ಹರಿಹರದಲ್ಲಿ ಅಂಜುಮನ್ ಖಲಮ್ ಕಾರಾನ್-ಎ-ಉರ್ದು ಸಂಸ್ಥೆಯಿಂದ ಶನಿವಾರ ಆಯೋಜಿಸಿದ್ದ ಉರ್ದು ಕವಿ ಗೋಷ್ಠಿಯಲ್ಲಿ ಭಾಗವಹಿಸಿದ್ದ ಕವಿಗಳು. Urdu 
ದಾವಣಗೆರೆ

ಕರ್ನಾಟಕದಲ್ಲಿ ಉದಯಿಸಿದ ಉರ್ದು ಭಾಷೆ ದೇಶಕ್ಕೆ ವಿಸ್ತರಣೆ

ಪ್ರಮುಖ ಮುಖ್ಯಾಂಶಗಳು

  • ಪ್ರೊ. ದಾವೂದ್ ಮೊಹಸೀನ್ ಹೇಳಿ
ಹರಿಹರ: ಉರ್ದು ಭಾಷೆ ಕರ್ನಾಟಕದಲ್ಲಿ ಉದಯಿಸಿ, ಭಾರತದ ಉಪಖಂಡದಲ್ಲಿ ಪಸರಿಸಿದೆ ಎಂದು ದಾವಣಗೆರೆಯ ಅಂಜುಮನ್ ಖಲಮ್ ಕಾರನ್-ಎ-ಉರ್ದು ಸಂಸ್ಥೆ ಅಧ್ಯಕ್ಷ ಪ್ರೊ. ದಾವೂದ್ ಮೊಹಸೀನ್ ಹೇಳಿದರು. Urdu
ನಗರದ ಜೆಮ್ಸ್ ಟೆಕ್ನೋ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಶನಿವಾರ ಅಂಜುಮನ್ ಖಲಮ್ ಕಾರಾನ್-ಎ-ಉರ್ದು ಸಂಸ್ಥೆಯಿಂದ ಆಯೋಜಿಸಿದ್ದ ಉರ್ದು ಕವಿ ಗೋಷ್ಠಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ಭಾರತದಲ್ಲಿ ಆಡಳಿತ ನಡೆಸಿದ ಮುಸ್ಲಿಂ ದೊರೆಗಳಿಂದ ಉರ್ದು ದೇಶಕ್ಕೆ ಪರಿಚಯವಾಯಿತು ಎಂಬ ಕಲ್ಪನೆ ಇದೆ. ಭಾರತದಲ್ಲಿ, ಅದರಲ್ಲೂ ಕಲಬುರಗಿ, ವಿಜಯಪುರ, ಮಹಾರಾಷ್ಟ್ರದ ಔರಂಗಾಬಾದ್ ಪ್ರದೇಶದಲ್ಲಿ ಈ ಭಾಷೆ ಉದಯವಾಗಿ ದೇಶ ಹಾಗೂ ಉಪ ಖಂಡದಲ್ಲಿಯೂ ಪಸರಿಸಿದೆ ಎಂದರು. ಉತ್ತರ ಭಾರತದಲ್ಲಿ ಅನ್ಯ ಸಮುದಾಯದ ಜನರು ಸಹ ಉರ್ದು ಭಾಷೆಯ ಕೃಷಿ ಮಾಡಿದ್ದಾರೆ. ದೆಹಲಿಯ ರಘುಪತಿ ಫಿರಾಖ್ ಗೋರಖ್‌ಪುರಿ, ಭಗವಾನ್ ದಾಸ್ ಏಜಾಜ್, ನರೇಶ್ ಶಾದ್, ಗ್ಯಾನ ಚಂದ್ ಜೈನ್, ಪ್ರೊ. ಜಗನ್ನಾಥ ಆಜಾದ್, ಪ್ರೊ. ಗೋಪಿಚಂದ್ ನಾರಂಗ್ ಇವರು ಉರ್ದು ಭಾಷಾ ಸಾಹಿತ್ಯದಲ್ಲಿ ಹೆಸರು ಮಾಡಿದ್ದಾರೆ. ಬೆಂಗಳೂರು ವಿವಿಯಲ್ಲಿ ಉರ್ದು ವಿಭಾಗದಲ್ಲಿ ಪ್ರಾಧ್ಯಾಪಕಿಯಾಗಿ ಪ್ರೊ. ಅನುಪಮ ಪೋಲ್ ಸೇವೆ ಸಲ್ಲಿಸುತ್ತಿದ್ದಾರೆ ಎಂದರು. ಹಲವಾರು ದಶಕಗಳಿಂದ ಬಾಲಿವುಡ್ ಚಲನಚಿತ್ರಗಳ ಸಂಭಾಷಣೆಯಲ್ಲಿ, ಗೀತೆಗಳಲ್ಲಿ ಉರ್ದು ಪದಪುಂಜಗಳನ್ನು ಧಾರಾಳವಾಗಿ ಬಳಕೆ ಮಾಡಲಾಗುತ್ತಿದೆ. ಭಾಷೆಗಳು ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತವಲ್ಲ ಎಂದು ಹೇಳಿದರು.
ಶ್ರೀಮಂತ ಇತಿಹಾಸವುಳ್ಳ ಉರ್ದು ಭಾಷಾ ಕಲಿಕೆ ಬಗ್ಗೆ ಈಚೆಗೆ ಉದಾಸೀನತೆ ವ್ಯಕ್ತವಾಗುತ್ತಿದೆ. ಆಂಗ್ಲ ಭಾಷಾ ವ್ಯಾಮೋಹ ಕನ್ನಡದ ಜೊತೆಗೆ ಉರ್ದು ಭಾಷಾ ಕಲಿಕೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದರು.
ಈಚೆಗೆ ನಿಧನರಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಭೂಪಾಲ್‌ನ ಖ್ಯಾತ ಉರ್ದು ಕವಿ ಪ್ರೊ. ಬಷೀರ್ ಬದರ್ ಸ್ಮರಣಾರ್ಥ ಮೌನಾಚರಣೆ ಮಾಡಲಾಯಿತು.
ದಾವಣಗೆರೆಯ ಕವಿ ಕೆ. ಗೌಸ್‌ಪೀರ್ ಹಮ್‌ದರ್ದ್, ಸರ್ ಖಾಜಿ ಸೈಯದ್ ಖಮ್ರುದ್ದೀನ್ ಖಮರ್, ಸೈಯದ್ ಮೊಹಸೀನ್, ಬೆಳಗಾವಿಯ ಕವಿ ಸೈಯದ್ ಯಾಸೀನ್ ರಾಹೀ, ಶಿವಮೊಗ್ಗದ ಮೊಹಮ್ಮದ್ ಹನೀಫ್ ಬಷರ್ ಬಿಜಾಪುರಿ, ಹರಿಹರದ ಬಿ. ಮಗ್ದುಂ, ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಮೊಹಮ್ಮದ್ ಇಕ್ಬಾಲ್, ಸಂಸ್ಥೆಯ ಕಾರ್ಯದರ್ಶಿ ಮುನೀರ್ ಅಹ್ಮದ್ ದಿಲ್, ಬೆಳಗಾವಿಯ ಸೈಯದ್ ಯಾಸೀನ್ ರಾಯ್ ಇತರರಿದ್ದರು.