ಜಗಳೂರಿನಲ್ಲಿ ಶನಿವಾರ ಕರ್ನಾಟಕ ರಾಜ್ಯೋತ್ಸವ ಮತ್ತು ದೀನ ಬಂಧು ಎಜುಕೇಷನ್ ಚಾರಿಟಬಲ್ ಟ್ರಸ್ಟ್ ಉದ್ಘಾಟಿಸಿ ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿದರು. ರಘುರಾಮರೆಡ್ಡಿ, ಪಿ.ಎಸ್. ಅರವಿಂದ್, ಬಿಸ್ತುವಳ್ಳಿ ಬಾಬು, ಬರ್ಕತ್ ಅಲಿ ಇದ್ದರು.
- ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಹೇಳಿಕೆ
- ಕರ್ನಾಟಕ ರಾಜ್ಯೋತ್ಸವ
- ದೀನ ಬಂಧು ಎಜುಕೇಷನ್ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ
ಜಗಳೂರು: ಕ್ಷೇತ್ರದಲ್ಲಿ 57 ಕೆರೆಗಳಿಗೆ ನೀರು ತುಂಬಿಸುವ ಮತ್ತು ಅಭಿವೃದ್ಧಿಯ ಹಿಂದೆ ಸಂಘಟನೆಗಳ ಹೋರಾಟ ಮಹತ್ವದ್ದಾಗಿದೆ ಎಂದು ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಶನಿವಾರ ಕರುನಾಡ ನವ ನಿರ್ಮಾಣ ವೇದಿಕೆಯಿಂದ ಹಮ್ಮಿಕೊಂಡಿದ್ದ 70ನೇ ವರ್ಷದ ಕರ್ನಾಟಕ ರಾಜ್ಯೋತ್ಸವ ಮತ್ತು ದೀನ ಬಂಧು ಎಜುಕೇಷನ್ ಚಾರಿಟೇಬಲ್ ಟ್ರಸ್ಟ್ ಉದ್ಘಾಟಿಸಿ ಮಾತನಾಡಿದರು.
ಭದ್ರಾ ಮೇಲ್ದಂಡೆ ಹೋರಾಟ ಸಮಿತಿ, ಕರುನಾಡ ನವನಿರ್ಮಾಣ ವೇದಿಕೆ ಸೇರಿ ವಿವಿಧ ಸಂಘಟನೆಗಳು ನಿರಂತರವಾಗಿ ನಡೆಸಿದ ಹೋರಾಟದಿಂದ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಬರಲು ಸಾಧ್ಯವಾಗಿದೆ. ಹೋರಾಟಗಳು ಯಾವಾಗಲೂ ಜನತೆಯ ಪರವಾಗಿ ಇರಬೇಕು. ಅಂತಹ ಕೆಲಸವನ್ನು ಜಗಳೂರಿನ ಸಂಘಟನೆಗಳು ಮಾಡುತ್ತಿರುವುದು ಶ್ಲಾಘನೀಯ ಎಂದರು.
ದೀನ ಬಂಧು ಎಜುಕೇಶಷನ್ ಟ್ರಸ್ಟ್‌ನಿಂದ ಪ್ರತಿ ವರ್ಷ ಸರ್ಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ಅದೇ ರೀತಿ ಎಲ್ಲರೂ ಒಟ್ಟಾಗಿ ಸಾಮಾಜಕ್ಕೆ ಅಂಟಿಕೊಂಡಿರುವ ಅಜ್ಞಾನದ ಕೊಳೆ ತೆಗೆಯೋಣ. ಈ ಬಾರಿ ಭದ್ರಾ ಮೇಲ್ದಂಡೆ ಯೋಜನೆ ನೀರಾವರಿ ಹೋರಾಟಗಾರ ಆರ್.ಓಬಳೇಶ್‌ಗೆ ದೀನ ಬಂಧು ವಾರ್ಷಿಕ ಪ್ರಶಸ್ತಿ ನೀಡುತ್ತಿರುವುದು ಪ್ರಶಸ್ತಿಯ ಮೌಲ್ಯ ಹೆಚ್ಚಿಸಿದೆ ಎಂದು ಹೇಳೀದರು.
