ದಾವಣಗೆರೆ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸೋಮವಾರ, ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸ್ವತ್ತುಗಳನ್ನು ಎಸ್ಪಿ ಶೇಖರ್ ಎಚ್.ಟಿ. ವೀಕ್ಷಿಸಿದರು. ಪರಮೇಶ್ವರ ಹೆಗಡೆ, ರುದ್ರೇಶ್ ಎಸ್. ಉಜ್ಜನಕೊಪ್ಪ, ಎಂ.ಆರ್. ಚೌಬೆ ಇದ್ದರು.
- ಎಸ್ಪಿ ಶೇಖರ್ ಎಚ್.ಟಿ. ಹೇಳಿಕೆ
- 70.61 ಲಕ್ಷ ರೂ. ಮೌಲ್ಯದ ಸ್ವತ್ತು ವಶ
ದಾವಣಗೆರೆ : ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಕೊಲೆ, ಡಕಾಯಿತಿ ಮತ್ತು ಸ್ವತ್ತು ಕಳ್ಳತನದ ಒಟ್ಟು 8 ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, 11 ಆರೋಪಿಗಳನ್ನು ಬಂಧಿಸಿ 70.61 ಲಕ್ಷ ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠ ಶೇಖರ್ ಎಚ್.ಟಿ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪ್ರಕರಣಗಳ ವಿವರ ನೀಡಿದರು.
ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಪೊಲೀಸರು ಕೇವಲ 72 ಗಂಟೆಗಳಲ್ಲಿ ಪತ್ತೆ ಹಚ್ಚಿದ್ದಾರೆ. ಫೆ. 17ರಂದು ಅಜ್ಗರ್ ಆಲಿ ಎಂಬುವವರು ಆಸ್ಪತ್ರೆಗೆ ತೆರಳಿದ್ದಾಗ ಅವರ ಮನೆಯ ಬೀಗ ಮುರಿದು ಕಳ್ಳತನ ಮಾಡಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು 72 ಗಂಟೆಯೊಳಗೆ ಆರೋಪಿ ಗೌತಮ್ ರಾಜ್ ಅಲಿಯಾಸ್ ಪೋತರಾಜ್ ಅಲಿಯಾಸ್ ಸದ್ದಾಂ ಹುಸೇನ್ ಎಂಬಾತನನ್ನು ಬಂಧಿಸಿ ಆತನಿಂದ 29.29 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ವಾಚ್ ವಶಪಡಿಸಿಕೊಂಡಿದ್ದಾರೆ. ಪೊಲೀಸ್ ಇನ್‌ಸ್ಪೆಕ್ಟರ್ ಸುನೀಲ್ ಕುಮಾರ್ ಎಚ್.ಎಸ್. ಮತ್ತು ತಂಡದವರು ಕಾರ್ಯಾಚರಣೆ ನಡೆಸಿದರು.
ಶಿವಮೊಗ್ಗ ಮೂಲದ ಈ ಆರೋಪಿಯು ಹಾಲಿ ಗಂಗಾವತಿಯ ನಿವಾಸಿ. ಈತನ ವಿರುದ್ಧ ರಾಜ್ಯದ ವಿವಿಧೆಡೆ 19 ಹಗಲು ಕನ್ನ ಕಳ್ಳತನ ಪ್ರಕರಣಗಳಿರುವುದು ಬೆಳಕಿಗೆ ಬಂದಿದೆ ಎಂದು ಎಸ್ಪಿ ತಿಳಿಸಿದರು.
ಚನ್ನಗಿರಿ ತಾಲೂಕು ನಲ್ಲೂರು ಗ್ರಾಮದಲ್ಲಿ ಕಳ್ಳತನ ನಡೆಸಿದ್ದ ಮೂವರು ಆರೋಪಿಗಳಾದ ಸೈಯದ್ ಮುದಾಸೀರ್, ಸೈಯದ್ ಮುಜಾಮಿಲ್ ಮತ್ತು ಮಹಮ್ಮದ್ ಸಾಹಿಲ್ ಅವರನ್ನು ಬಂಧಿಸಿ 10 ಲಕ್ಷ ರೂ. ಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚನ್ನಗಿರಿ ಪಟ್ಟಣದಲ್ಲಿ ನಡೆದ ಮತ್ತೊಂದು ಕಳ್ಳತನ ಪ್ರಕರಣ ಹಾಗೂ ವಿವಿಧ ಗ್ರಾಮಗಳಲ್ಲಿ ನಡೆದ ಜಾನುವಾರು ಕಳ್ಳತನ ಪ್ರಕರಣಗಳ ಸಂಬಂಧ ಚನ್ನಗಿರಿ ನಿವಾಸಿ ರಾಜು ಅಲಿಯಾಸ್ ಮಚ್ಚಾ ಎಂಬಾತನನ್ನು ಬಂಧಿಸಿ 8 ಲಕ್ಷ ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
ಭದ್ರತೆಗೆ 1,500ಕ್ಕೂ ಹೆಚ್ಚು ಸಿಬ್ಬಂದಿ
ದುರ್ಗಾಂಬಿಕಾ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಭದ್ರತೆಗಾಗಿ 1,500ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಎಸ್ಪಿ ಶೇಖರ್ ಹೇಳಿದರು.
ಜಾತ್ರೆಗಳಲ್ಲಿ ಪ್ರಾಣಿ ಬಲಿಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸಿಸಿಟಿವಿ ಕ್ಯಾಮರಾಗಳ ಅಳವಡಿಕೆ, ಲೈಟಿಂಗ್ ಹಾಗೂ ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ನಗರದಲ್ಲಿ ಇತ್ತೀಚೆಗೆ ನಡೆದ ವೈದ್ಯಕೀಯ ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣ ಸಂಬಂಧ ಎಫ್‌ಎಸ್‌ಎಲ್ ವರದಿ ಬಂದ ನಂತರ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದರು.
ಹೆಚ್ಚುವರಿ ಎಸ್‌ಪಿ ಪರಮೇಶ್ವರ ಹೆಗಡೆ, ಚನ್ನಗಿರಿ ಉಪ ವಿಭಾಗ ಡಿವೈಎಸ್ಪಿ ರುದ್ರೇಶ್ ಎಸ್. ಉಜ್ಜನಕೊಪ್ಪ, ನಗರ ಡಿವೈಎಸ್ಪಿ ಶರಣ ಬಸವೇಶ್ವರ ಸುದ್ದಿಗೋಷ್ಠಿಯಲ್ಲಿದ್ದರು.