ಚನ್ನಗಿರಿ: ಇದುವರೆಗೆ ನೀರು ಪೂರೈಕೆಯಾಗದ ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಗೆ ಒಳಪಡುವ ಜೋಳದಾಳು, ಹರೋನಹಳ್ಳಿ, ಅಜ್ಜಿಹಳ್ಳಿ ಮತ್ತು ಮುದಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 14 ಕೆರೆಗಳಿಗೆ ಅ. 21ರೊಳಗೆ ನೀರು ಹರಿಸಲಾಗುವುದು ಎಂದು ಶಾಸಕ ಬಸವರಾಜ ಶಿವಗಂಗಾ ಭರವಸೆ ನೀಡಿದ್ದಾರೆ.
ಹಲವು ಗ್ರಾಮಗಳ ಕೆರೆಗಳಿಗೆ ಇನ್ನೂ ನೀರು ಬಾರದೆ ರೈತರು ಎದುರಿಸುತ್ತಿರುವ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ, ಶಾಸಕ ಬಸವರಾಜ್ ಶಿವಗಂಗಾ ಅವರು ಮಂಗಳವಾರ ಚನ್ನೇಶಪುರ ಗ್ರಾಮದ ಬಳಿಯ ಪಂಪ್‌ಹೌಸ್‌ಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನೀರು ಮತ್ತು ವಿದ್ಯುತ್ ರೈತರ ಜೀವನಾಡಿ. ತಾಲೂಕಿನ ಕೆರೆಗಳಿಗೆ ನೀರು ಹರಿಸುವ ಸಲುವಾಗಿ 2016-17ರಲ್ಲಿ ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ರೂಪಿಸಲಾಗಿದ್ದು, ಈ ಯೋಜನೆಯಡಿ ಒಟ್ಟು 121 ಕೆರೆಗಳ ಪೈಕಿ ಈಗಾಗಲೇ 114 ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಆದರೆ, ಜೋಳದಾಳು, ಹರೋನಹಳ್ಳಿ, ಅಜ್ಜಿಹಳ್ಳಿ ಹಾಗೂ ಮುದಿಗೆರೆ ಪಂಚಾಯಿತಿ ವ್ಯಾಪ್ತಿಯ 14 ಕೆರೆಗಳಿಗೆ ಮಾತ್ರ ಯೋಜನೆ ಆರಂಭವಾದಾಗಿನಿಂದ ಒಂದು ಹನಿ ನೀರು ಹರಿದಿಲ್ಲ. ರೈತರು ಕಂಗಾಲಾಗಿರುವುದನ್ನು ಮನಗಂಡು, ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಅ.21ರ ಒಳಗಾಗಿ ಬಾಕಿ ಇರುವ ಎಲ್ಲ ಕೆರೆಗಳಿಗೂ ನೀರು ತುಂಬಿಸಲಾಗುವುದು ಎಂದು ಭರವಸೆ ನೀಡಿದರು.
ತಾಲೂಕಿನಲ್ಲಿ ಈ ಸಾಲಿನಲ್ಲಿ ವಾಡಿಕೆಗಿಂತ ಶೇ. 70ರಷ್ಟು ಮಳೆ ಕೊರತೆಯಾಗಿದ್ದು, ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ತೀವ್ರ ಸಮಸ್ಯೆಯುಂಟಾಗಿದೆ. ತಾಲೂಕಿನ ರೈತರು ಅಡಕೆ ತೋಟಗಳನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಯೋಜನೆ ಮೂಲಕ ನೀರು ಹರಿದರೆ ಮಾತ್ರ ತೋಟಗಳನ್ನು ಉಳಿಸಿಕೊಳ್ಳಲು ಸಾಧ್ಯವಿದೆ ಎಂದರು.
ಜಗ್ಗಲಿ ಗ್ರಾಮದ ಬಳಿ ಪಂಪ್‌ಹೌಸ್ ನಿರ್ಮಿಸಿ ಕೆರೆಗಳಿಗೆ ನೀರು ಹರಿಸಲಾಗುತ್ತಿದ್ದರೂ, ಚನ್ನೇಶಪುರದಿಂದ ಈ ಭಾಗದ ಕೆರೆಗಳಿಗೆ ಗ್ರಾೃವಿಟಿ ಇಲ್ಲದೆ ನೀರು ಹರಿಸಲು ತೊಂದರೆಯಾಗುತ್ತಿದೆ. ಕೆಲವರು ರಾತ್ರೋರಾತ್ರಿ ಗೇಟ್‌ಗಳನ್ನು ತಿರುಗಿಸುತ್ತಿರುವುದರಿಂದ ಇತರ ಕೆರೆಗಳಿಗೆ ನೀರು ತಲುಪಲು ಕಷ್ಟವಾಗುತ್ತಿದೆ. ಪ್ರತಿಯೊಬ್ಬರಿಗೂ ನೀರಿನ ಅವಶ್ಯಕತೆಯಿರುವುದರಿಂದ, ಇನ್ನು ಮುಂದೆ ಅಕ್ರಮವಾಗಿ ಗೇಟ್ ತಿರುಗಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕರ್ನಾಟಕ ನೀರಾವರಿ ನಿಗಮದ ಇಇ ಕೃಷ್ಣಪ್ರಸಾದ್, ಎಇಇ ಶಂಕರಪ್ಪ, ತಾಪಂ ಮಾಜಿ ಸದಸ್ಯ ಷಡಾಕ್ಷರಿ ಮಾವಿನಕಟ್ಟೆ, ತುಮ್‌ಕೋಸ್ ನಿರ್ದೇಶಕ ವಿಜಯಕುಮಾರ್ ಗೌಡ್ರು ಹರೋನಹಳ್ಳಿ, ರೈತ ಮುಖಂಡರಾದ ಅಶೋಕ್ ಹರೋನಹಳ್ಳಿ, ಲೋಹಿತ್ ಗಾಣದಕಟ್ಟೆ, ತಳವಾರ್ ರಮೇಶ್, ಸಾರಥಿ ಬಾಬಣ್ಣ, ಜಿ.ಪಿ. ರವಿಕುಮಾರ್, ನಲ್ಲೂರು ಕಾಂತರಾಜ್ ಇತರರಿದ್ದರು.
ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಈ ತಿಂಗಳ 21ರೊಳಗೆ ಕೆರೆಗಳಿಗೆ ನೀರು ಹರಿಸುವ ಬಗ್ಗೆ ಭರವಸೆ ನೀಡಿದ್ದಾರೆ. ಒಂದು ವೇಳೆ ನಿಗದಿತ ಅವಧಿಯೊಳಗೆ ಕೆರೆಗಳಿಗೆ ನೀರು ಬಾರದಿದ್ದರೆ ಹೋರಾಟ ಅನಿವಾರ್ಯವಾಗಲಿದೆ.ರಂಗನಾಥ್ ಬಸವಾಪುರ ರೈತಸಂಘದ ಹಸಿರುಸೇನೆ ಅಧ್ಯಕ್ಷ.