ಮಾಯಕೊಂಡ ಹೋಬಳಿಯ ಹುಚ್ಚವ್ವನಹಳ್ಳಿ ಗ್ರಾಮದ ಪ್ರಗತಿಪರ ಯುವ ಕೃಷಿಕ ಹರೀಶ್ ಜಮೀನಿನಲ್ಲಿ ಬೆಳೆದಿರುವ ಟೊಮ್ಯಾಟೊ ಬೆಳೆ.vegetables
- ಬೀಜ, ಗೊಬ್ಬರಕ್ಕೆ ಹಾಕಿದ ಖರ್ಚು ಮೈಮೇಲೆ ಬರುವ ಆತಂಕ
- ಟೊಮ್ಯಾಟೊ ಅಗ್ಗ
- ಕೆಜಿ ಬದನೆಕಾಯಿಗೆ ಕೇವಲ 10 ರೂ.
ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ
ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನ ಮಳೆಯು ನಿರೀಕ್ಷಿತ ಪ್ರಮಾಣದಲ್ಲಿ ಬಾರದೇ ಇರುವುದರಿಂದ, ರೈತರು ಅಷ್ಟೋ ಇಷ್ಟೋ ಲಭ್ಯವಿರುವ ಕೊಳವೆಬಾವಿ ನೀರಾವರಿಯನ್ನು ನಂಬಿಕೊಂಡು ಬೆಳೆದಿದ್ದ ಹಣ್ಣು ಹಾಗೂ ತರಕಾರಿಗಳ ಬೆಲೆ ದಿನದಿಂದ ದಿನಕ್ಕೆ ಪಾತಾಳಕ್ಕೆ ಕುಸಿಯುತ್ತಿದೆ. ಇದರಿಂದಾಗಿ ತರಕಾರಿ ಬೆಳೆಗಾರರು ಕಂಗಾಲಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ಆನಗೋಡು, ಮಾಯಕೊಂಡ ಹಾಗೂ ಅಣಜಿ ಹೋಬಳಿಗಳ ಹಲವು ಗ್ರಾಮಗಳ ರೈತರು ಕೊಳವೆಬಾವಿ ಆಶ್ರಯದಲ್ಲಿ ಟೊಮ್ಯಾಟೊ, ಹಸಿಮೆಣಸಿನಕಾಯಿ, ಬದನೆ, ಎಲೆಕೋಸು, ಸಿಹಿಕುಂಬಳ, ಸಾಂಬಾರ ಸೌತೆ, ಹೀರೆಕಾಯಿ, ಹಾಗಲಕಾಯಿ ಸೇರಿ ವಿವಿಧ ಬಗೆಯ ತರಕಾರಿಗಳನ್ನು ಹೆಚ್ಚಾಗಿ ಬೆಳೆದಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ದಿಢೀರ್ ಎದುರಾಗಿರುವ ದರ ಕುಸಿತವು ರೈತರಿಗೆ ಭಾರಿ ನಷ್ಟವನ್ನು ಉಣಿಸುತ್ತಿದೆ.
ಆನಗೋಡು ಹೋಬಳಿಯ ನೇರ್ಲಿಗೆ, ಸುಲ್ತಾನಿಪುರ, ಗಂಗನಕಟ್ಟೆ, ಈಚಗಟ್ಟ, ಕಂದನ ಕೋವಿ, ಹಾಲುವರ್ತಿ, ನೀರ್ಥಡಿ, ಗುಡಾಳು, ಗುಮ್ಮನೂರು, ನರಗನಹಳ್ಳಿ, ಚಿನ್ನಸಮುದ್ರ ಹಾಗೂ ಮಾಯಕೊಂಡ ಹೋಬಳಿಯ ಕೊಡಗನೂರು, ಬೊಮ್ಮೇನಹಳ್ಳಿ, ಅಣ್ಣಾಪುರ, ಪರಶುರಾಂಪುರ, ದಿಂಡನಹಳ್ಳಿ, ದೊಡ್ಡಮಾಗಡಿ, ಎಚ್. ಬಸವಾಪುರ, ಹುಚ್ಚವ್ವನಹಳ್ಳಿ, ಹೆದ್ನೇ, ಬಳ್ಳಾಪುರ ಭಾಗದ ಗ್ರಾಮಗಳು ತರಕಾರಿಯ ಪ್ರಮುಖ ಕಣಜಗಳಾಗಿವೆ.
ಕಳೆದ ತಿಂಗಳಷ್ಟೇ ದಾವಣಗೆರೆ ತರಕಾರಿ ಹೋಲ್‌ಸೇಲ್ ಮಾರುಕಟ್ಟೆಯಲ್ಲಿ 25 ಕೆಜಿ ತೂಕದ ಒಂದು ಬಾಕ್ಸೃ್ ಟೊಮ್ಯಾಟೊ ದರ 900 ರಿಂದ 1,000 ರೂ. ಗಡಿಯಲ್ಲಿತ್ತು. ಆದರೆ ಪ್ರಸ್ತುತ ಅದು ಪ್ರತಿ ಬಾಕ್ಸ್‌ಗೆ 200 ರಿಂದ 250ಕ್ಕೆ ಕುಸಿದಿದೆ. ಇನ್ನು ಹಸಿಮೆಣಸಿನಕಾಯಿ ಹೋಲ್‌ಸೇಲ್ ದರ ಪ್ರತಿ ಕ್ವಿಂಟಾಲ್‌ಗೆ 1,500 ರಿಂದ 2,000 ಹಾಗೂ ಬದನೆಕಾಯಿ ಪ್ರತಿ ಕೆಜಿಗೆ ಕೇವಲ 10 ರೂ.ಗೆ ಮಾರಾಟವಾಗುತ್ತಿದೆ. ಈ ದರ ಕುಸಿತದಿಂದಾಗಿ ಕೃಷಿಗಾಗಿ ಮಾಡಿದ ಅಸಲು ಹಣವೂ ಕೈ ಸೇರುವುದಿಲ್ಲ ಎಂಬ ಹತಾಶೆ ರೈತರನ್ನು ಕಾಡುತ್ತಿದೆ.
