ಅರ್ಚಕರ ಶಿಬಿರದಲ್ಲಿ ಭಾಗವಹಿಸಿದವರಿಗೆ ಪ್ರಮಾಣಪತ್ರ ವಿತರಿಸಿರುವುದು.Priests' camp 
ದಾವಣಗೆರೆ

ಸಂಸ್ಕಾರ ತಾಣವಾಗಬೇಕು ದೇಗುಲ

ಪ್ರಮುಖ ಮುಖ್ಯಾಂಶಗಳು

  • ರಾಜ್ಯಾದ್ಯಂತ ಅರ್ಚಕರಿಗೆ ವಿಶೇಷ ಪ್ರಶಿಕ್ಷಣ ತರಬೇತಿ ಶಿಬಿರ
  • ಸಾಮಾಜಿಕ ಕೇಂದ್ರವಾಗಿಸುವ ಗುರಿ
ಟಿ. ಶ್ರೀನಿವಾಸ್ ಹೊನ್ನಾಳಿ
‘ಅರ್ಚಕಸ್ಯ ಪ್ರಭಾವೇನ ಶಿಲಾ ಭವತಿ ಶಂಕರಃ’ ಅರ್ಚಕನ ಭಕ್ತಿ ಮತ್ತು ಪ್ರಭಾವದಿಂದ ಕಲ್ಲಿನ ಶಿಲೆಯೂ ಭಗವಂತನಾಗಿ ಪೂಜಿಸಲ್ಪಡುತ್ತದೆ. ಈ ತತ್ವದಡಿ ದೇವಾಲಯಗಳನ್ನು ಕೇವಲ ಕಲ್ಲು- ಮಣ್ಣಿನ ಕಟ್ಟಡಗಳನ್ನಾಗಿ ನೋಡದೆ, ಅವುಗಳನ್ನು ವಿದ್ಯೆ, ಜ್ಞಾನ, ಸಂಸ್ಕಾರ ಮತ್ತು ಸಾಮಾಜಿಕ ಸಾಮರಸ್ಯದ ಕೇಂದ್ರಗಳನ್ನಾಗಿ ರೂಪಿಸಲು ’ದೇವಾಲಯ ಸಂವರ್ಧನಾ ಸಮಿತಿ’ ವಿಶಿಷ್ಟ ಅಭಿಯಾನ ಹಮ್ಮಿಕೊಂಡಿದೆ.
ಆರ್‌ಎಸ್‌ಎಸ್ ಪ್ರಚಾರಕರು ಹಾಗೂ ದೇವಾಲಯ ಸಂವರ್ಧನಾ ಸಮಿತಿಯ ರಾಜ್ಯ ಸಂಯೋಜಕ ಮನೋಹರ್ ಮಠದ್ ಅವರ ನೇತೃತ್ವದಲ್ಲಿ ರಾಜ್ಯಾದಾದ್ಯಂತ ಅರ್ಚಕರಿಗೆ ವಿಶೇಷ ಪ್ರಶಿಕ್ಷಣ ವರ್ಗಗಳನ್ನು ನಡೆಸಲಾಗುತ್ತಿದೆ. ಈಗಾಗಲೇ ಚಿತ್ರದುರ್ಗ, ಚನ್ನಗಿರಿ, ಹೊನ್ನಾಳಿ, ಭದ್ರಾವತಿ ಸೇರಿದಂತೆ ಒಂಬತ್ತು ಕೇಂದ್ರಗಳಲ್ಲಿ ಯಶಸ್ವಿಯಾಗಿ ಶಿಬಿರಗಳು ನಡೆದಿವೆ.
ಈ ತರಬೇತಿಯು ಕೇವಲ ಪೂಜಾ ಪದ್ಧತಿ ಅಥವಾ ಶ್ಲೋಕಗಳಿಗೆ ಸೀಮಿತವಾಗಿಲ್ಲ. ಬದಲಾಗಿ ದೇಗುಲಗಳನ್ನು ಸಾಮಾಜಿಕ ಚಟುವಟಿಕೆ ಕೇಂದ್ರಗಳನ್ನಾಗಿ ಮಾಡುವುದು, ವಾರದಲ್ಲಿ ಒಂದು ದಿನ ಮಹಿಳೆಯರೆಲ್ಲ ದೇವಾಲಯವನ್ನು ಕೇಂದ್ರವಾಗಿಟ್ಟುಕೊಂಡು ಮಾತೃಮಂಡಳಿ ಮೂಲಕ ಇಂದಿನ ಯುವತಿಯರಿಗೆ ಆತ್ಮವಿಶ್ವಾಸ ನೀಡುವ ಶ್ರದ್ಧಾ ಕೇಂದ್ರವಾಗಿಸುವುದು, ಹಸಿದವರಿಗೆ ಅನ್ನ ನೀಡುವ ಮತ್ತು ಅಶಕ್ತರಿಗೆ ನೆರವಾಗುವ ಸೇವಾ ಕೇಂದ್ರಗಳಾಗಿಸುವುದು, ಮಕ್ಕಳಿಗೆ ರಾಮಾಯಣ, ಮಹಾಭಾರತದಂತಹ ನೀತಿ ಕಥೆಗಳನ್ನು ಹೇಳುವ ಧಾರ್ಮಿಕ ಕೇಂದ್ರವನ್ನಾಗಿಸುವುದಾಗಿದೆ.