ದೀನ ಬಂಧು ಚಾರಿಟಬಲ್ ಅಧ್ಯಕ್ಷ ಎಚ್.ಎಂ.ಹೊಳೆ ಮಹಾಲಿಂಗಪ್ಪ ಮಾತನಾಡಿ, ಅನ್ಯಾಯಕ್ಕೆ ಒಳಗಾದ, ಸಂಕಷ್ಟದಲ್ಲಿರುವ ಜನರಿಗೆ ಸಂಘಟನೆಯ ಹೋರಾಟದ ಮೂಲಕವೇ ನ್ಯಾಯ ಕೊಡಿಸುವ ಕೆಲಸ ಮಾಡಿಕೊಂಡು ಬಂದಿದ್ದೇವೆ. ವಿದ್ಯಾರ್ಥಿ ದೆಸೆಯಿಂದಲೂ ಹೋರಾಟ ಮಾಡುತ್ತಾ ಬಂದಿದ್ದೇನೆ. ಇನ್ನು ಮುಂದೆ ದುರ್ಬಲರಿಗೆ ನೆರವಿನ ಹಸ್ತ ಚಾಚಲು ದೀನ ಬಂಧು ಚಾರಿಟಬಲ್ ಟ್ರಸ್ಟ್ ನೆರವಾಗುತ್ತಿದೆ ಎಂದರು.
ಸಾಹಿತಿ ಎನ್.ಟಿ. ಎರ‌್ರಿಸ್ವಾಮಿ, ಕರುನಾಡ ನವ ನಿರ್ಮಾಣ ವೇದಿಕೆ ಮತ್ತು ಸಂಘಟನೆಗಳು ನಾಡು ನುಡಿ ರಕ್ಷಣೆಗೆ ಕುರಿತು ಉಪನ್ಯಾಸ ನೀಡಿದರು.
ಟ್ರಸ್ಟ್‌ನ ಕಾರ್ಯದರ್ಶಿ ರಘುರಾಮರೆಡ್ಡಿ, ಎಸ್ಸಿ-ಎಸ್ಟಿ ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಪಿ.ಎಸ್. ಅರವಿಂದ್, ಬಿಜೆಪಿ ಮುಖಂಡ ಬಿಸ್ತುವಳ್ಳಿ ಬಾಬು, ಜೈಭಾರತ್ ಟ್ರಸ್ಟ್ ಸಂಸ್ಥಾಪಕ ಬರ್ಕತ್ ಅಲಿ, ಮಾದಿಗ ದಂಡೋರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಕುಬೇರಪ್ಪ ಗೌರಿಪುರ, ಪ್ರೊ.ನಾಗಲಿಂಗಪ್ಪ, ಜನಪರ ಹೋರಾಟ ಸಮಿತಿ ಅಧ್ಯಕ್ಷ ಮಹಾಂತೇಶ್ ಮತ್ತಿತರರಿದ್ದರು.
ಮೆರವಣಿಗೆಗೆ ಚಾಲನೆ
ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗದಲ್ಲಿ ಕನ್ನಡ ರಾಜ್ಯೋತ್ಸವ ರಥಕ್ಕೆ ಶಾಸಕ ಬಿ. ದೇವೇಂದ್ರಪ್ಪ ಚಾಲನೆ ನೀಡಿದರು. ಭುವೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ನಂತರ ಭಜನಾ ಕಲಾ ತಂಡ, ಡ್ರೆಮ್ ಸೆಟ್ ಸೇರಿ ವಿವಿಧ ಕಲಾ ತಂಡಗಳ ಭವ್ಯ ಮೆರವಣಿಗೆ ಮಹಾತ್ಮಗಾಂಧಿ ಹಳೇ ವೃತ್ತ, ಹೊಸ ಬಸ್ ನಿಲ್ದಾಣ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮಾರ್ಗದ ಮೂಲಕ ತಾಲೂಕು ಪಂಚಾಯಿತಿ ಸಭಾಂಗಣದವರೆಗೂ ಸಾಗಿತು.