ಹರಿಹರ ನಗರದ ರಾಘವೇಂದ್ರ ಸ್ವಾಮಿ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಶಾಸಕ ಬಿ.ಪಿ. ಹರೀಶ್ ಉದ್ಘಾಟಿಸಿದರು. ಸಿರಿಗೆರೆ ರಾಜಣ್ಣ, ಡಿ. ಕುಮಾರ್, ಬಿ. ಹಾಲೇಶಪ್ಪ, ಜಿ. ಆನಂದಪ್ಪ ಇತರರಿದ್ದರು.
- ಶಾಸಕ ಬಿ.ಪಿ. ಹರೀಶ್ ಅಭಿಪ್ರಾಯ
- ಅಖಿಲ ಭಾರತ ಸಹಕಾರ ಸಪ್ತಾಹ
- ಅನೇಕ ಕ್ಷೇತ್ರಗಳಿಗೆ ಹೊಸ ಚೈತನ್ಯ
ಹರಿಹರ: ಸಾಮಾನ್ಯ ನಾಗರಿಕರ ಜೀವನಮಟ್ಟದ ಸುಧಾರಣೆ ಸೇರಿ ದೇಶದ ಒಟ್ಟಾರೆ ಅಭಿವೃದ್ಧಿಗೆ ಸಹಕಾರಿ ಕ್ಷೇತ್ರವೇ ಆರ್ಥಿಕ ಬಲ ಎಂದು ಶಾಸಕ ಬಿ.ಪಿ. ಹರೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ರಾಘವೇಂದ್ರ ಸ್ವಾಮಿ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
ಸಹಕಾರಿ ಚಳವಳಿಯಿಂದ ಕೃಷಿ ಸೇರಿ ಅನೇಕ ಕ್ಷೇತ್ರಗಳಿಗೆ ಹೊಸ ಚೈತನ್ಯ ದೊರಕಿದೆ. ಲಕ್ಷಾಂತರ ಬಡ ಕುಟುಂಬಗಳು ಸಹಕಾರ ಸಂಘಗಳ ಮೂಲಕ ಬದುಕು ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಸಹಕಾರ ಸಂಘಗಳು ಗಟ್ಟಿಯಾದರೆ ಆರ್ಥಿಕ, ಸಾಮಾಜಿಕ ಬದಲಾವಣೆ ವೇಗವಾಗಿ ಸಂಭವಿಸುತ್ತದೆ ಎಂದರು.
ಸಹಕಾರ ಸಚಿವರಾಗಿದ್ದ ರಾಜಣ್ಣ ಈ ಕ್ಷೇತ್ರದ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿರುವುದು ಶ್ಲಾಘನೀಯ. ಹರಿಹರ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಪೂರ್ವಾವಧಿಯಲ್ಲಿಯೂ ಹೆಚ್ಚಿನ ಅನುದಾನ ತರಲು ಸಾಧ್ಯವಾಗಿದ್ದು, ಇಂದಿಗೂ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕೃಷಿ ವೆಚ್ಚ ಹೆಚ್ಚುತ್ತಿರುವ ಹಾಗೂ ಮೂಲಸೌಕರ್ಯ ಕೊರತೆಯಿಂದ ರೈತರು ಸಂಕಷ್ಟ ಎದುರಿಸುವ ಪರಿಸ್ಥಿತಿಯಲ್ಲಿ, ಸಹಕಾರ ಸಂಘಗಳ ಸಕ್ರಿಯ ಸದಸ್ಯತ್ವ ರೈತರಿಗೆ ಬಲವರ್ಧನೆ ನೀಡುತ್ತದೆ. ಕೋಮಾರನಹಳ್ಳಿ ಪ್ರದೇಶದಲ್ಲಿ ವ್ಯಾಪಕವಾಗಿ ಮೆಣಸಿನಕಾಯಿ ಬೆಳೆಯಲಾಗುತ್ತಿದ್ದು, ಈಗ ಇಳುವರಿ ಕುಸಿದಿರುವುದು ಚಿಂತಾಜನಕವಾಗಿದೆ ಎಂದರು.
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಡಿ. ಕುಮಾರ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಮಂಜುನಾಥ ಎಸ್.ದೊಡ್ಡಮನಿ ಉಪನ್ಯಾಸ ನೀಡಿದರು. ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಡಾ.ಜೆ.ಆರ್. ಷಣ್ಮುಖಪ್ಪ, ಬಿ. ರಾಮಚಂದ್ರಪ್ಪ ಅವರನ್ನು ಸನ್ಮಾನಿಸಲಾಯಿತು.
ಪಿಎಲ್‌ಡಿ ಬ್ಯಾಂಕ್ ಹಾಗೂ ಸಹಕಾರ ಒಕ್ಕೂಟದ ಅಧ್ಯಕ್ಷ ಸಿರಿಗೆರೆ ರಾಜಣ್ಣ, ಜಿಲ್ಲಾ ಸಹಕಾರ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ. ಹಾಲೇಶಪ್ಪ, ಮಾಜಿ ಉಪಾಧ್ಯಕ್ಷ ಜಿ. ಆನಂದಪ್ಪ, ಹರಿಹರೇಶ್ವರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಜಿ.ಕೆ. ಮಲ್ಲಿಕಾರ್ಜುನ್, ಪಿಕೆಪಿಎಸ್‌ಎಸ್ ಅಧ್ಯಕ್ಷ ಜಿ.ಬಿ. ಹಾಲೇಶ್ ಗೌಡ್ರು, ಸಿಬ್ಬಂದಿ ಒಕ್ಕೂಟ ಅಧ್ಯಕ್ಷ ಎಂ.ವಿ. ಮಹದೇವಪ್ಪ, ಎಸ್.ಆರ್. ಬಿರಾದಾರ್, ಆರ್. ರಾಘವೇಂದ್ರಸಾ, ಅಂಬಾಸಾ ಮೆಹರ್ವಾಡೆ ಇತರರಿದ್ದರು.