ಉಚಿತ ತರಬೇತಿ ಮತ್ತು ಸೌಲಭ್ಯ: ಬೆಳಗ್ಗೆ 5 ರಿಂದ ರಾತ್ರಿ 10 ರವರೆಗೆ ನಡೆಯುವ ಈ ಶಿಬಿರದಲ್ಲಿ ಅರ್ಚಕರಿಂದ ಯಾವುದೇ ಶುಲ್ಕ ಪಡೆಯಲಾಗುವುದಿಲ್ಲ. ಪೂಜಾ ಸಾಮಗ್ರಿ, ಮಡಿ ವಸ್ತ್ರ, ಪುಸ್ತಕ ಸೇರಿ ಅಗತ್ಯ ಸೌಲಭ್ಯಗಳನ್ನು ಸಮಾಜದ ಸಹಕಾರದಿಂದ ಉಚಿತವಾಗಿ ನೀಡಲಾಗುತ್ತಿದೆ. ಓದಲು ಬಾರದ ಅರ್ಚಕರಿಂದ ಹಿಡಿದು ಸ್ನಾತಕೋತ್ತರ ಪದವೀಧರ ಅರ್ಚಕರವರೆಗೆ ಎಲ್ಲರಿಗೂ ಅವರವರ ಮಟ್ಟಕ್ಕೆ ಅನುಗುಣವಾಗಿ ಈಶಭಕ್ತಿ ಮತ್ತು ದೇಶಭಕ್ತಿಯ ಪಾಠ ಮಾಡಲಾಗುತ್ತಿದೆ. ಬಹುಮುಖ್ಯವಾಗಿ ಜಾತಿ- ಮತದ ಭೇದವಿಲ್ಲದೆ ಎಲ್ಲ ಅರ್ಚಕರನ್ನು ಒಂದೆಡೆ ಸೇರಿಸಿ ತರಬೇತಿ ನೀಡಲಾಗುತ್ತಿದೆ.
ರಾಜ್ಯದಲ್ಲಿ 2.50 ಲಕ್ಷಕ್ಕೂ ಹೆಚ್ಚು ದೇವಸ್ಥಾನಗಳಿವೆ. ಇದರಲ್ಲಿ ಉದ್ಭವವಾದ, ಗ್ರಾಮಗಳು ಬೆಳೆದಂತೆ ನಿರ್ಮಾಣವಾಗಿರುವ, ಟ್ರಸ್ಟ್‌ಗಳ ಮೂಲಕ ಹೊಸ ಬಡಾವಣೆಗಳಲ್ಲಿ ನಿರ್ಮಿಸಿದ ಹಾಗೂ ಒಂದು ಸಮಾಜದವರು ಸೇರಿಕೊಂಡು ಕಟ್ಟಿದ ದೇವಸ್ಥಾನಗಳಿದ್ದು, ಕೋಟ್ಯಂತರ ಭಕ್ತರನ್ನು ಶ್ರದ್ಧೆಯಿಂದ ತನ್ನಡೆಗೆ ಸೆಳೆದುಕೊಂಡ ಕೇಂದ್ರಗಳಾಗಿವೆ.
ಭಕ್ತರಿಗೆ ದೇವಾಲಯ ಶಾಂತಿ- ನೆಮ್ಮದಿ ನೀಡುವ ತಾಣವಾಗಬೇಕು. ಮನಸ್ಸಿನ ದುಃಖ- ದುಮ್ಮಾನಗಳಿಗೆ ಪ್ರಶಾಂತ ವಾತಾವರಣ ನೀಡುವ ಸ್ಥಳವಾಗಬೇಕು. ಜತೆಗೆ ಅರ್ಚಕರ ಪ್ರೀತಿ, ವಿಶ್ವಾಸದ ಮಾತುಕತೆ, ವೇಷ, ಭಾಷೆ, ಸಂಸ್ಕೃತಿ, ಸನ್ನಡತೆಯ ಪಾಠಗಳನ್ನು ಹೇಳಿಕೊಡಲಾಗುತ್ತಿದೆ ಎನ್ನುತ್ತಾರೆ ರಾಜ್ಯ ಸಂಯೋಜಕ ಮನೋಹರ್ ಮಠದ್.

