ಪೊಲೀಸ್ ಉಪನಿರೀಕ್ಷಕಿ ಗಾಯತ್ರಿ ಮೇಲಿನ ಹಲ್ಲೆ ಖಂಡಿಸಿ ದಾವಣಗೆರೆ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದಿಂದ ದಾವಣಗೆರೆಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಎಸಿ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರಭುಲಿಂಗ ಸ್ವಾಮೀಜಿ, ಬಸವರಾಜ ಡಿ. ಗುಬ್ಬಿ, ಶ್ರೀಕಾಂತ್ ಎಂ. ಕಾಕಿ, ಸತ್ಯನಾರಾಯಣ್, ತಿಪ್ಪೇಶಪ್ಪ, ಆನಂದಪ್ಪ, ಬೊಮ್ಮ ತಿಪ್ಪೇಸ್ವಾಮಿ ಇತರರಿದ್ದರು.
- ಆರೋಪಿಗಳ ಗಡಿಪಾರು, ಆಸ್ತಿ ಮುಟ್ಟುಗೋಲಿಗೆ ಆಗ್ರಹ
- ಉಪವಿಭಾಗಾಧಿಕಾರಿ ಸಂತೋಷ್ ಅವರಿಗೆ ಮನವಿ ಸಲ್ಲಿಕೆ
- ರಾಜ್ಯ ಮಹಿಳಾ ಆಯೋಗ ಮೌನ ಮುರಿಯಲು ಒತ್ತಾಯ
ದಾವಣಗೆರೆ: ಬಡಾವಣೆ ಠಾಣೆ ಪೊಲೀಸ್ ಉಪ ನಿರೀಕ್ಷಕಿ ಗಾಯತ್ರಿ ಹಾಗೂ ಅವರ ಸಿಬ್ಬಂದಿ ಮೇಲಿನ ಹಲ್ಲೆ ಖಂಡಿಸಿ ದಾವಣಗೆರೆ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನ ಆವರಣದಿಂದ ಬಡಾವಣೆ ಠಾಣೆಗೆ ತೆರಳಿ ಗಾಯತ್ರಿ ಅವರಿಗೆ ನೈತಿಕ ಸ್ಥೈರ್ಯ ತುಂಬಿದ ಮುಖಂಡರು, ನಂತರ ಉಪವಿಭಾಗಾಧಿಕಾರಿ ಕಚೇರಿ ಹೊರಗಿನ ಪಿಬಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ನಂತರ ಉಪವಿಭಾಗಾಧಿಕಾರಿ ಸಂತೋಷ್ ಅವರಿಗೆ ಮನವಿಪತ್ರ ಸಲ್ಲಿಸಿದರು.
ಪ್ರಮುಖ ಹುದ್ದೆಯಲ್ಲಿ ಇರುವವರ ವಿರುದ್ಧವೇ ಗೂಂಡಾಗಿರಿ ಪ್ರದರ್ಶಿಸಲಾಗಿದೆ. ಹೀಗಾದರೆ ಜನಸಾಮಾನ್ಯರ ಪಾಡೇನು? ಎಂದು ಮುಖಂಡರು ಪ್ರಶ್ನಿಸಿದರು. ಮಹಿಳಾ ಅಧಿಕಾರಿ ವಿರುದ್ಧ ಅನುಚಿತವಾಗಿ ವರ್ತಿಸಿದ ಗೂಂಡಾಗಳನ್ನು ಬಂಧಿಸಿ ಜಿಲ್ಲೆಯಿಂದಲೇ ಗಡಿಪಾರು ಮಾಡಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಎಚ್ಚರಿಕೆ ವಹಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ನೇಕಾರ ಗುರುಪೀಠದ ಪ್ರಭುಲಿಂಗ ಸ್ವಾಮೀಜಿ ಮಾತನಾಡಿ ಎರಡು ಗುಂಪಿನ ಜಗಳ ಬಿಡಿಸಲು ತೆರಳಿದ್ದ ದಕ್ಷ ಅಧಿಕಾರಿಣಿ ಮೇಲೆ ಹಲ್ಲೆ ನಡೆಸಿದ್ದು ಅಕ್ಷಮ್ಯ ಅಪರಾಧ. ಕೂಡಲೆ ಆರೋಪಿಗಳಾದ ಕಾಂಗ್ರೆಸ್ ಮುಖಂಡ ಅಯೂಬ್ ಪೈಲ್ವಾನ್‌ರ ಪುತ್ರರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಬುಲ್ಡೋಜರ್ ಹಾಯಿಸಿ ಅವರ ಮನೆ ನೆಲಸಮ ಮಾಡಬೇಕು. ಅವರ ಕುಟುಂಬದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದರು.
ನೇಕಾರ ಸಮುದಾಯಗಳ ಒಕ್ಕೂಟದ ಮಾಜಿ ಅಧ್ಯಕ್ಷ ಬಸವರಾಜ ಡಿ. ಗುಬ್ಬಿ ಮಾತನಾಡಿ ನಮ್ಮ ಸಮಾಜದ ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಅನುಚಿತವಾಗಿ ವರ್ತಿಸಿದ ಗೂಂಡಾಗಳ ವಿರುದ್ಧ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಮೌನ ವಹಿಸುವುದು ಸರಿಯಲ್ಲ. ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಶ್ರೀಕಾಂತ್ ಎಂ. ಕಾಕಿ, ಜಿಲ್ಲಾ ನೇಕಾರ ವೇದಿಕೆ ಅಧ್ಯಕ್ಷ ಸತ್ಯನಾರಾಯಣ್, ಪದ್ಮಶಾಲಿ ಸಮಾಜದ ಮುಖಂಡ ತಿಪ್ಪೇಶಪ್ಪ, ಕೊರಚ ಮಹಾಸಂಘದ ಅಧ್ಯಕ್ಷ ಆನಂದಪ್ಪ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸಾಕಮ್ಮ, ಸವಿತಾ ರವಿಕುಮಾರ್, ಶೋಭಾ ಬಸವರಾಜ್ ಮಾತನಾಡಿದರು. ನೇಕಾರ ಸಮಾಜದ ಅಧಿಕಾರಿ ಸಿಬ್ಬಂದಿ ಮೇಲೆ ಯಾವುದೇ ಅನ್ಯಾಯವಾದಾಗ ಸಮಾಜದವರು ತಮ್ಮ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಉಪಾಧ್ಯಕ್ಷ ಎಸ್.ಟಿ.ಪಿ. ಬೊಮ್ಮ ತಿಪ್ಪೇಸ್ವಾಮಿ, ರಾಜ್ಯ ಸಮಿತಿ ಸದಸ್ಯ ಅಕ್ಕಿ ರಾಮಚಂದ್ರ, ಎಸ್‌ಒಜಿ ಹನುಮಂತಪ್ಪ, ರವಿಕುಮಾರ್, ರಾಘವೇಂದ್ರ ಇತರರಿದ್ದರು.