ಸಿದ್ದನೂರಿನಲ್ಲಿ ಬೆಳೆದಿರುವ ಸಾಂಬಾರ್ ಸೌತೆಯ ಹೊಲ.  
ದಾವಣಗೆರೆ

ಸಾಂಬಾರ್ ಸೌತೆ ಕೇಳೋರಿಲ್ಲ ಸ್ವಾಮಿ..!

ಪ್ರಮುಖ ಮುಖ್ಯಾಂಶಗಳು

  • ಹೊಲಗಳಲ್ಲುಳಿದ ಲಕ್ಷಾಂತರ ಫಸಲು
  • ಸಿದ್ದನೂರು ರೈತರಿಗೆ ಸಿಗದ ಅಸಲು!
  • ಖರೀದಿಗೆ ಬಾರದ ವರ್ತಕರು

ದಾವಣಗೆರೆ: ‘ ಕಳೆದ್ಸಲ ಮೆಕ್ಕೆಜೋಳ ಬೆಳೆದಿದ್ವಿ, ಒಳ್ಳೇ ಫಸಲೂ ಬಂದಿತ್ತು, ಆದ್ರೆ ರೇಟು ಸಿಗ್ಲಿಲ್ಲ. ಬಂದಿದ್ದೆಲ್ಲ ಗೊಬ್ಬರ-ಔಷಧಿ ಖರ್ಚಿಗೆ ಸರಿಹೋಯ್ತು. ಈ ಸಲ ಸಾಂಬಾರ್ ಸೌತೆ ಬೆಳೆದ್ರೆ ಅದರ ಕತೆನೂ ಹಂಗೇ ಆಯ್ತು. ಕೆಜಿಗೆ 1 ರೂಪಾಯಿ ಕೂಡ ಸಿಗ್ತಾ ಇಲ್ಲ. ಸಾಂಬಾರ್ ಸೌತೇನ ಯಾರೂ ಕೇಳೋರಿಲ್ಲ ಸ್ವಾಮಿ..!’

