ಸಿ.ಪಿ. ರಾಧಾಕೃಷ್ಣನ್ 
ದಾವಣಗೆರೆ

ದಾವಣಗೆರೆಗೆ ಶುಕ್ರವಾರ ಉಪರಾಷ್ಟ್ರಪತಿ ಭೇಟಿ

ಪ್ರಮುಖ ಮುಖ್ಯಾಂಶಗಳು

  • ಯು.ಬಿ.ಡಿ.ಟಿ. ಕಾಲೇಜಿನ ವಜ್ರ ಮಹೋತ್ಸವದಲ್ಲಿ ಭಾಗಿ
  • ರಾಜ್ಯಪಾಲರು, ವಿವಿಧ ಗಣ್ಯರ ಉಪಸ್ಥಿತಿ
ದಾವಣಗೆರೆ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾಗಿರುವ, ನಗರದ ಯು.ಬಿ.ಡಿ.ಟಿ. ಇಂಜಿನಿಯರಿಂಗ್ ಕಾಲೇಜು 75 ವರ್ಷಗಳ ಶೈಕ್ಷಣಿಕ ಸೇವೆ (1951-2026) ಪೂರೈಸಿದ ಹಿನ್ನೆಲೆಯಲ್ಲಿ ವಜ್ರ ಮಹೋತ್ಸವ ಸಮಾರಂಭವನ್ನು ಶುಕ್ರವಾರ ಮತ್ತು ಶನಿವಾರ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ರಾಜ್ಯಪಾಲ ಹಾಗೂ ವಿ.ಟಿ.ಯು. ಕುಲಾಧಿಪತಿ ಥಾವರ ಚಂದ್ ಗೆಹಲೋತ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಮೈಸೂರು-ಕೊಡಗು ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಮಂಡಳಿ ಅಧ್ಯಕ್ಷ ಪ್ರೊ. ಟಿ.ಜಿ. ಸಿತಾರಾಮ್ ಭಾಗವಹಿಸಲಿದ್ದಾರೆ.
ವಿ.ಟಿ.ಯು ಕುಲಪತಿ ಡಾ. ಎಸ್. ವಿದ್ಯಾಶಂಕರ್, ಕುಲಸಚಿವ ಡಾ. ಪ್ರಸಾದ್ ಬಿ. ರಾಂಪುರೆ, ಕುಲಸಚಿವ (ಮೌಲ್ಯಮಾಪನ) ಡಾ. ಉಜ್ವಲ್ ಯು.ಜೆ, ಹಣಕಾಸು ಅಧಿಕಾರಿ ಡಾ. ಪ್ರಶಾಂತ್ ನಾಯಕ್, ಯು.ಬಿ.ಡಿ.ಟಿ. ಕಾಲೇಜು ಪ್ರಾಚಾರ್ಯ ಡಾ. ಡಿ.ಪಿ. ನಾಗರಾಜಪ್ಪ ಮತ್ತು ವಿವಿ ಪದಾಧಿಕಾರಿಗಳು ಕಾರ್ಯಕ್ರಮದ ಆತಿಥ್ಯ ವಹಿಸಲಿದ್ದಾರೆ.
ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಚಿತ್ರದುರ್ಗದ ಮಾಜಿ ಸಂಸದ ಜನಾರ್ದನ ಸ್ವಾಮಿ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಪ್ರವಾಸದ ವಿವರ

ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಶುಕ್ರವಾರ ಮಧ್ಯಾಹ್ನ 12.20ಕ್ಕೆ ದಾವಣಗೆರೆಯ ಜಿ.ಎಂ.ಐ.ಟಿ ಹೆಲಿಪ್ಯಾಡ್‌ಗೆ ಆಗಮಿಸಿ, ನಂತರ ಯು.ಬಿ.ಡಿ.ಟಿ. ಇಂಜಿನಿಯರಿಂಗ್ ಕಾಲೇಜಿನ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 3.20ಕ್ಕೆ ಜಿ.ಎಂ.ಐ.ಟಿ ಹೆಲಿಪ್ಯಾಡ್‌ನಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತೆರಳಿ ಗೋವಾ ಪ್ರವಾಸ ಕೈಗೊಳ್ಳುವರು.