ಕಾರ್ಯಾಗಾರವನ್ನು ಬಿ.ಸಿ. ಶಿವಕುಮಾರ್ ಉದ್ಘಾಟಿಸಿದರು. ಅಥಣಿ ಪ್ರಶಾಂತ್, ಡಾ. ಕೆ. ಷಣ್ಮುಖ, ಮಂಜುನಾಥ ಮಠದ, ಡಾ. ವೆಂಕಟೇಶ್ ಬಾಬು ಎಸ್, ಪ್ರೊ. ಜೆ.ಕೆ. ರಾಜು ಇದ್ದರು.
- ಶಿಕ್ಷಕರಿಗೆ ಬಿ.ಸಿ. ಶಿವಕುಮಾರ್ ಸಲಹೆ
- ಎಸ್.ಬಿ.ಸಿ. ಕಾಲೇಜಿನಲ್ಲಿ ಕಾರ್ಯಾಗಾರ
ದಾವಣಗೆರೆ : ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಅನುಗುಣವಾಗಿ ಅಧ್ಯಾಪಕರು ತಮ್ಮ ಬೋಧನಾ ವಿಧಾನಗಳನ್ನು ನಿರಂತರವಾಗಿ ನವೀಕರಿಸಿಕೊಳ್ಳಬೇಕು ಎಂದು, ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನ ಅಧ್ಯಕ್ಷ ಬಿ.ಸಿ. ಶಿವಕುಮಾರ್ ಹೇಳಿದರು.
ನಗರದ ಎಸ್.ಬಿ.ಸಿ. ಪ್ರಥಮ ದರ್ಜೆ ಮಹಿಳಾ ಕಾಲೇಜು ಮತ್ತು ಅಥಣಿ ಸ್ನಾತಕೋತ್ತರ ಕೇಂದ್ರ ಹಾಗೂ ದಾವಣಗೆರೆ ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ಅಧ್ಯಾಪಕರ ವೇದಿಕೆ ಸಹಯೋಗದಲ್ಲಿ, ಬಿ.ಕಾಂ ಮತ್ತು ಬಿಬಿಎ 5ನೇ ಹಾಗೂ 6ನೇ ಸೆಮಿಸ್ಟರ್‌ಗಳ ಎಸ್‌ಇಪಿ-2025 ಪಠ್ಯಕ್ರಮದ ಕುರಿತು ಎಸ್.ಬಿ.ಸಿ. ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.
ಹೊಸ ಪಠ್ಯಕ್ರಮವು ವಿದ್ಯಾರ್ಥಿಗಳಲ್ಲಿ ವಿಷಯ ಜ್ಞಾನ ಬೆಳೆಸುವುದಕ್ಕೆ ಸೀಮಿತವಾಗದೇ, ಅವರ ಕೌಶಲ, ಸೃಜನಶೀಲತೆ ಹಾಗೂ ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸುವಂತಿರಬೇಕು. ಈ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರಗಳು ಅಧ್ಯಾಪಕರಿಗೆ ಪಠ್ಯಕ್ರಮವನ್ನು ಸಮಗ್ರವಾಗಿ ಅರ್ಥೈಸಿಕೊಳ್ಳಲು ಹಾಗೂ ಪರಿಣಾಮಕಾರಿಯಾಗಿ ಬೋಧಿಸಲು ಸಹಕಾರಿಯಾಗಲಿವೆ ಎಂದು ಅಭಿಪ್ರಾಯಪಟ್ಟರು.
ಅಥಣಿ ಕಾಂಪೋಸಿಟ್ ಪಿಯು ಕಾಲೇಜಿನ ಅಧ್ಯಕ್ಷ ಅಥಣಿ ಪ್ರಶಾಂತ್ ಮಾತನಾಡಿ, ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಿಸುವಲ್ಲಿ ಅಧ್ಯಾಪಕರ ಪಾತ್ರ ಮಹತ್ವದ್ದಾಗಿದೆ. ಬದಲಾಗುತ್ತಿರುವ ಶೈಕ್ಷಣಿಕ ಮತ್ತು ಉದ್ಯೋಗ ಕ್ಷೇತ್ರದ ಅಗತ್ಯಗಳಿಗೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ತಿಳಿಸಿದರು.
ಹೊಸ ಪಠ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸಿಕೊಡಬೇಕು. ಈ ಕಾರ್ಯಾಗಾರವು ಅಧ್ಯಾಪಕರಿಗೆ ಹೊಸ ವಿಚಾರ ತಿಳಿದುಕೊಳ್ಳಲು ಹಾಗೂ ಪರಸ್ಪರ ಜ್ಞಾನ ಹಂಚಿಕೊಳ್ಳಲು ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.
ದಾವಣಗೆರೆ ವಿಶ್ವವಿದ್ಯಾಲಯದ ನಿರ್ವಹಣಾಶಾಸ್ತ್ರ ವಿಭಾಗದ ಅಧ್ಯಯನ ಮಂಡಳಿ ಅಧ್ಯಕ್ಷ ಪ್ರೊ. ಜೆ.ಕೆ. ರಾಜು ಮುಖ್ಯ ಉಪನ್ಯಾಸ ನೀಡಿ, ಪರಿಷ್ಕೃತ ಪಠ್ಯಕ್ರಮದ ಆಶಯ, ವಿಷಯಗಳ ಪ್ರಸ್ತುತತೆ, ಬೋಧನಾ ವಿಧಾನ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಉದ್ಯೋಗಾವಕಾಶಗಳ ಕುರಿತು ಅಧ್ಯಾಪಕರಿಗೆ ಮಾರ್ಗದರ್ಶನ ನೀಡಿದರು.
ಹರಪನಹಳ್ಳಿಯ ಚಾರ್ಟರ್ಡ್ ಅಕೌಂಟಂಟ್ ಮಂಜುನಾಥ ಮಠದ, ಎಸ್.ಬಿ.ಸಿ. ಪ್ರಥಮ ದರ್ಜೆ ಮಹಿಳಾ ಕಾಲೇಜು ಮತ್ತು ಅಥಣಿ ಪಿ.ಜಿ. ಕೇಂದ್ರದ ಪ್ರಾಚಾರ್ಯ ಡಾ. ಕೆ. ಷಣ್ಮುಖ, ಕೆಜಿಸಿಟಿಎ ವಲಯ ಕಾರ್ಯದರ್ಶಿ ಡಾ. ಕರಿಬಸಪ್ಪ ಟಿ., ಅಧ್ಯಾಪಕರ ವೇದಿಕೆ ಉಪಾಧ್ಯಕ್ಷ ಡಾ. ಬಾಬು ಕೆ.ಎ., ಕಾರ್ಯದರ್ಶಿ ಪ್ರೊ. ದೇವೇಂದ್ರ ಜಿ.ಒ., ಖಜಾಂಚಿ ಡಾ. ಸುನೀತಾ ಕೆ.ಬಿ. ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ಭಾಗ್ಯಶ್ರೀ ಡಿ. ಹುಬ್ಳಿಕರ್ ಇದ್ದರು.