ತೋಳಹುಣಸೆಯಿಂದ ಆನಗೋಡುವರೆಗಿನ ರೈಲ್ವೆ ಹಳಿ ಕಾಮಗಾರಿಯನ್ನು ಮೋಟಾರು ಟ್ರಾೃಲಿ ಮೂಲಕ ವೀಕ್ಷಣೆ ನಡೆಸಿದ ಕೇಂದ್ರದ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರೊಂದಿಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ರೈಲ್ವೆ ಇಲಾಖೆ ಮುಖ್ಯ ವ್ಯವಸ್ಥಾಪಕ ಪ್ರದೀಪ್ ಪೂರಿ ಇತರರಿದ್ದರು.
- ಕೇಂದ್ರದ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಮಾಹಿತಿ
- ಮೋಟಾರು ಟ್ರಾೃಲಿ ಮೂಲಕ ಕಾಮಗಾರಿ ವೀಕ್ಷಣೆ
- ಮಾರ್ಚ್ ಅಂತ್ಯದೊಳಗಾಗಿ ಭೂಸ್ವಾಧೀನಕ್ಕೆ ತಾಕೀತು
ದಾವಣಗೆರೆ: ಜೂನ್ ಒಳಗಾಗಿ ತೋಳಹುಣಸೆ-ಆನಗೋಡು ಮಧ್ಯೆ ತಾತ್ಕಾಲಿಕ ರೈಲು ಸಂಚಾರ ಆರಂಭಿಸಲಾಗುವುದು ಎಂದು ಕೇಂದ್ರದ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲ್ವೆ ಮಾರ್ಗದ ಪೈಕಿ ತೋಳಹುಣಸೆಯಿಂದ ಆನಗೋಡುವರೆಗಿನ ಹಳಿ ಕಾಮಗಾರಿ ಯನ್ನು ಬ್ಯಾಟರಿ ಚಾಲಿತ ಮೋಟಾರು ಟ್ರಾೃಲಿ ಮೂಲಕ ವೀಕ್ಷಣೆ ನಡೆಸಿದ ಬಳಿಕ, ಆನಗೋಡು ನೂತನ ರೈಲು ನಿಲ್ದಾಣ ಬಳಿ ಮಾತನಾಡಿದರು.
ತುಮಕೂರು-ದಾವಣಗೆರೆ ನೇರ ರೈಲ್ವೆ ಮಾರ್ಗದಡಿ ಆನಗೋಡುವರೆಗೆ ರೈಲು ಹಳಿ ಕಾಮಗಾರಿ ಪೂರ್ಣಗೊಂಡಿದೆ. ಇಲ್ಲಿ ಬೇರೆ ಚಟುವಟಿಕೆಗೆ ನಿರ್ಬಂಧಿಸಬೇಕಿದೆ. ರೈಲ್ವೆ ಮಾರ್ಗದ ಇನ್ನೂ ಕೆಲವೆಡೆ ಭೂಸ್ವಾಧೀನ ಪ್ರಕ್ರಿಯೆ ಮುಗಿದ ನಂತರ 20 ಕಿ.ಮೀ ವ್ಯಾಪ್ತಿಗಳಲ್ಲಿ ರೈಲು ಸಂಚಾರ ಆರಂಭವಾಗಲಿದೆ ಎಂದರು
ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲನ್ನು 2027ರ ಅಂತ್ಯಕ್ಕೆ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸುವ ಗುರಿ ಇದೆ. ಈ ಯೋಜನೆಗೆ ಒಟ್ಟು 1312 ಎಕರೆ ಜಮೀನು ಪೈಕಿ 1200 ಎಕರೆ ದೊರೆತಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 111 ಎಕರೆ ಭೂಸ್ವಾಧೀನ ಆಗಬೇಕಿದೆ. ಅಧಿಕಾರಿಗಳು ಮಾರ್ಚ್ ಅಂತ್ಯದೊಳಗಾಗಿ ಪ್ರಕ್ರಿಯೆ ಮುಗಿಸುವಂತೆ ತಾಕೀತು ಮಾಡಿದರು. ದಾವಣಗೆರೆ ಜಿಲ್ಲೆಯಲ್ಲಿ ರೈಲ್ವೆ ಕಾಮಗಾರಿಗಳಿಗೆ ಅಗತ್ಯವಿರುವ 30 ಎಕರೆ ಜಾಗ ಹಾಗೂ ಅನುದಾನ ಕೊಡಬೇಕು ಎಂದೂ ಸಚಿವರು ಸೂಚಿಸಿದರು.
