ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ
ಜಿಲ್ಲೆಯ ಅತ್ಯಂತ ಹಿಂದುಳಿದ ಕ್ಷೇತ್ರ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಕೆ.ಎಸ್. ಬಸವಂತಪ್ಪ ಸೇರಿದಂತೆ ಇದುವರೆಗಿನ ಯಾವ ಶಾಸಕರೂ ಕ್ಷೇತ್ರದಲ್ಲಿ ಜನಸಂಪರ್ಕ ಕಚೇರಿ ಆರಂಭಿಸಿಲ್ಲ.
1978ರಲ್ಲಿ ಮಾಯಕೊಂಡ ಕ್ಷೇತ್ರ ಅಸ್ತಿತ್ವಕ್ಕೆ ಬಂದಿದ್ದು, ಈ ಕ್ಷೇತ್ರದಿಂದ ಆಯ್ಕೆಯಾಗಿರುವ ಎಲ್ಲ ಶಾಸಕರು ದಾವಣಗೆರೆ ಜಿಲ್ಲಾ ಕೇಂದ್ರದಲ್ಲೇ ನೆಲೆಸಿದ್ದಾರೆ. ಪ್ರಸ್ತುತ ಶಾಸಕ ಹಾಗೂ ಸಚಿವರಾಗಿರುವ ಕೆ.ಎಸ್. ಬಸವಂತಪ್ಪ ಸೇರಿ ನಾಗಮ್ಮ ಕೇಶವಮೂರ್ತಿ, ಕೆ. ಮಲ್ಲಪ್ಪ, ಎಸ್.ಎ. ರವೀಂದ್ರನಾಥ್, ಎಂ. ಬಸವರಾಜ ನಾಯ್ಕ, ಕೆ. ಶಿವಮೂರ್ತಿ ನಾಯ್ಕ ಹಾಗೂ ಪ್ರೊ. ಎನ್. ಲಿಂಗಣ್ಣ ಅವರೆಲ್ಲರೂ ದಾವಣಗೆರೆ ನಗರದಲ್ಲೇ ವಾಸವಾಗಿದ್ದರು. ಶಾಸಕರನ್ನು ಭೇಟಿ ಮಾಡಲು ಕ್ಷೇತ್ರದ ಜನ ದಾವಣಗೆರೆಗೆ ಹೋಗಬೇಕು. 1978ರಿಂದ ಇದುವರೆಗೆ ಕ್ಷೇತ್ರವನ್ನು ಪ್ರತಿನಿಧಿಸಿದ ಯಾರೊಬ್ಬರೂ ಸಹ ಕ್ಷೇತ್ರದ ಕೇಂದ್ರ ಗ್ರಾಮವಾದ ಮಾಯಕೊಂಡ ಅಥವಾ ಇತರ ಪ್ರಮುಖ ಹೋಬಳಿ ಕೇಂದ್ರಗಳಲ್ಲಿ ಜನಸಂಪರ್ಕ ಕಚೇರಿ ಆರಂಭಿಸದಿರುವುದು ಕ್ಷೇತ್ರದ ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಸದ್ಯ ಮಾಯಕೊಂಡ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಚಿವ ಕೆ. ಬಸವಂತಪ್ಪ ಅವರು ದಾವಣಗೆರೆಯ ಹಳೆ ಪ್ರವಾಸಿ ಮಂದಿರದಲ್ಲಿ ಜನರನ್ನು ಭೇಟಿ ಮಾಡು ತ್ತಿದ್ದಾರೆ. ಶಾಸಕರಾಗಿದ್ದಾಗ ಅವರನ್ನು ಭೇಟಿ ಮಾಡುವುದು ಅಷ್ಟೊಂದು ಸಮಸ್ಯೆ ಯಾಗುತ್ತಿರಲಿಲ್ಲ. ಈಗ ಸಚಿವರಾಗಿರುವುದರಿಂದ ರಾಜ್ಯದಲ್ಲಿ ಪ್ರವಾಸ ಮಾಡ ಬೇಕಾಗುತ್ತದೆ. ಹೀಗಾಗಿ ನಿಗದಿತ ದಿನದಂದು ಜನಸಂಪರ್ಕ ಕಚೇರಿಯಲ್ಲಿ ಸಾರ್ವಜನಿಕರ ಭೇಟಿಗೆ ಅವಕಾಶ ಮಾಡಿದರೆ ಅನುಕೂಲವಾಗಲಿದೆ ಎಂಬುದು ಕ್ಷೇತ್ರದ ಜನರ ಅಭಿ ಪ್ರಾಯ. ಉಪಚುನಾವಣೆಯಲ್ಲಿ ಗೆದ್ದಿರುವ ಸಮರ್ಥ ಶಾಮನೂರು ಅವರೂ ಕೂಡ ಈಗಾಗಲೇ ಹಳೆ ದಾವಣಗೆರೆಯಲ್ಲಿ ಜನಸಂಪರ್ಕ ಕಚೇರಿ ಆರಂಭಿಸಿದ್ದಾರೆ. ಸಚಿವರಿಗೆ ಕ್ಷೇತ್ರದಲ್ಲಿ ಕಚೇರಿ ಆರಂಭಿಸುವುದು ಸಮಸ್ಯೆ ಏನಲ್ಲ. ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಜನ ಆಗ್ರಹಪಡಿಸಿದ್ದಾರೆ.
ಶಾಸಕರು ಆನಗೋಡು, ಮಾಯಕೊಂಡ, ಬಸವಾಪಟ್ಟಣದಂತಹ ಪ್ರಮುಖ ಹೋಬಳಿ ಕೇಂದ್ರಗಳಲ್ಲಿ ಆಡಳಿತ ಕಚೇರಿ ತೆರೆದು ಸಾರ್ವಜನಿಕರ ಕುಂದುಕೊರತೆ ಆಲಿಸಬೇಕು.ಗುಮ್ಮನೂರು ಬಸವರಾಜ್ , ಜಿಲ್ಲಾಧ್ಯಕ್ಷ, ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ)
ಕೆ.ಎಸ್. ಬಸವಂತಪ್ಪನವರು ರಾಜ್ಯದ ಸಚಿವರಾಗಿದ್ದು, ಕ್ಷೇತ್ರದ ಅಭಿವೃದ್ಧಿಯ ಹಿತದೃಷ್ಟಿಯಿಂದ ಮಾಯಕೊಂಡ ಗ್ರಾಮದಲ್ಲೇ ತಕ್ಷಣ ಆಡಳಿತ ಕಚೇರಿ ಪ್ರಾರಂಭಿಸಬೇಕು.ಜಿ.ಎಲ್. ಸುನಿಲ್ ಯುವ ಮುಖಂಡ, ಮಾಯಕೊಂಡ.