ಕೋಲ್ಡ್ ಸ್ಟೋರೇಜ್ ಘಟಕಕ್ಕೆ ಆಗ್ರಹ
ಮಾಯಕೊಂಡ ಗ್ರಾಮದಲ್ಲಿ ಖಾಲಿ ಇರುವ 20 ಎಕರೆ ಎಪಿಎಂಸಿ ಉಪ ಮಾರುಕಟ್ಟೆ ಜಾಗದಲ್ಲಿ ತರಕಾರಿ, ಹಣ್ಣು ಹಾಗೂ ಹೂವು ಖರೀದಿ ಕೇಂದ್ರವನ್ನು ಕೂಡಲೇ ಪ್ರಾರಂಭಿಸಬೇಕು. ಸರ್ಕಾರ ತರಕಾರಿ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸುವ ಮೂಲಕ ರೈತರ ನೆರವಿಗೆ ಬರಬೇಕು. ಇದರೊಂದಿಗೆ ಅತಿ ಹೆಚ್ಚು ಹಣ್ಣು- ತರಕಾರಿ ಬೆಳೆಯುವ ಆನಗೋಡು, ಮಾಯಕೊಂಡ ಮತ್ತು ಅಣಜಿ ಹೋಬಳಿ ಕೇಂದ್ರಗಳಲ್ಲಿ ಕೋಲ್ಡ್ ಸ್ಟೋರೇಜ್ ಘಟಕಗಳನ್ನು ಸ್ಥಾಪಿಸಬೇಕು ಎಂದು ಈ ಭಾಗದ ರೈತರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಾಲ್ಕು ಎಕರೆ ಜಮೀನಿನಲ್ಲಿ ಟೊಮ್ಯಾಟೊ, ಬದನೆ, ಹಸಿಮೆಣಸಿನಕಾಯಿ ಬೆಳೆದಿದ್ದೇನೆ. ಸಸಿ ಖರೀದಿ, ನಾಟಿ, ಗಿಡಗಳನ್ನು ಕಟ್ಟಲು ಗೂಟ ಹಾಕುವುದು, ವೈಯರ್ ಹುರಿ ಕಟ್ಟುವುದು, ಕಳೆ, ರಸಗೊಬ್ಬರ, ಕೀಟನಾಶಕ ಹಾಗೂ ಕೂಲಿ ಕಾರ್ಮಿಕರ ಖರ್ಚು ಸೇರಿ ಮಾರುಕಟ್ಟೆ ತಲುಪಿಸುವಷ್ಟರಲ್ಲಿ 2 ಲಕ್ಷಕ್ಕೂ ಹೆಚ್ಚು ಹಣ ಖರ್ಚಾಗಿದೆ. ಆದರೆ ಈಗಿನ ದರ ಕುಸಿತ ನೋಡಿದರೆ ಹೆಚ್ಚಿನ ಆದಾಯದ ನಿರೀಕ್ಷೆ ಸಂಪೂರ್ಣ ಹುಸಿಯಾಗಿದೆ.
— ಹರೀಶ್ ಪ್ರಗತಿಪರ ತರಕಾರಿ ಕೃಷಿಕ, ಹುಚ್ಚವ್ವನಹಳ್ಳಿ.
"
ಮಾರುಕಟ್ಟೆ ಯಲ್ಲಿ ಟೊಮ್ಯಾಟೊ ಸೇರಿ ಎಲ್ಲ ತರಕಾರಿಗಳ ದರ ದಿಢೀರ್ ಕುಸಿತ ಕಂಡಿದೆ. ಕಳೆದ ತಿಂಗಳು ತರಕಾರಿ ದರಗಳು ಏರಿಕೆಯಲ್ಲಿದ್ದವು. ಆದರೆ ಕಳೆದೊಂದು ವಾರದಿಂದ ಹೊರರಾಜ್ಯಗಳಿಗೆ ತರಕಾರಿ ತುಂಬಿಸುವ ಪ್ರಮುಖ ಖರೀದಿದಾರರು ಮಾರುಕಟ್ಟೆಗೆ ಬರುತ್ತಿಲ್ಲ. ಖರೀದಿದಾರರೇ ಇಲ್ಲದ ಕಾರಣ ತರಕಾರಿಗಳನ್ನು ಮಾರಾಟ ಮಾಡುವುದೇ ದುಸ್ತರವಾಗಿದೆ.
— ಸಿದ್ದಣ್ಣ ಹೋಲ್‌ಸೇಲ್ ವರ್ತಕ, ದಾವಣಗೆರೆ ತರಕಾರಿ ಮಾರುಕಟ್ಟೆ.
ದಾವಣಗೆರೆ ತಾಲೂಕಿನಲ್ಲಿ ಈ ಬಾರಿ ರೈತರು ಹೆಚ್ಚಾಗಿ ಬೂದುಗುಂಬಳ, ಸಿಹಿಕುಂಬಳ, ಟೊಮ್ಯಾಟೊ, ಹಸಿಮೆಣಸಿನಕಾಯಿ ಹಾಗೂ ಇತರೆ ತರಕಾರಿಗಳನ್ನು 150 ಹೆಕ್ಟೇರ್‌ಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ಬೆಳೆದಿದ್ದಾರೆ.
— ರೇಷ್ಮಾ ಪರ್ವಿನ್ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ, ದಾವಣಗೆರೆ ತಾಲೂಕು.