ಎಸ್‌ಎಸ್ ಕೇರ್ ಟ್ರಸ್ಟ್, ಲೈಫ್‌ಲೈನ್-ಸ್ವಯಂಪ್ರೇರಿತ ರಕ್ತದಾನಿಗಳ ಸಮೂಹದ ಸಹಯೋಗದಲ್ಲಿ ದಾವಣಗೆರೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಅರಿವಳಿಕೆ ತಜ್ಞೆ ಡಾ. ಶಿಲ್ಪಶ್ರೀ, ಅನಿಲ್ ಬಾರೆಂಗಳ್, ಡಾ. ವಿದ್ಯಾ, ಪ್ರೊ. ದಿವ್ಯಾ, ಡಾ. ಗೋವರ್ಧನ್, ರಾಜೇಶ್ವರಿ ಇತರರಿದ್ದರು.
- ಲೈಫ್‌ಲೈನ್ ಸಂಸ್ಥೆಯ ನಿರಂತರ ಸೇವಾಕಾರ್ಯ
- ಅರಿವಳಿಕೆ ತಜ್ಞೆ ಡಾ. ಎ.ಎಂ.ಶಿಲ್ಪಶ್ರೀ ಅನಿಸಿಕೆ
- ಶಿಬಿರದಲ್ಲಿ ರಕ್ತದಾನ ಮಾಡಿದ 32 ರಕ್ತದಾನಿಗಳು
ದಾವಣಗೆರೆ: ಜಗತ್ತಿನಲ್ಲಿ ಕಾರ್ಖಾನೆ ಅಥವಾ ಪ್ರಯೋಗಾಲಯಗಳಲ್ಲಿ ರಕ್ತವನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ಕ್ಲಿಷ್ಟ ಸಂದರ್ಭಗಳಲ್ಲಿ ರಕ್ತದಾನಿ ಗಳಿಲ್ಲದೆ ಹೋದರೆ ವೈದ್ಯರೂ ಸಹ ತಟಸ್ಥವಾಗಿ ಇರಬೇಕಾಗಲಿದೆ ಎಂದು ಜೆಜೆಎಂ ವೈದ್ಯಕೀಯ ಕಾಲೇಜಿನ ಅರಿವಳಿಕೆ ತಜ್ಞೆ ಡಾ. ಎ.ಎಂ.ಶಿಲ್ಪಶ್ರೀ ಹೇಳಿದರು.
ಎಸ್‌ಎಸ್ ಕೇರ್ ಟ್ರಸ್ಟ್, ಲೈಫ್‌ಲೈನ್-ಸ್ವಯಂಪ್ರೇರಿತ ರಕ್ತದಾನಿಗಳ ಸಮೂಹದ ಸಹಯೋಗದಲ್ಲಿ ನಗರದ ಲಿಟಲ್ ಚಾಂಪ್ಸ್ ಗುರು ಕುಲಂ ಆವರಣದಲ್ಲಿ ಶನಿವಾರ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ, ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತ ದಾನ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಪಘಾತಕ್ಕೀಡಾದ ಗಾಯಾಳು, ಅಗತ್ಯ ಶಸ್ತ್ರಚಿಕಿತ್ಸೆ, ಕ್ಯಾನ್ಸರ್ ರೋಗಿಗಳು ಅಥವಾ ಬಾಣಂತಿಯರ ಕಷ್ಟ ಸಂದರ್ಭದಲ್ಲಿ ರಕ್ತದ ಅನಿವಾರ್ಯತೆ ಇರಲಿದೆ. ಇಂಥಹ ವೇಳೆ ಕಲ್ಮಷವಿಲ್ಲದಲೇ ನಿರಂತರವಾಗಿ ರಕ್ತದಾನ ಮಾಡುತ್ತಿರುವ ರಕ್ತದಾನಿಗಳಿಗೆ ಜನರು ಚಿರ ಋಣಿ ಆಗಿರಬೇಕು. ಇವರ ರಕ್ತವನ್ನು ದಾನವಾಗಿ ಪಡೆಯುವವರು ಧನ್ಯವಂತರು ಎಂದರು.
