protest ವಾರದ ಸಂತೆ ಸ್ಥಳಾಂತರಕ್ಕೆ ವಿರೋಧಿಸಿ ಹರಿಹರದಲ್ಲಿ ಮಂಗಳವಾರ ಬೀದಿಬದಿ ವ್ಯಾಪಾರಸ್ಥರು ಶಿವಮೊಗ್ಗ ರಸ್ತೆಯ ಸಂತೆ ನಡೆಯುವ ಸ್ಥಳದಲ್ಲಿ ತೀವ್ರ ಪ್ರತಿಭಟನೆ ನಡೆಸಿದರು. 
ದಾವಣಗೆರೆ

ವಾರದ ಸಂತೆ ಸ್ಥಳಾಂತರ ವಿರೋಧಿಸಿ ವ್ಯಾಪಾರಸ್ಥರಿಂದ ಪ್ರತಿಭಟನೆ protest

ಹರ್ಷ ನ.ಪುರೋಹಿತ

ಪ್ರಮುಖ ಮುಖ್ಯಾಂಶಗಳು

  • ಹರಿಹರದಲ್ಲಿ ಬೀದಿಬದಿ ವ್ಯಾಪಾರಿಗಳ ಹೈಡ್ರಾಮಾ
  • ಸ್ಥಳಕ್ಕೆ ನಗರಸಭೆ ಅಧಿಕಾರಿಗಳ ಭೇಟಿ
  • ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಮಧ್ಯಪ್ರವೇಶದಿಂದ ತಾತ್ಕಾಲಿಕ ತಡೆ
ಹರಿಹರ: ನಗರದಲ್ಲಿ ನಡೆಯುವ ವಾರದ ಸಂತೆ ಸ್ಥಳಾಂತರಕ್ಕೆ ವಿರೋಧಿಸಿ ವ್ಯಾಪಾರಸ್ಥರು ನಡೆಸಿದ ಪ್ರತಿಭಟನೆ, ಸ್ಥಳಕ್ಕೆ ನಗರಸಭೆ ಅಧಿಕಾರಿಗಳ ಭೇಟಿ, ಕಾಂಗ್ರೆಸ್ ಮುಖಂಡರ ಮಧ್ಯಪ್ರವೇಶ ಹಾಗೂ ಸ್ಥಳಾಂತರ ಪ್ರಕ್ರಿಯೆಗೆ ತಾತ್ಕಾಲಿಕ ತಡೆ.. protest
ಎಂದಿನಂತೆ ಸಂತೆ ಮುಂದುವರಿದ ಹೈಡ್ರಾಮಾಗೆ ಮಂಗಳವಾರ ನಗರ ಸಾಕ್ಷಿಯಾಯಿತು.
ಶಿವಮೊಗ್ಗ ರಸ್ತೆಯಲ್ಲಿ ದಶಕಗಳಿಂದ ನಡೆಯುತ್ತಿದ್ದ ವಾರದ ಸಂತೆಯನ್ನು ಏಕಾಏಕಿ ಎಪಿಎಂಸಿ (APMC) ಆವರಣಕ್ಕೆ ಸ್ಥಳಾಂತರಿಸಲು ಮುಂದಾದ ನಗರಸಭೆ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಬೀದಿಬದಿ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿದರು. ಅಧಿಕಾರಿಗಳು ಹಾಗೂ ವ್ಯಾಪಾರಸ್ಥರ ನಡುವಿನ ವಾಗ್ವಾದದ ಬಳಿಕ ಕಾಂಗ್ರೆಸ್ ಮುಖಂಡರು ಮಧ್ಯಪ್ರವೇಶಿಸಿದ್ದರಿಂದ ಎಂದಿನಂತೆ ಹಳೇ ಜಾಗದಲ್ಲೇ ಸಂತೆ ಮುಂದುವರಿಯಿತು.

ಸ್ಥಳಾಂತರ ನಿರ್ಧಾರದ ಹಿನ್ನೆಲೆ

ಕಳೆದ ಮೇ 26ರಂದು ಶಾಸಕರ ಅಧ್ಯಕ್ಷತೆಯಲ್ಲಿ ತಾಪಂ ಸಭಾಂಗಣದಲ್ಲಿ ನಡೆದಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಸಂತೆಯನ್ನು ಊರಮ್ಮ ದೇವಸ್ಥಾನದ ಮುಂಭಾಗದಿಂದ ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸಲು ತೀರ್ಮಾನಿಸಲಾಗಿತ್ತು. ಈ ನಿರ್ಧಾರದ ಬೆನ್ನಲ್ಲೇ ನಗರಸಭೆ ಅಧಿಕಾರಿಗಳು ಮಂಗಳವಾರ ಏಕಾಏಕಿ ಸ್ಥಳಾಂತರ ಕಾರ್ಯಾಚರಣೆಗೆ ಮುಂದಾಗಿದ್ದರು. ಅಧಿಕಾರಿಗಳ ಈ ದಿಢೀರ್ ನಡೆಗೆ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ಹಾಗೂ ನೂರಾರು ವ್ಯಾಪಾರಿಗಳು ತೀವ್ರ ಆಕ್ರೋಶ ಹೊರಹಾಕಿದರು.

