ಬಿಐಇಟಿ ಕಾಲೇಜಿನಲ್ಲಿ ನಡೆದ ‘ರೋಬೋರೇಜ್ 2026’ ಸ್ಪರ್ಧೆಯ ದೃಶ್ಯ.
- ಬಿಐಇಟಿ ಕಾಲೇಜಿನಲ್ಲಿ ಆಯೋಜನೆ
- ವಿವಿಧ ಜಿಲ್ಲೆ, ರಾಜ್ಯಗಳ 214 ಸ್ಪರ್ಧಿಗಳು ಭಾಗಿ
ದಾವಣಗೆರೆ : ಕೌಶಲಾಭಿವೃದ್ಧಿ ಕೇಂದ್ರದ ಆವರಣ ಕ್ರೀಡಾಂಗಣವಾಗಿ ಪರಿವರ್ತನೆಯಾಗಿತ್ತು. ಬಗೆ ಬಗೆಯ ರೋಬೋಗಳೇ ಅಲ್ಲಿ ಕ್ರೀಡಾಪಟುಗಳು. ಅವು ಕಾರ್‌ನಂತೆ ಚಲಿಸಿದವು, ಫುಟ್‌ಬಾಲ್ ಹಿಡಿದು ಮೈದಾನಕ್ಕಿಳಿದವು. ಓಡಿದವು, ಅಡೆತಡೆಗಳನ್ನು ದಾಟಿ ಗುರಿ ತಲುಪಿದವು.
ನಗರದ ಬಿಐಇಟಿ ಕಾಲೇಜಿನಲ್ಲಿ ಕಂಡ ದೃಶ್ಯವಿದು. ಎಲೆಕ್ಟ್ರಾನಿಕ್ಸೃ್ ಆ್ಯಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದಿಂದ, ಅಭಿಯಾಂತ್ರಿಕ್ಸ್ ಎಜುಸಾಫ್ಟ್ ಎಲ್‌ಎಲ್‌ಪಿ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ರೋಬೋರೇಜ್ 2026’ ರಾಷ್ಟ್ರಮಟ್ಟದ ರೋಬಾಟಿಕ್ಸ್ ಸ್ಪರ್ಧೆಯು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಕೌಶಲಕ್ಕೆ ಸಾಕ್ಷಿಯಾಯಿತು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಅಲ್ಲದೇ ಪುಣೆ, ಚೆನ್ನೈ, ಹೈದರಾಬಾದ್ ಮುಂತಾದ ಹೊರ ರಾಜ್ಯದ ನಗರಗಳಿಂದ ಒಟ್ಟು 214 ಸ್ಪರ್ಧಿಗಳು 61 ತಂಡಗಳಲ್ಲಿ ಭಾಗವಹಿಸಿದ್ದರು. ಎಲ್ಲೆಲ್ಲೂ ರೋಬೋಗಳದೇ ಆಟ.
ರೋಬೋ ರೇಸ್ ರೋಚಕವಾಗಿತ್ತು. ಮಾರ್ಗದಲ್ಲಿ ಇಡಲಾಗಿದ್ದ ಇಟ್ಟಿಗೆ, ಕಟ್ಟಿಗೆ ತುಂಡುಗಳಿಂದ ನಿರ್ಮಿಸಿದ ಫ್ಲೈಓವರ್ ಮಾದರಿ, ಜೋಡಿಸಿಟ್ಟ ಪೈಪ್‌ಗಳು, ಕಲ್ಲಿನ ಚೂರು, ಮೊಳೆ ಮುಂತಾದ ಅಡಚಣೆಗಳ ನಡುವೆಯೇ ರೋಬೋವನ್ನು ಗುರಿ ತಲುಪಿಸುವುದು ವಿದ್ಯಾರ್ಥಿಗಳಿಗೆ ಸವಾಲಾಗಿತ್ತು. ಒಟ್ಟು 3 ಹಂತಗಳಲ್ಲಿ ಸ್ಪರ್ಧೆ ನಡೆಯಿತು.
ಪಕ್ಕದ ಹಾಲ್‌ನಲ್ಲಿ ಲೈನ್ ಫಾಲೋವರ್ ಸ್ಪರ್ಧೆ ನಡೆಯಿತು. ಟ್ರಾೃಕ್ ಮೇಲೆ ಬಳಿದಿದ್ದ ಕಪ್ಪು ಬಣ್ಣದ ಲೈನ್ ಮೇಲೆ ರೋಬೋಗಳನ್ನು ಓಡಿಸಿದರು. ರೋಬೋಗಳು ಲೈನ್ ದಾಟಿದರೆ, ವಿದ್ಯಾರ್ಥಿಗಳು ಅವುಗಳನ್ನು ಕೈಯಿಂದ ಹಿಡಿದರೆ ಅಂಕಗಳನ್ನು ಕಳೆಯಲಾಗುತ್ತಿತ್ತು. ಕಡಿಮೆ ಸಮಯದಲ್ಲಿ ತಪ್ಪುಗಳಿಲ್ಲದೇ ಗುರಿ ತಲುಪಿದವರಿಗೆ ಬಹುಮಾನ ಕಾದಿತ್ತು.