ಹೆಚ್ಚುತ್ತಿರುವ ಜನಸಂಖ್ಯೆ ದೃಷ್ಟಿಯಿಂದ ಕನಿಷ್ಠ 21 ಭೋಗಿಗಳು ನಿಲ್ಲುವಷ್ಟು ರೈಲ್ವೆ ಫ್ಲಾಟ್‌ಫಾರ್ಮ್ ವಿಸ್ತರಿಸಲು ತೀರ್ಮಾನಿಸಲಾಗಿದೆ. ಹೀಗಾಗಿ ಹನುಮನಹಳ್ಳಿ ರೈಲ್ವೆ ಫ್ಲಾಟ್‌ಫಾರ್ಮ್ ವಿಸ್ತರಣೆಗೆ ರೈಲು ಅಧಿಕಾರಿಗಳು ಒತ್ತು ನೀಡಬೇಕು ಎಂದರಲ್ಲದೆ ಹೊಸ ರೈಲ್ವೆ ಮಾರ್ಗಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸುವಂತೆಯೂ ಸೂಚನೆ ನೀಡಿದರು.
ಹೊಸ ರೈಲ್ವೆ ಮಾರ್ಗಗಳಲ್ಲಿ ಕಾಮಗಾರಿ ಕೆಲಸದ ಹೊರರಾಜ್ಯದ ಕಾರ್ಮಿಕರ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಇದು ಸರಿಯಲ್ಲ. ರಾಜಕಾರಣಿಗಳ ಹೆಸರು ಬಳಸಿ ಯಾರೂ ಸಹ ತರಲೆ ಮಾಡಬಾರದು. ಬಹುವರ್ಷದ ಯೋಜನೆಗಳ ಸಾಕಾರಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು. ರೈಲ್ವೆ ಯೋಜನೆಗಳಲ್ಲಿ ಅನನುಕೂಲವಾದ ರೈತರಿಗೆ ಫ್ಲಾಟ್‌ಪಾರ್ಮ್‌ಗಳಲ್ಲಿ ತೆರೆಯಲಿರುವ ಅಂಗಡಿ ಅಥವಾ ಇತರೆ ನೆರವು ಕಲ್ಪಿಸಲು ಅವಕಾಶವಿದೆ ಎಂದೂ ಹೇಳಿದರು.
ದೇಶದ ಅಭಿವೃದ್ಧಿಯಲ್ಲಿ ರೈಲ್ವೆ ಇಲಾಖೆ ಮೊದಲ ಸ್ಥಾನದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ‘ವಿಕಸಿತ ಭಾರತ 2047’ ಯೋಜನೆಯಡಿ ರೈಲ್ವೆ ಹಳೆಯ ಕಾಮಗಾರಿಗಳಿಗೆ ಮರುಜೀವ ನೀಡಲು 52 ಸಾವಿರ ಕೋಟಿ ರೂ ಮೀಸಲಿಡಲಾಗಿದೆ. ಈ ವರ್ಷ ಹೆಚ್ಚುವರಿಯಾಗಿ 7,800 ಕೋಟಿ ರೂ. ಮೊತ್ತದ ಕಾಮಗಾರಿ ಕೂಡ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಜಲಶಕ್ತಿ ಯೋಜನೆಯಡಿ 15.67 ಕೋಟಿ ಜನರಿಗೆ ಶುದ್ಧ ನೀರೊದಗಿಸಲು 5ಲಕ್ಷ ಕೋಟಿ ರೂ. ಬಿಡುಗಡೆ ಮಾಡಲಾಗುತ್ತಿದೆ. ಜೆಜೆಎಂ ಯೋಜನೆಯನ್ನು ಕೈಬಿಡಲು ಪ್ರಧಾನಿ ಮುಂದಾಗಿದ್ದರು. ಆದರೆ, ಇದರ ಮೇಲ್ಪಟ್ಟ ಅಧಿಕಾರಿಗಳನ್ನು ತೆಗೆದು ನಗರಸಭೆ, ಪುರಸಭೆಗಳಿಗೆ ಇದರ ನಿರ್ವಹಣೆ ನೀಡುವ ಬಗ್ಗೆ ಚರ್ಚೆ ನಡೆದಿದೆ ಎಂದರು.
