಗೆರೆ

ಪತ್ನಿಯ ಪರ ಸಂಗ? ಪತಿ-ಸೋದರಮಾವನ ಜೀವ ಭಂಗ

ಪ್ರಮುಖ ಮುಖ್ಯಾಂಶಗಳು

  • ಪರ ಪುರುಷನ ಜತೆ ಹೆಂಡತಿ ಪರಾರಿ ಶಂಕೆ
  • ಮದುವೆಯಾದ ಮೂರೇ ತಿಂಗಳಲ್ಲಿ ಬಿರುಕು
  • ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರತ್ಯೇಕ ದೂರು
ದಾವಣಗೆರೆ: ಮದುವೆಯಾಗಿ ಮೂರೇ ತಿಂಗಳಷ್ಟೇ ಕಳೆದಿತ್ತು. ದಂಪತಿ ನಡುವಿನ ಬಿರುಕು ದುರಂತ ಅಂತ್ಯಕ್ಕೆ ಕಾರಣವಾದೀತು ಎಂದು ಯಾರೂ ಭಾವಿಸಿರಲಿಲ್ಲ. ಆದರೆ ವಿಧಿ ಲಿಖಿತವೇ ಬೇರಿತ್ತು. ಪರ ಪುರುಷನ ಜತೆ ಪತ್ನಿಯು ಸಂಗ ಹೊಂದಿರುವ ಶಂಕೆ ಕಾಡಿತ್ತು. ಅತ್ತ ಪತಿ, ಇತ್ತ ಮದುವೆ ಮಾಡಿಸಿದ್ದ ಸೋದರಮಾವ ಇಬ್ಬರೂ ಇಹಲೋಕ ತೊರೆದರು.
ಈ ಘಟನೆಯಿಂದಾಗಿ ಗುಮ್ಮನೂರು, ಆನೆಕೊಂಡದ ಎರಡು ಕುಟುಂಬಗಳಲ್ಲೂ ದುಃಖದ ಕಟ್ಟೆಯೊಡೆದಿತ್ತು. ಆಸ್ಪತ್ರೆ, ಠಾಣೆಗಳಲ್ಲಿ ಜನರ ದಂಡೇ ನೆರೆದಿತ್ತು. ಗಂಡ ಬರೆದಿಟ್ಟ ಡೆತ್‌ನೋಟ್‌ನತ್ತಲೇ ಪೊಲೀಸರ ದೃಷ್ಟಿ ನೆಟ್ಟಿತ್ತು.
ಪರ ಪುರುಷನ ಜತೆ ಪತ್ನಿ ಪರಾರಿಯಾಗಿದ್ದರ ಬಗ್ಗೆ ಸಂಶಯಿಸಿ, ಮನನೊಂದ ದಾವಣಗೆರೆ ತಾಲೂಕು ಗುಮ್ಮನೂರು ನಿವಾಸಿ ಎ.ಎಂ.ಹರೀಶ್ (30) ಜಮೀನಿನಲ್ಲಿ ಸೋಮವಾರ ರಾತ್ರಿ ನೇಣಿಗೆ ಶರಣಾದರೆ, ವಿಷಯ ತಿಳಿದ ಸ್ವಲ್ಪ ಹೊತ್ತಿನಲ್ಲೇ ದಾವಣಗೆರೆ ಆನೆಕೊಂಡ ನಿವಾಸಿ, ಸೋದರಮಾವ ರುದ್ರೇಶ್ (36) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಮಂಗಳವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಘಟನೆಯ ವಿವರ:
ಆರಾಧ್ಯ ಸ್ಟೀಲ್ ಫಾಕ್ಟರಿಯಲ್ಲಿ ಉದ್ಯೋಗಿಯಾಗಿದ್ದ ಹರೀಶ್, ಮೂರು ತಿಂಗಳ ಹಿಂದೆ ದಾವಣಗೆರೆ ತಾಲೂಕು ಹುಲಿಕಟ್ಟೆ ಗ್ರಾಮದ ಎಚ್.ಯು.ಸರಸ್ವತಿ ಅವರನ್ನು ವಿವಾಹವಾಗಿದ್ದರು. ಕೆಲ ತಿಂಗಳ ಕಾಲ ದಂಪತಿ ನಡುವೆ ಅನೋನ್ಯತೆ ಇತ್ತು.