ಮೂಲಸೌಕರ್ಯಗಳ ಕೊರತೆಗೆ ಆಕ್ರೋಶ

ನಗರಸಭೆಯು ಹೊಸದಾಗಿ ಗುರುತಿಸಿರುವ ಎಪಿಎಂಸಿ ಜಾಗವು ನಗರದಿಂದ ಸುಮಾರು 3 ಕಿ.ಮೀ. ದೂರದಲ್ಲಿದೆ. ಅಲ್ಲಿಗೆ ಗ್ರಾಹಕರು ಬಂದು ಹೋಗಲು ಸೂಕ್ತ ಸಾರಿಗೆ ವ್ಯವಸ್ಥೆಯಿಲ್ಲ. ಇದರೊಂದಿಗೆ, ಬೆಳಿಗ್ಗೆಯಿಂದ ಸಂಜೆಯವರೆಗೆ ವ್ಯಾಪಾರ ಮಾಡುವವರಿಗೆ ಕುಡಿಯುವ ನೀರು ಹಾಗೂ ಶೌಚಗೃಹದಂತಹ ಕನಿಷ್ಠ ಮೂಲಸೌಕರ್ಯಗಳನ್ನೂ ಕಲ್ಪಿಸಿಲ್ಲ" ಎಂದು ವ್ಯಾಪಾರಿಗಳು ಕಿಡಿಕಾರಿದರು. ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಸಂತೆಯನ್ನು ಸ್ಥಳಾಂತರಿಸಿದರೆ ದೈನಂದಿನ ವ್ಯಾಪಾರ ಸಂಪೂರ್ಣವಾಗಿ ಕುಸಿದು, ನೂರಾರು ಬಡ ಕುಟುಂಬಗಳು ಬೀದಿಗೆ ಬೀಳಲಿವೆ. ಹೀಗಾಗಿ ಯಾವುದೇ ಕಾರಣಕ್ಕೂ ಎಪಿಎಂಸಿಗೆ ಹೋಗುವುದಿಲ್ಲ ಎಂದು ಪಟ್ಟುಹಿಡಿದು, ಏಕಪಕ್ಷೀಯ ನಿರ್ಧಾರವನ್ನು ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆಯನ್ನು ತೀವ್ರಗೊಳಿಸಿದರು.

ಡಿಸಿ ಮಧ್ಯಪ್ರವೇಶ - ಮೌಖಿಕ ಆದೇಶ

ವಿಷಯ ತಿಳಿದು ತಕ್ಷಣವೇ ಸ್ಥಳಕ್ಕಾಗಮಿಸಿದ ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಪ್ರತಿಭಟನಾ ಸ್ಥಳದಿಂದಲೇ ಜಿಲ್ಲಾಧಿಕಾರಿಗಳಿಗೆ (DC) ದೂರವಾಣಿ ಕರೆ ಮಾಡಿ ವಾಸ್ತವಿಕ ಸ್ಥಿತಿಗತಿಯನ್ನು ಮನವರಿಕೆ ಮಾಡಿಕೊಟ್ಟರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಜಿಲ್ಲಾಧಿಕಾರಿಗಳು, ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೆ ತಾತ್ಕಾಲಿಕವಾಗಿ ಹಳೇ ಜಾಗದಲ್ಲೇ ಸಂತೆ ಮುಂದುವರಿಸಲು ಮೌಖಿಕವಾಗಿ ಸೂಚನೆ ನೀಡಿದರು.
ಬಳಿಕ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ನಂದಿಗಾವಿ ಶ್ರೀನಿವಾಸ್, "ಶೀಘ್ರದಲ್ಲೇ ಬೀದಿಬದಿ ವ್ಯಾಪಾರಸ್ಥರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜಂಟಿ ಸಭೆ ಕರೆದು, ಸರ್ವಸಮ್ಮತ ತೀರ್ಮಾನ ಕೈಗೊಳ್ಳೋಣ. ಅಲ್ಲಿಯವರೆಗೆ ನೀವೆಲ್ಲರೂ ಇಲ್ಲೇ ವ್ಯಾಪಾರ ಮುಂದುವರಿಸಿ" ಎಂದು ಭರವಸೆ ನೀಡಿದ ಬಳಿಕ ವ್ಯಾಪಾರಸ್ಥರು ಪ್ರತಿಭಟನೆಯನ್ನು ಕೈಬಿಟ್ಟರು. ನಂತರ ವಾರದ ಸಂತೆ ಎಂದಿನಂತೆ ಶಿವಮೊಗ್ಗ ರಸ್ತೆಯಲ್ಲೇ ಸುಗಮವಾಗಿ ಜರುಗಿತು.