ಆರ್‌ಸಿ ಕಾರ್ ರೇಸ್‌ನ್ನು ಕೌಶಲಾಭಿವೃದ್ಧಿ ಕೇಂದ್ರ ಮುಂಭಾಗದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಎರಡೆರಡು ರೋಬೋಗಳು ಒಟ್ಟಿಗೇ ಸ್ಪರ್ಧೆಯಲ್ಲಿ ಪಾಲ್ಗೊಂಡವು. ಇಳಿಜಾರು, ಏರು ಪ್ರದೇಶವನ್ನು ದಾಟಿಕೊಂಡು, ಅಡಚಣೆಗಳ ನಡುವೆ ಗುರಿ ತಲುಪುವುದು ಈ ಸ್ಪರ್ಧೆಯ ಪರಿಕಲ್ಪನೆ.
ರೋಬೋ ಸಾಕರ್ ಸ್ಪರ್ಧೆಯು ಆಕರ್ಷಕವಾಗಿತ್ತು. ಟೇಬಲ್ ಒಂದರ ಮೇಲೆ ಕ್ರೀಡೆಗೆ ಸಜ್ಜುಗೊಳಿಸಲಾಗಿತ್ತು. ರೋಬೋಗಳೇ ಚೆಂಡನ್ನು ಗೋಲ್‌ನತ್ತ ತಳ್ಳುವ ಈ ಆಟವನ್ನು ವೀಕ್ಷಿಸಿ ವಿದ್ಯಾರ್ಥಿಗಳು ಖುಷಿಪಟ್ಟರು.
ರೋಬೋಗಳನ್ನು ವಿದ್ಯಾರ್ಥಿಗಳೇ ಅಭಿವೃದ್ಧಿಪಡಿಸಿದ್ದರು. ಮೈಕ್ರೋ ಕಂಟ್ರೋಲರ್, ಲೈನ್ ಸೆನ್ಸರ್‌ಗಳು, ಬ್ಯಾಟರಿ ಮುಂತಾದ ಭಾಗಗಳನ್ನು ಜೋಡಿಸಿ ರೋಬೋಗಳಿಗೆ ಆಕಾರ ನೀಡಿದ್ದರು.
ಬ್ಯಾಟರಿಗೆ ಇಂತಿಷ್ಟೇ ಸಾಮರ್ಥ್ಯವಿರಬೇಕೆಂಬ ನಿಯಮವಿತ್ತು. ಸ್ಪರ್ಧೆ ಆರಂಭಿಸುವ ಮೊದಲು ವಿದ್ಯಾರ್ಥಿಗಳು ಸಿದ್ಧಪಡಿಸಿದ ರೋಬೋಗಳನ್ನು ಪರಿಶೀಲಿಸಲಾಯಿತು. ಯಾವ ರೀತಿ ಪ್ರೋಗ್ರಾೃಮಿಂಗ್ ಮಾಡಲಾಗಿದೆ ಎಂಬುದು ರೋಬೋಗಳ ಪ್ರದರ್ಶನದಲ್ಲಿ ತೀರ್ಪುಗಾರರ ಗಮನ ಸೆಳೆಯಿತು.
ವಿದ್ಯಾರ್ಥಿಗಳು ತರಗತಿಗಳಲ್ಲಿ ಕೇವಲ ಪಾಠಗಳನ್ನು ಓದಿರುತ್ತಾರೆ, ಇಂಥ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದರಿಂದ ಅವರಿಗೆ ಪ್ರಾಯೋಗಿಕ ಅನುಭವ ದೊರೆಯುತ್ತದೆ. ಇತರ ಕಾಲೇಜು ವಿದ್ಯಾರ್ಥಿಗಳೊಂದಿಗೆ ಬೆರೆಯುವುದರಿಂದ ಗೆಳೆತನ ಬೆಳೆಯುತ್ತದೆ. ಅವರು ತಂಡವಾಗಿ ಕೆಲಸ ಮಾಡಿದಾಗ ನಾಯಕತ್ವ ಗುಣ ಬೆಳೆಯುತ್ತದೆ.
— ಸುನೀತಾ ಜಿ.ಎಸ್, ಇ ಆ್ಯಂಡ್ ಸಿ ವಿಭಾಗದ ಮುಖ್ಯಸ್ಥೆ