ನಮಗೆ ಯಾರೂ ಶ್ಲೋಕಗಳನ್ನು ಕಲಿಸಿರಲಿಲ್ಲ. ಭದ್ರಾವತಿಯ ಗೊಂದಿಯಲ್ಲಿ ನಡೆದ ಶಿಬಿರದಲ್ಲಿ ನಾನು ಪೂಜಾ ಪದ್ಧತಿ ಮತ್ತು ವೈಯಕ್ತಿಕ ಜೀವನದ ಶಿಸ್ತನ್ನು ಕಲಿತೆ. ಈಗ ದೇವಸ್ಥಾನದಲ್ಲಿ ನಿತ್ಯ ಅಭಿಷೇಕ, ಕುಂಕುಮ ಅರ್ಚನೆ, ಭಕ್ತರ ಜತೆ ಹೇಗೆ ನಡೆದುಕೊಳ್ಳಬೇಕು ಎಂಬ ಆತ್ಮವಿಶ್ವಾಸ ಬಂದಿದೆ.

ದೇವಾಲಯದ ಸ್ವಚ್ಛತೆ, ಅರ್ಚಕರ ನಡವಳಿಕೆ ಮತ್ತು ಆಡಳಿತ ಮಂಡಳಿಯೊಂದಿಗಿನ ಸಂಬಂಧ ಹೇಗಿರಬೇಕು ಎಂಬುದನ್ನು ಇಲ್ಲಿ ಕಲಿಸಿಕೊಡಲಾಯಿತು. ಈ ಸಮಿತಿ ನಮಗೆ ಒಂದು ವಿಶ್ವವಿದ್ಯಾಲಯವಿದ್ದಂತೆ.

ಹಿಂದಿನಿಂದ ಬಂದ ಹಾದಿಯಲ್ಲೇ ಪೂಜೆ ಮಾಡುತ್ತಿದ್ದ ನಮಗೆ, ವ್ಯವಸ್ಥಿತ ಪೂಜಾ ಪದ್ಧತಿಯನ್ನು ಕಲಿಸಿಕೊಡಲಾಗಿದೆ. ಇಂತಹ ಶಿಬಿರಗಳು ರಾಜ್ಯಾದ್ಯಂತ ನಡೆಯಲಿ.