ದಾವಣಗೆರೆ ತಾಲೂಕಿನ ಸಿದ್ದನೂರಿನಲ್ಲಿ ಸಾಂಬಾರ್ ಸೌತೆ ಬೆಳೆದ ಬಹುತೇಕ ರೈತರ ಅಳಲಿದು. ಕಳೆದ ವರ್ಷ ಕಿಲೋಗೆ 20 ರೂ.ವರೆಗೆ ಮಾರುಕಟ್ಟೆ ಇದ್ದ ಸಾಂಬಾರ್ ಸೌತೆಗೆ ಈ ಬಾರಿ 1 ರೂ. ಕೂಡ ದರ ಇಲ್ಲ. ಹೀಗಾಗಿ ಇದೊಂದೇ ಗ್ರಾಮದಲ್ಲಿ 25ಕ್ಕೂ ಹೆಚ್ಚು ಬೆಳೆಗಾರರು ಬೆಳೆದ ಸುಮಾರು 40 ಎಕರೆಯಷ್ಟು ಫಸಲು ಹೊಲದಲ್ಲೇ ಉಳಿದಿದೆ!
ನಿಗದಿಯಂತೆ ಈ ಬೆಳೆಗೆ ಎರಡು ತಿಂಗಳ ಆಯಸ್ಸು ಮುಗಿದಿದೆ. ಮಾತು ನೀಡಿದ್ದ ವರ್ತಕರು ಹೊಲದ ಬಳಿ ಸುಳಿಯುತ್ತಲೂ ಇಲ್ಲ. ಇತ್ತ ಸುಮಾರು 2ರಿಂದ 3ಕೆಜಿಯಷ್ಟು ತೂಗುವ ಮಾಗಿದ ಸಾಂಬಾರ್ ಸೌತೆ, ಹಸಿರು ಬಣ್ಣದಿಂದ ಕೆಂಬಣ್ಣಕ್ಕೆ ತಿರುಗುತ್ತಿದೆ.
ಅವನ್ನು ಮಾರಾಟಗಾರರು ಕೊಳ್ಳುವುದೂ ಇಲ್ಲ. ಸೌತೆಕಾಯಿ ಕೀಳಲು ಕಾರ್ಮಿಕರಿಗೆ ಕೂಲಿ, ಚೀಲಗಳ ಖರೀದಿ, ಸಾಗಣೆ ವೆಚ್ಚ ಹಾಕಿ ಇತರೆಡೆ ಮಾರಾಟ ಮಾಡಿದರೆ ಮತ್ತೆ ಕೈಸುಟ್ಟುಕೊಳ್ಳುವ ಭೀತಿ ಇರುವುದರಿಂದ ರೈತರು ತಟಸ್ಥನೀತಿ ಅನುಸರಿಸಿದ್ದಾರೆ.
ಕಳೆದ ಬಾರಿ ಸಾಂಬಾರ್ ಸೌತೆಗೆ ಉತ್ತಮ ದರ ಸಿಕ್ಕಿದ್ದರಿಂದಾಗಿ ಹೆಚ್ಚಿನ ಸಂಖ್ಯೆಯ ರೈತರು ಇದರತ್ತ ಮಾರುಹೋದರು. ನಿರೀಕ್ಷೆಯಂತೆ ಎಲ್ಲರ ಹೊಲದಲ್ಲಿ ಎಕರೆಗೆ ಗರಿಷ್ಠ 20 ಟನ್‌ನಂತೆ ಸಾಂಬಾರ್ ಸೌತೆಗಳು ನಳನಳಿಸಿದವು.
ಇದಲ್ಲದೆ ಮಾರಾಟಗಾರರು ಕೂಡ ಸಾಂಬಾರ್ ಸೌತೆ ಹೆಚ್ಚು ಬೆಳೆಯಲು ಸಲಹೆ ನೀಡಿದ್ದೂ ಸಹ ಮುಳುವಾಯಿತು. ದರ ಪಾತಾಳಕ್ಕೆ ಕುಸಿದ ಬಳಿಕ ಲಕ್ಷಾಂತರ ರೂ. ಮೌಲ್ಯದ ಹೈಬ್ರೀಡ್ ಸೌತೆಕಾಯಿಗಳು ನೆಲದಲ್ಲೇ ಸೊರಗುತ್ತಿವೆ. ಕೊಳೆಯಲು ದಿನಗಣನೆ ಎಣಿಸುತ್ತಿವೆ! ಬೀಜ ತಯಾರಿಕೆಗೆ ಒತ್ತು ನೀಡಿ ಎಂದು ಕೆಲ ಕಂಪನಿಗಳು ಸಲಹೆ ನೀಡುತ್ತವೆ. ಅದಕ್ಕೆ ಪೂರಕ ವ್ಯವಸ್ಥೆ ಮಾಡುವ ವ್ಯವಧಾನ ಇಲದೆ ರೈತರು ಈ ಆಲೋಚನೆಯಿಂದ ವಿಮುಖರಾಗಿದ್ದಾರೆ.
ವರ್ತಕರು ಖರೀದಿಸುತ್ತಿದ್ದ ಇಲ್ಲಿನ ಸಾಂಬಾರ್ ಸೌತೆ ಧರ್ಮಸ್ಥಳ ಸೇರಿ ಕೆಲವು ಧರ್ಮಕ್ಷೇತ್ರ ತಲುಪಿ ಘಮಘಮಿಸುತ್ತಿದ್ದವು. ಬೆಂಗಳೂರು, ಮಂಗಳೂರು, ನೆರೆಯ ಮಹಾರಾಷ್ಟ್ರ, ಕೋಲ್ಕತ್ತದಲ್ಲೂ ಬೇಡಿಕೆ ಇತ್ತು. ಆದರೆ ಈ ಬಾರಿ ಸಿದ್ದನೂರಿನ ಗಡಿ ಕೂಡ ದಾಟದಂತಾಗಿದೆ.
ಬರಗಾಲದ ಇಂದಿನ ಸನ್ನಿವೇಶದಲ್ಲಿ ಇದು ಸಿದ್ದನೂರಿನ ರೈತರ ಗೋಳಾಗಿ ಉಳಿದಿಲ್ಲ. ಅಗಸನಕಟ್ಟೆ, ಕಾಟೇಹಳ್ಳಿ ಇತರೆ ಗ್ರಾಮಗಳಲ್ಲೂ ಬೆಳೆದ ಸಾಂಬಾರ್ ಸೌತೆಗೆ ಮಾರುಕಟ್ಟೆ ಇಲ್ಲ. ತೋಟಗಾರಿಕೆ ಇಲಾಖೆಯಿಂದ ನಷ್ಟ ಪರಿಹಾರವೂ ದಕ್ಕದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಈ ಬೆಳೆಯ ವಿಸ್ತೀರ್ಣ ತಗ್ಗಬಹುದು. ಕೋಳಿ ಕೇಳಿ ಸಾಂಬಾರ್ ಅರೆಯಂಗಿಲ್ಲ ಎಂಬ ಗಾದೆಯಂತೆ ವೆಂಡರ್ ಕೇಳಿ ಸಾಂಬಾರ್‌ಸೌತೆ ಬೆಳೆಯಬೇಕಿಲ್ಲ ಎಂಬುದೂ ಜನಜನಿತ ಆಗಬಹುದು!

ಮೂರು ಎಕರೆಯಲ್ಲಿ ಸಾಂಬಾರ್ ಸೌತೆ ಬೆಳೆದಿದ್ದು 60 ಟನ್‌ನಷ್ಟು ಕಾಯಿ ಬಿಟ್ಟಿವೆ. ತಲಾ ಎಕರೆಗೆ 20ರಿಂದ 25 ಸಾವಿರ ರೂ. ವೆಚ್ಚವಾಗಿದೆ. ದರ ಕುಸಿದಿದ್ದು ಹಾಕಿದ ಬಂಡವಾಳವೂ ಬರದಂತಾಗಿದೆ. ನಮ್ಮ ಕಷ್ಟಕ್ಕೆ ಅಧಿಕಾರಿಗಳೂ ಸ್ಪಂದಿಸುತ್ತಿಲ್ಲ.

— ಸಿದ್ದಪ್ಪ, ಸಿದ್ದನೂರು ರೈತ.

ಕಳೆದ ಬಾರಿ ಮೆಕ್ಕೆಜೋಳ, ರಾಗಿ ಬೆಳೆದಿದ್ದೆವು. ಈ ಬಾರಿ ಭೂಮಿಗೆ ಕಸುವು ಬರಲಿ ಎಂದು 2 ಎಕರೆಯಲ್ಲಿ ಸಾಂಬಾರ್ ಸೌತೆ ಹಾಕಿದ್ದೇನೆ. ತಲಾ ಕಾಯಿಗೆ 4ರಿಂದ 5 ರೂ. ಸಿಕ್ಕಿದ್ದರೂ ಅನುಕೂಲವಿತ್ತು. ಕಾಯಿ ಖರೀದಿಯಾಗದೆ ಹೊಲದ ಬಳಿಗೆ ಬರಲು ಬೇಸರವಾಗಿದೆ. ಮಳೆ ಬಂದಲ್ಲಿ ಇದೇ ಜಾಗದಲ್ಲಿ ರಾಗಿ ಬಿತ್ತುವ ಆಲೋಚನೆ ಇದೆ.

— ಎ.ಎಸ್. ರಾಜಕುಮಾರ್, ಸಿದ್ದನೂರು ರೈತ.

ಅಡಿಕೆ ಮಧ್ಯೆಯೇ 6 ಎಕರೆ ಸಾಂಬಾರ್ ಸೌತೆ ಬೆಳೆದಿದ್ದೇವೆ. ಸುಮಾರು 1.20 ಲಕ್ಷ ರೂ.ನಷ್ಟು ಖರ್ಚು ಮಾಡಿದ್ದೇವೆ. 15 ದಿನದಿಂದ ಕರೆದರೂ ಖರೀದುದಾರರು ಹೊಲದ ಬಳಿಗೆ ಬರುತ್ತಿಲ್ಲ. ಈಗಿರುವ ಪರಿಸ್ಥಿತಿಯಲ್ಲಿ ಬಂಡವಾಳ ವಾಪಾಸು ಸಿಗುವ ಲಕ್ಷಣವಿಲ್ಲ.

— ಎಸ್.ಎಂ. ಕರಿಬಸಪ್ಪ, ಸಿದ್ದನೂರು ರೈತ.