- 2 ಲಕ್ಷ ರೂ. ನೀಡಿದರೆ ಕಳ್ಳತನದ ತರಬೇತಿ
- 17 ವರ್ಷದೊಳಗಿನ ಅಪ್ರಾಪ್ತರಿಗೆ ಮಣೆ
- ಬ್ಯಾಂಡ್ ಬಾಜಾ ತಂಡದ ಮೇಲಿದೆ 400ಕ್ಕೂ ಹೆಚ್ಚು ಕೇಸ್
ದಾವಣಗೆರೆ: ಇದನ್ನು ಯಾವ ಯುನಿವರ್ಸಿಟಿ ಅಂಥಾ ಕರೆಯಬೇಕೋ ಗೊತ್ತಿಲ್ಲ! ಎರಡು ಲಕ್ಷ ರೂ.ಕೊಟ್ಟು ಪ್ರವೇಶ ಪಡೆದರೆ ತಿಂಗಳೊಪ್ಪತ್ತಲ್ಲಿ ಕಳ್ಳತನ ಕಲಿಸಿ ಪಕ್ಕಾ ಕಳ್ಳರನ್ನಾಗಿ ರೂಪಿಸಿ ಬೀಳ್ಕೊಡುತ್ತಾರಂತೆ! ಇದು ವಿಚಿತ್ರ ಆದರೂ ಸತ್ಯ. ನೆರೆಯ ಮಧ್ಯಪ್ರದೇಶದ ರಾಜಘರ್ ಜಿಲ್ಲೆಯ ಗುಲ್‌ಖೇಡಾ, ಹುಲ್ ಖೇಡಾ, ಕಡಿಯಾ ಸಾಂಸಿ ಗ್ರಾಮಗಳಲ್ಲಿ ಕಳವು ಕಲಿಸಲೆಂದೇ ತರಬೇತಿ ಕೇಂದ್ರಗಳಿವೆಯಂತೆ.
ಬ್ಯಾಂಡ್ ಬಾಜಾ ಅಥವಾ ಸನ್ ಸಿಸೋಡಿಯಾ ಗ್ಯಾಂಗ್‌ಗಳಿಗೆ ಈ ಕೇಂದ್ರಗಳೇ ತವರು. ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಮಾಲು ಸಮೇತ ಪಾರಾಗುವ ಕುರಿತು ಇಲ್ಲಿ ತರಬೇತಿ ನೀಡಲಾಗುತ್ತದಂತೆ.
ಪಿಕ್‌ಪಾಕೆಟ್, ದರೋಡೆ, ಜನಸಂದಣಿ ಮಧ್ಯೆ ಕಳವು, ಓಡುವ ವೇಗ, ಪೊಲೀಸರಿಂದ ತಪ್ಪಿಸಿಕೊಳ್ಳುವ ಪರಿ ಕುರಿತು ಬಾಲ್ಯದಲ್ಲಿಯೇ ತರಬೇತಿ ನೀಡಲಾಗುತ್ತದೆ.
ಅಪ್ರಾಪ್ತರಾದರೆ ಪೊಲೀಸ್ ಕೇಸುಗಳಿಂದ ಪಾರಾಗಬಹುದು, ಶಿಕ್ಷೆ ಪ್ರಮಾಣ ಕಡಿಮೆ, ಜಾಮೀನು ಕೂಡ ಬೇಗ ಸಿಗಲಿದೆ ಎಂಬುದನ್ನೇ ಬಂಡವಾಳ ಮಾಡಿಕೊಂಡು 17 ವರ್ಷ ಒಳಗಿನ ಮಕ್ಕಳನ್ನೇ ಅಣಿಗೊಳಿಸಿ ಕಳ್ಳತನಕ್ಕೆ ಬಳಸಿಕೊಳ್ಳಲಾಗುತ್ತದೆ.
ಬ್ಯಾಂಡ್ ಬಾಜಾ ಹೆಸರಿನ ಈ ಗ್ಯಾಂಗ್‌ಗಳಿಗೆ ಭರ್ಜರಿ ಮದುವೆಗಳೇ ಟಾರ್ಗೆಟ್. ರೆಸಾರ್ಟ್/ ದೊಡ್ಡ ಕಲ್ಯಾಣಮಂಟಪಗಳಲ್ಲಿ ನಡೆಯುವ ಮದುವೆಗೆ ಶ್ರೀ ಮಂತರ ಸೋಗಿನಲ್ಲೇ ಹೋಗಿ ಭಾಗಿಯಾಗುತ್ತಾರೆ.