ವಂದೇಭಾರತ್ ರೈಲಿನ ಸಮಯ ಬದಲಾವಣೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ತೀರ್ಮಾನ ನಡೆಸುವುದಾಗಿ ಭರವಸೆ ನೀಡಿದರು. ಪಕ್ಷಭೇದಕ್ಕಿಂತ ರಾಜ್ಯದ ಅಭಿವೃದ್ಧಿ ಮುಖ್ಯವಾಗಿದೆ ಎಂದೂ ಸಂಸದರ ಮನವಿಗೆ ಸ್ಪಂದಿಸಿದರು.
ಕಾರ್ಯಕ್ರಮದಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕ ಕೆ.ಎಸ್. ಬಸವಂತಪ್ಪ, ಮುಖಂಡ ಜಿ.ಎಸ್.ಅನಿತ್‌ಕುಮಾರ್, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ರೈಲ್ವೆ ಇಲಾಖೆಯ ಮುಖ್ಯ ವ್ಯವಸ್ಥಾಪಕ ಪ್ರದೀಪ್ ಪೂರಿ, ಗ್ರಾಮಾಂತರ ಡಿವೈಎಸ್ಪಿ ಬಸವರಾಜ್, ರೈಲ್ವೆ ಅಧಿಕಾರಿ ವೆಂಕಟೇಶ್ ಇತರರಿದ್ದರು. ಮೋಟಾರು ಟ್ರಾೃಲಿ ಮೂಲಕ ವೀಕ್ಷಣೆ ವೇಳೆ ಶಾಸಕ ಚಂದ್ರಪ್ಪ ಇತರರಿದ್ದರು.
ಸೂಯಿಸೈಡ್ ಕೇಂದ್ರವಾಗುತ್ತಿದೆ ರೈಲ್ವೆ ಕ್ರಾಸಿಂಗ್
ಹರಿಹರ ವ್ಯಾಪ್ತಿಯಲ್ಲಿ ರೈಲು ಅಪಘಾತ ಹೆಚ್ಚಿವೆ. ರಸ್ತೆ ದಾಟುವಾಗ ತಿಂಗಳಿಗೆ ಇಬ್ಬರು ಮೂವರು ಸಾವಿಗೀಡಾಗುತ್ತಿದ್ದು ರೈಲ್ವೆ ಕ್ರಾಸಿಂಗ್ ಸೂಯಿಸೈಡ್ ಕೇಂದ್ರವಾಗುತ್ತಿದೆ. ಫೆನ್ಸಿಂಗ್ ಮಾಡಿಸಿ ಜನರಿಗೆ ಸುರಕ್ಷತೆ ಕಲ್ಪಿಸಬೇಕು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮನವಿ ಮಾಡಿದರು.
ಅಶೋಕ ರೈಲ್ವೆ ಗೇಟ್ ಬಳಿ ಸೇವಾ ರಸ್ತೆ ನಿರ್ಮಾಣ ಸಮಸ್ಯೆ ಬಗೆಹರಿಸಬೇಕು. ಬೆಂಗಳೂರು-ಮುಂಬಯಿ ಸೂಪರ್ ಫಾಸ್ಟ್ ರೈಲನ್ನು ದಾವಣಗೆರೆ-ಹುಬ್ಬಳ್ಳಿ ಬೆಳಗಾವಿ ಮಾರ್ಗದಲ್ಲಿ ಓಡಿಸಬೇಕು, ಹನುಮನಹಳ್ಳಿ ಫ್ಲಾಟ್‌ಫಾರ್ಮ್ ವಿಸ್ತರಿಸಬೇಕು. ದಾವಣಗೆರೆ ನಿಲ್ದಾಣದಲ್ಲಿ ಶೌಚಗೃಹ ವ್ಯವಸ್ಥೆ, ಹರಿಹರ ನಿಲ್ದಾಣದಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಕೋರಿದರು. ಇದಕ್ಕೆ ಸ್ಪಂದಿಸಿದ ಸಚಿವ ಸೋಮಣ್ಣ, ಎಲ್ಲ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಆನಗೋಡಲ್ಲೇ ಆಗಲಿ ಗೂಡ್‌ಶೆಡ್
ದಾವಣಗೆರೆಗೆ ಹತ್ತಿರವಿರುವ ಆನಗೋಡು ರೈತ ಸಂಪರ್ಕಕ್ಕೆ ಅನುಕೂಲಕರವಾಗಿದೆ. ಅಡಕೆ, ಮೆಕ್ಕೆಜೋಳ ವ್ಯಾಪಾರ ಇಲ್ಲಿಯೇ ಹೆಚ್ಚಿದೆ. ಬಾತಿ ಬಳಿ ಗೂಡ್‌ಶೆಡ್‌ನಿಂದ ಸಾಗಣೆ ವೆಚ್ಚ ಹೆಚ್ಚಲಿದೆ. ಆನಗೋಡನ್ನು ಪರಿಗಣಿಸಬೇಕು ಎಂದು ಶಾಸಕ ಕೆ. ಎಸ್. ಬಸವಂತಪ್ಪ ಮನವಿ ಮಾಡಿದರು.