ಐದು ದಿನದ ಹಿಂದಷ್ಟೇ ಸರಸ್ವತಿ ಗಂಡನ ಮನೆ ತೊರೆದಿದ್ದರು. ಹುಡುಕಾಟ ನಡೆಸಿದರೂ ಮಗಳು ಸಿಗದಿದ್ದಾಗ ಜ. 23ರಂದು ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ತಂದೆ ಉಮಾಪತಿ ಅವರು ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಜ.25ರಂದು ಠಾಣೆಗೆ ಹಾಜರಾದ ಸರಸ್ವತಿ, ಮನೆಯಲ್ಲಿ ಬೇಸರವಾಗಿದ್ದರಿಂದ ಸ್ನೇಹಿತರ ಮನೆಗೆ ತೆರಳಿದ್ದೆ ಎಂದು ಹೇಳಿಕೆ ನೀಡಿದ್ದಾಳೆ. ಗಂಡನ ಮನೆಗೆ ಹೋಗಲು ನಿರಾಕರಿಸಿದ ಸರಸ್ವತಿ ಪಾಲಕರ ಜತೆ ಇರುವುದಾಗಿ ಹೇಳಿ ಮತ್ತೆ ತೆರಳಿದ್ದಳು.
ಕಾಣೆಯಾಗಿದ್ದ ಪತ್ನಿ ಪರಪುರುಷನ ಜತೆ ಹೋಗಿದ್ದಾಗಿ ಸಂಶಯಿಸಿದ ಹರೀಶ್, ಜಿಗುಪ್ಸೆಗೊಂಡು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾನು ತೊಂದರೆ ನೀಡಿದ್ದಾಗಿ ಸುಳ್ಳು ಹೇಳಿದ್ದ ಪತ್ನಿ ಹಾಗೂ ಆಕೆಯ ಮಾವ ಗಣೇಶ, ಚಿಕ್ಕಮ್ಮ ಅಂಜಿನಮ್ಮ ಜೀವ ಬೆದರಿಕೆ ಒಡ್ಡಿದ್ದರು ಎಂದು ಡೆತ್‌ನೋಟ್‌ನಲ್ಲಿ ಹರೀಶ್ ಬರೆದಿದ್ದಾರೆ.
ಸರಸ್ವತಿ ಜತೆ ಸಂಪರ್ಕ ಹೊಂದಿದ್ದ ಎನ್ನಲಾದ ಕುಮಾರ, ಸೋಮವಾರ, ಹರೀಶ್ ಜಮೀನಿಗೆ ಹೋಗುವ ದಾರಿಯಲ್ಲಿ ಬಂದು ಜಗಳವಾಡಿ ಜಾತಿ ನಿಂದನೆ ಮಾಡಿದ್ದ ಎಂಬುದಾಗಿ ಹರೀಶ್ ತಂದೆ ಮಹಾರುದ್ರಪ್ಪ ನೀಡಿದ ದೂರಿನ ಮೇಲೆ ಅಟ್ರಾಸಿಟಿ ಕೇಸ್ ಕೂಡ ದಾಖಲಾಗಿದೆ.
ಇತ್ತ ಹರೀಶ್ ಮೃತಪಟ್ಟ ವಿಷಯ ತಿಳಿದ, ಮದುವೆ ಮಾಡಿಸಿದ್ದ ಸರಸ್ವತಿ ಸೋದರಮಾವ ರುದ್ರೇಶ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ, ರುದ್ರೇಶ್ ಬಳಿ ಬಂದಿದ್ದ ಆರೋಪಿ ಕುಮಾರ ‘ಸರಸ್ವತಿಯನ್ನು ನನ್ನೊಂದಿಗೆ ಮದುವೆ ಮಾಡಿಸಲಿಲ್ಲ ಎಂದು ಹೇಳಿ ಜಾತಿನಿಂದನೆ ಮಾಡಿದ್ದಾಗಿ’ ಮೃತ ರುದ್ರೇಶ್ ಪತ್ನಿ ಪೂರ್ಣಿಮಾ ಪ್ರತ್ಯೇಕ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆ ಮುಂದುವರಿದಿದೆ.