ಮಾಯಕೊಂಡ ಹೋಬಳಿಯ ಪರಶುರಾಂಪುರ ಗೇಟ್ ಸಮೀಪ ಮಂಡ್ಯ ಹಡಗಲಿ ರಾಜ್ಯ ಹೆದ್ದಾರಿ 47ರಲ್ಲಿ ಪೈಪ್‌ಲೈನ್ ಅಳವಡಿಸಿಕೊಂಡು ಗುಂಡಿಗಳನ್ನು ಸರಿಯಾಗಿ ಮುಚ್ಚದೆ ಹಾಗೇ ಬಿಟ್ಟಿರುವುದು. pit
- ವಾಹನ ಸವಾರರಿಗೆ ಅಪಾಯದ ಕೂಪ
- ರೈತರ ನಿರ್ಲಕ್ಷೃದಿಂದ ನಿತ್ಯ ಅಪಘಾತ
- ಸಾರ್ವಜನಿಕರಲ್ಲಿ ಮೂಡಿದೆ ಆತಂಕ
ಮಾಯಕೊಂಡ: ದಾವಣಗೆರೆ ತಾಲೂಕಿನ ಆನಗೋಡು ಮತ್ತು ಮಾಯಕೊಂಡ ಹೊರವಲಯದಲ್ಲಿ ರೈತರು ಪೈಪ್‌ಲೈನ್ ಅಳವಡಿಸಲು ಅಗೆದಿರುವ ಗುಂಡಿಗಳನ್ನು ಸರಿಯಾಗಿ ಮುಚ್ಚದೆ ಬಿಟ್ಟಿದ್ದು, ರಸ್ತೆಗಳು ವಾಹನ ಸವಾರರಿಗೆ ಅಪಾಯದ ಕೂಪಗಳಾಗಿವೆ.
ಮಂಡ್ಯ- ಹಡಗಲಿ ರಾಜ್ಯ ಹೆದ್ದಾರಿ 47 ಮತ್ತು ಮಾಯಕೊಂಡದ ಹೊಸದುರ್ಗ- ದಾವಣಗೆರೆ ಜಿಲ್ಲಾ ಮುಖ್ಯಗಳಲ್ಲಿ ರೈತರು ಒಂದು ಜಮೀನಿನಿಂದ ಮತ್ತೊಂದು ಜಮೀನಿಗೆ ನೀರು ಪೂರೈಕೆ ಮಾಡಲು ಹಲವೆಡೆ ರಸ್ತೆಯನ್ನು ಜೆಸಿಬಿ ಮೂಲಕ ಅಗೆದು ಪೈಪ್ ಅಳವಡಿಸಿಕೊಂಡಿದ್ದಾರೆ. ಕೆಲಸ ಮುಗಿದ ಬಳಿಕ ಗುಂಡಿಗಳನ್ನು ಸರಿಯಾಗಿ ಮುಚ್ಚದ ಕಾರಣ ಅವು ದೊಡ್ಡ ಗುಂಡಿಗಳಾಗಿ ರೂಪುಗೊಂಡಿವೆ. ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ನಿತ್ಯ ಅಪಘಾತಕ್ಕೀಡಾಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ.
ಮಾಯಕೊಂಡ ಹೋಬಳಿಯಿಂದ ಮಾಯಕೊಂಡ ರೈಲ್ವೆ ಸ್ಟೇಷನ್, ಹುಚ್ಚವ್ವನಹಳ್ಳಿ ಮಾರ್ಗವಾಗಿ ಎಚ್ ಬಸವಾಪುರ ಸಂಪರ್ಕಿಸುವ ಜಿಲ್ಲಾ ಮುಖ್ಯರಸ್ತೆಯಲ್ಲೂ ಇದೇ ಪರಿಸ್ಥಿತಿ. ಪೈಪ್‌ಲೈನ್ ಮಾಡಿಕೊಂಡ ನಂತರ ಗುಂಡಿಗಳಿಗೆ ಅಷ್ಟಿಷ್ಟು ಮಣ್ಣು ಸುರಿದು ಕೈ ತೊಳೆದುಕೊಂಡಿದ್ದಾರೆ. ಬೈಕ್ ಸವಾರರು ಈ ಗುಂಡಿಗಳಲ್ಲಿ ಬಿದ್ದು ಗಾಯಗೊಂಡಿರುವ ಘಟನೆಗಳು ಹೆಚ್ಚುತ್ತಿವೆ.
ರೈತರು ಹಗಲಿನಲ್ಲೇ ಜೆಸಿಬಿ ಮೂಲಕ ರಸ್ತೆಗಳನ್ನು ಅಗೆದು ಪೈಪ್ ಅಳವಡಿಸುತ್ತಿದ್ದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೋಕೋಪಯೋಗಿ ಇಲಾಖೆಯ ಅನುಮತಿಯಿಲ್ಲದೆ ರಾತ್ರೋರಾತ್ರಿ ರಸ್ತೆ ಅಗೆದು ಪೈಪ್‌ಲೈನ್ ಮಾಡಿಕೊಂಡಿದ್ದಾರೆ. ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳನ್ನು ಅಗೆದು ಪೈಪ್‌ಲೈನ್ ಅಳವಡಿಸಿಕೊಂಡು, ಗುಂಡಿಗಳನ್ನು ಮುಚ್ಚದೆ ಹಾಗೇ ಬಿಟ್ಟಿರುವವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು.
ರಸ್ತೆಯಲ್ಲಿನ ಪೈಪ್‌ಲೈನ್ ಗುಂಡಿಗಳು ಅಪರಿಚಿತ ವಾಹನ ಸವಾರರಿಗೆ ಸಾವಿನ ಕೂಪಗಳಾಗಿವೆ. ಈಗಲಾದರೂ ಇಲಾಖೆಯವರು ಗುಂಡಿಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಬೇಕು.