ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಶನಿವಾರ, ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಎಬಿವಿಪಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಶೈಕ್ಷಣಿಕ ಕಾರ್ಯಾಗಾರವನ್ನು ರದ್ದುಗೊಳಿಸಿದ್ದನ್ನು ಖಂಡಿಸಿ ಸಂಘಟನೆಯ ಕಾರ್ಯಕರ್ತರು ವಿವಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಗೋಪಿ ರಂಗಸ್ವಾಮಿ, ಗಂಗಾಧರ, ರಮೇಶ್, ಪಲ್ಲವಿ, ವಿಜಯ ಕುಮಾರ್ ಇದ್ದರು.  
ದಾವಣಗೆರೆ

ಶೈಕ್ಷಣಿಕ ಕಾರ್ಯಾಗಾರ ರದ್ದುಪಡಿಸಿದ ವಿವಿ

ಪ್ರಮುಖ ಮುಖ್ಯಾಂಶಗಳು

  • ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆ
  • ಸರ್ಕಾರದ ವಿರುದ್ಧ ಆಕ್ರೋಶ
ದಾವಣಗೆರೆ : ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಎಬಿವಿಪಿಯಿಂದ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯಮಟ್ಟದ ಶೈಕ್ಷಣಿಕ ಕಾರ್ಯಾಗಾರವನ್ನು ವಿವಿ ಸಿಬ್ಬಂದಿಯೆ ತಡೆದು, ರದ್ದುಗೊಳಿಸಿದ ಪ್ರಸಂಗ ನಡೆದಿದೆ.
ರಾಜ್ಯ ಸರ್ಕಾರದ ಮತ್ತು ವಿವಿಯ ಈ ಧೋರಣೆಯನ್ನು ಖಂಡಿಸಿ ಎಬಿವಿಪಿ ಕಾರ್ಯಕರ್ತರು ವಿವಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಾಗಾರ ನಡೆಸುವ ಬಗ್ಗೆ ಮುಂಚಿತವಾಗಿಯೆ ವಿಶ್ವವಿದ್ಯಾಲಯಕ್ಕೆ ಮನವಿ ಮಾಡಿಕೊಳ್ಳಲಾಗಿತ್ತು. ವಿವಿ ಅಧಿಕಾರಿಗಳು ಅದಕ್ಕೆ ಅನುಮತಿಯನ್ನೂ ನೀಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳು, ಕೆಲವು ಪ್ರಾಧ್ಯಾಪಕರೂ ಆಗಮಿಸಿದ್ದರು.
ಕಾರ್ಯಕ್ರಮ ಉದ್ಘಾಟನೆ ಆಗುತ್ತಿದ್ದಂತೆ ಏಕಾಏಕಿ ಸ್ಥಳಕ್ಕೆ ಬಂದ ವಿವಿ ಸಿಬ್ಬಂದಿ ತಡೆಯೊಡ್ಡಿದರು. ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಧ್ವನಿವರ್ಧಕ ಬಂದ್ ಮಾಡಿದರು. ಇದರಿಂದ ಆಕ್ರೋಶಗೊಂಡ ಎಬಿವಿಪಿ ಕಾರ್ಯಕರ್ತರು ಎಂಬಿಎ ಕಟ್ಟಡದ ಮುಂದೆ ಧರಣಿ ನಡೆಸಿದರು. ರಾಜ್ಯ ಸರ್ಕಾರ ಮತ್ತು ವಿವಿ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದರು.
ಕಾರ್ಯಾಗಾರ ಆಯೋಜಿಸುತ್ತಿರುವ ಬಗ್ಗೆ ವಿವಿಯಿಂದ ಮುಂಚಿತವಾಗಿಯೆ ಅನುಮತಿ ಪಡೆದಿದ್ದೆವು. ನಮ್ಮ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಲಿ ಎಂದು ಸುತ್ತೋಲೆಯನ್ನೂ ವಿವಿ ಹೊರಡಿಸಿತ್ತು. ಅವರೇ ಅನುಮತಿ ನೀಡಿ, ಈಗ ರದ್ದುಗೊಳಿಸಿದ್ದೇಕೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ ಉದ್ದೇಶದಿಂದ ಕೃತಕ ಬುದ್ಧಿಮತ್ತೆ, ಸಂಶೋಧನಾ ವಿಧಾನಗಳು ಮುಂತಾದ ವಿಷಯಗಳ ಕುರಿತು ಕಾರ್ಯಾಗಾರ ಹಮ್ಮಿಕೊಂಡಿದ್ದೆವು. 15 ದಿನಗಳಿಂದ ಸಿದ್ಧತೆ ಮಾಡಿಕೊಂಡಿದ್ದೆವು. ನಾವೇನೂ ದೇಶವಿರೋಧಿ ಚಟುವಟಿಕೆ ಮಾಡುತ್ತಿರಲಿಲ್ಲ. ಅಡ್ಡಿಪಡಿಸುವ ಮೂಲಕ ವಿದ್ಯಾರ್ಥಿಗಳಿಗೆ ದ್ರೋಹ ಬಗೆಯಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಎಬಿವಿಪಿ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಗೋಪಿ ರಂಗಸ್ವಾಮಿ, ಮುಖಂಡರಾದ ಗಂಗಾಧರ, ರಮೇಶ್, ಪಲ್ಲವಿ, ವಿಜಯ ಕುಮಾರ್, ಸಂಘಟನೆಯ ಕಾರ್ಯಕರ್ತರು ಇದ್ದರು.
ಘಟನೆಯ ಕುರಿತು ಪ್ರತಿಕ್ರಿಯೆ ನೀಡಲು ವಿವಿ ಕುಲಪತಿ ಪ್ರೊ.ಬಿ.ಡಿ. ಕುಂಬಾರ್ ಸಂಪರ್ಕಕ್ಕೆ ಸಿಗಲಿಲ್ಲ.