ಜನರ ಗಮನ ಬೇರೆಯಾಗುವುದನ್ನೇ ಗಮನಿಸಿ ಕ್ಷಣಾರ್ಧದಲ್ಲಿ ಚಿನ್ನಾಭರಣ ದೋಚುತ್ತಾರೆ. ಪೊಲೀಸರಿಗೆ ಸಾಕ್ಷೃ ಸಿಗದಂತೆ ಮಾಡಿ, ದಾರಿ ತಪ್ಪಿಸುವ ಕಲೆ ಇವರಿಗೆ ಕರಗತ. ಮೂಲಗಳ ಪ್ರಕಾರ ಈ ತಂಡದ ವಿರುದ್ಧ ದೇಶಾದ್ಯಂತ 400ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಆಭರಣ ರಿಕವರಿಗಾಗಿ ಪೊಲೀಸರ ಮಾರುವೇಷ
ದಾವಣಗೆರೆ ಹೊರವಲಯದ ಅಪೂರ್ವ ರೆಸಾರ್ಟ್‌ನಲ್ಲಿ ನ.14ರಂದು ಆಯೋಜಿಸಿದ್ದ ವಿವಾಹ ವೇಳೆ ಅಲ್ಲಿಗೆ ಭೇಟಿ ನೀಡಿದ್ದ ಬ್ಯಾಂಡ್ ಬಾಜಾ ಗ್ಯಾಂಗ್‌ನ ಇಬ್ಬರು ಕಳ್ಳರು ಪದ್ಮಾವತಿ ಎಂಬುವರ 67.48 ಲಕ್ಷ ರೂ. ಮೌಲ್ಯದ ಚಿನ್ನಾಭರಣದ ಬ್ಯಾಗ್ ಕಳವು ಮಾಡಿ ಪರಾರಿಯಾಗಿದ್ದರು.
ಇಂಥದ್ದೊಂದು ತಂಡದ ಬೇಟೆಗೆ 1500 ಕಿಮೀ ದೂರದ ಮಧ್ಯಪ್ರದೇಶದ ಪಚೋರಿ ನಗರಕ್ಕೆ ದಾವಣಗೆರೆ ಪೊಲೀಸರು ತೆರಳಿದ್ದರು.15 ದಿನಗಳ ಕಾಲ ಮಾರು ವೇಷದಲ್ಲಿ ತಂಗಿದ್ದು, ಆರೋಪಿತರ ಇರುವಿಕೆ ಮಾಹಿತಿ ಸಂಗ್ರಹಿಸಿ, ಸ್ಥಳೀಯ ಪೊಲೀಸರ ಮತ್ತು ಬಾತ್ಮೀದಾರರ ಸಹಾಯದಿಂದ 51.49 ಲಕ್ಷ ರೂ. ಮೌಲ್ಯದ ಆಭರಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿತರಾದ, ಮಧ್ಯಪ್ರದೇಶ ರಾಜ್ಯದ ರಾಜ್‌ಗಡ್ ಜಿಲ್ಲೆಯ ನರಸಿಂಗ್ ತಾಲೂಕಿನ ಗುಲ್‌ಖೇಡಾ ಗ್ರಾಮದ ಕರಣ್‌ವರ್ಮಾ ಹಾಗೂ ವಿನಿತ್ ಸಿಸೊಡಿಯಾ ಪರಾರಿಯಾಗಿದ್ದಾರೆ.
ಆರೋಪಿತರ ಪತ್ತೆಗೆ 250 ಸಿಸಿ ಟಿವಿ, 15 ಟೋಲ್‌ಗೇಟ್‌ಗಳಲ್ಲಿ ಪರಿಶೀಲನೆ ನಡೆಸಲಾಗಿತ್ತು. ತಾಂತ್ರಿಕ ಮಾಹಿತಿ, ಹಿರಿಯ ಅಧಿಕಾರಿಗಳ ಅನುಭವ ಆಧರಿಸಿ ಮಧ್ಯಪ್ರದೇಶಕ್ಕೆ ತಂಡವನ್ನು ಕಳುಹಿಸಲಾಗಿತ್ತು. ಹೊರರಾಜ್ಯದಲ್ಲಿ ಆಭರಣ ರಿಕವರಿ ಮಾಡುವುದೇ ಕಷ್ಟ. ನಮ್ಮ ತಂಡ ಕ್ಲಿಷ್ಟಕರ ಪ್ರಕರಣವನ್ನು ಭೇದಿಸಿದೆ.