ಆನಗೋಡು ಮುಖ್ಯ ಕೇಂದ್ರವಾಗಿದ್ದು, ಇಲ್ಲಿನ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಬೇಕು. ಮಾಯಕೊಂಡದಲ್ಲಿ ಇಂಟರ್‌ಸಿಟಿ ಹಾಗೂ ಇತರೆ ರೈಲುಗಳಿಗೆ ನಿಲುಗಡೆಗೆ ಅವಕಾಶ ನೀಡಲು ಕೋರಿದರು.
ಅಂಡರ್ ಪಾಸ್ ನಿರ್ಮಿಸಿ., ಜೀವ ಉಳಿಸಿ
ಸಚಿವ ವಿ. ಸೋಮಣ್ಣ ಅವರ ಆಗಮನಕ್ಕೂ ಮುನ್ನವೇ ಹಾಜರಿದ್ದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಬಳಿ ತೋಳಹುಣಸೆ ಗ್ರಾಮದ ಯಲ್ಲಮ್ಮನಗರದ ಬಾಲಕಿಯರ ಸರ್ಕಾರಿ ಶಾಲೆ ಮಕ್ಕಳು, ಶಿಕ್ಷಕರು ಅಳಲು ತೋಡಿಕೊಂಡರು.
ಮಕ್ಕಳು ಶಾಲೆಗೆ ಬರುವಾಗ, ಹೋಗುವಾಗ ರೈಲು ಹಳಿ ದಾಟಬೇಕಿದೆ. ಈ ಕಾರಣಕ್ಕೆ ಮಕ್ಕಳನ್ನು ಕಳುಹಿಸಲು ಪಾಲಕರು ಭಯಪಡುತ್ತಿದ್ದಾರೆ. ಗ್ರಾಮದಲ್ಲಿ ಇದೊಂದೇ ಶಾಲೆ ಉಳಿದಿದೆ. 8ನೇ ತರಗತಿ ವರೆಗೆ 120 ಬಾಲಕಿಯರು ಓದುತ್ತಿದ್ದಾರೆ. ರೈಲ್ವೆ ಹಳಿ ದಾಟಿಸುವ ಸಮಸ್ಯೆ ಕಾರಣಕ್ಕೆ ಅನೇಕ ಪಾಲಕರು ಮಕ್ಕಳನ್ನು ದೂರದ ಕುರ್ಕಿ ಶಾಲೆಗೆ ಕಳುಹಿಸುತ್ತಿದ್ದಾರೆ ಎಂದು ಶಿಕ್ಷಕರು ಸಮಸ್ಯೆ ಹೇಳಿಕೊಂಡರು. ಮಕ್ಕಳೂ ಸಹ ನಮಗೆ ದಿನವೂ ಹಳಿ ದಾಟುವುದು ಕಷ್ಟವಾಗುತ್ತಿದೆ ಎಂದು ಹೇಳಿಕೊಂಡರು.
ಅಂಡರ್‌ಪಾಸ್ ನಿರ್ಮಿಸಿದರೆ ಶಾಲಾ ಮಕ್ಕಳು, ಕೂಲಿ ಕಾರ್ಮಿಕರಿಗೂ ಅನುಕೂಲವಾಗಲಿದೆ ಎಂದು ಗ್ರಾಮಸ್ಥರೂ ಮನವಿ ಮಾಡಿದರು. ಈ ಬಗ್ಗೆ ಸಚಿವರ ಬಳಿ ಸಂಸದರು ಪ್ರಸ್ತಾಪಿಸಿದರು.