ದಾವಣಗೆರೆಯ ಲೈಫ್‌ಲೈನ್ ರಕ್ತದಾನಿಗಳ ಸಂಸ್ಥೆಯು ಅನಿವಾರ್ಯ ಸ್ಥಿತಿಗಳಲ್ಲಿ ತತ್‌ಕ್ಷಣಕ್ಕೆ ರಕ್ತದ ವ್ಯವಸ್ಥೆ ಮಾಡುತ್ತ ಬಂದಿದೆ. ಕೋವಿಡ್ ಸಂದರ್ಭದಲ್ಲೂ ಜನರಿಗೆ ರಕ್ತದ ಕೊರತೆಯಾಗದಂತೆ ಎಲೆಮರೆಯ ಕಾಯಂತೆ ಕಾರ್ಯ ನಿರ್ವಹಿಸಿದೆ. ರಕ್ತದಾನಿಗಳು ವರ್ಷಕ್ಕೊಮ್ಮೆ ಬರುವ ರಕ್ತದಾನಿಗಳ ದಿನದಂದು ಜಾಗೃತಿ ಹಿನ್ನೆಲೆಯಲ್ಲಿ ಕಾಣಿಸಿಕೊಳ್ಳುತ್ತಾರೆಯೇ ಹೊರತು ಪ್ರಚಾರದ ದೃಷ್ಟಿಯಿಂದಲ್ಲ ಎಂದೂ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮಾತನಾಡಿ ನಾನು ರಕ್ತದಾನಿಯಾಗಿ ಅನೇಕ ಬಾರಿ ರಕ್ತದಾನ ಮಾಡಿದ್ದೇನೆ. ನಿಯಮಿತವಾಗಿ ರಕ್ತದಾನ ಮಾಡುವುದರಿಂದ ರಕ್ತ ಮತ್ತೆ ಉತ್ಪತ್ತಿಯಾಗಲಿದೆ. ಇದರಿಂದ ಅನೇಕ ಜೀವಗಳನ್ನು ಉಳಿಸಬಹುದಾಗಿದೆ. ರೋಗಿಗಳ ಕಡೆಯವರು ಕೂಡ ರಕ್ತದಾನ ಮಾಡಬೇಕು ಎಂದು ಆಶಿಸಿದರು.
ಇಂದಿನದು ಸ್ಪರ್ಧಾತ್ಮಕ ಯುಗ. ಹೀಗಾಗಿ ಇಂದಿನ ಮಕ್ಕಳು ಓದಿನ ಜತೆಯಲ್ಲೇ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡೆ, ಸಮಾಜಸೇವಾ ಕಾರ್ಯದಲ್ಲೂ ಧೈರ್ಯದಿಂದ ತೊಡಗಬೇಕು. ಇದಕ್ಕೆಲ್ಲ ಪಾಲಕರೂ ಕೂಡ ಇತ್ತೀಚೆಗೆ ಉತ್ತೇಜನ ನೀಡುತ್ತಿದ್ದಾರೆ. ಇದರೊಂದಿಗೆ ಮಾದರಿ ಜೀವನ ನಡೆಸಬೇಕು ಎಂದರು.
ಇತ್ತೀಚೆಗೆ ವಿದ್ಯಾರ್ಥಿಗಳು, ಯುವಕರು ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಹೆಲ್ಮೆಟ್ ಧರಿಸದಿರುವುದು, ಬೈಕ್‌ನಲ್ಲಿ ತ್ರಿಬಲ್ ರೈಡಿಂಗ್, ಅತಿವೇಗದ ಪ್ರಯಾಣ ಇತ್ಯಾದಿ ಕಾರಣದಿಂದ ಅಪಘಾತಗಳು ಹೆಚ್ಚುತ್ತಿವೆ. ಹೀಗಾಗಿ ಸಂಚಾರ ನಿಯಮಗಳ ಜ್ಞಾನ ಹೊಂದಬೇಕು. ಚಿತ್ರನಟರ ಬಗ್ಗೆ ವ್ಯಾಮೋಹ ಕೈಬಿಡಿ ಎಂದು ಕಿವಿಮಾತು ಹೇಳಿದರು.
ಲೈಫ್‌ಲೈನ್ ಸಂಸ್ಥೆಯ ಕಾರ್ಯದರ್ಶಿ ಅನಿಲ್ ಬಾರೆಂಗಳ್ ಮಾತನಾಡಿ ರಕ್ತದಾನಿಗಳು ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ಕೆಲವರು ಶಿಬಿರಕ್ಕಿಂತಲೂ ಅಗತ್ಯ ಸಂದರ್ಭಗಳಲ್ಲಿ ನೆರವು ನೀಡುತ್ತಿದ್ದಾರೆ. ರಕ್ತದಾನದ ಲಾಭ ಪಡೆದ ಜನರು, ರೋಗಿಗಳಲ್ಲಿ ಕಾಣುವ ಖುಷಿ, ಕೃತಜ್ಞತಾ ಭಾವ ಎಷ್ಟೇ ಹಣ ಕೊಟ್ಟರೂ ಸಿಗುವುದಿಲ್ಲ. ಯುವಕರು ಅಪನಂಬಿಕೆ ಬಿಟ್ಟು ರಕ್ತದಾನದಲ್ಲಿ ತೊಡಗಬೇಕು ಎಂದು ಆಶಿಸಿದರು.
ಲೈಫ್‌ಲೈನ್ ಜಂಟಿ ಕಾರ್ಯದರ್ಶಿ ಗೋಪಾಲಕೃಷ್ಣ ಮಾತನಾಡಿ ಕೆಲವೇ ಯುವಕರು ಆರಂಭಿಸಿದ ಲೈಫ್‌ಲೈನ್ ಸಂಸ್ಥೆಯಡಿ ಇಂದು 6 ಸಾವಿರ ರಕ್ತದಾನಿಗಳಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯ ರೋಗಿಯೊಬ್ಬರಿಗೆ ಬಾಂಬೆ ಬ್ಲಡ್ ಅಗತ್ಯತೆ ಕೇಳಿಬಂದಾಗ ಆರೇಳು ಜಿಲ್ಲೆಯ ಡಿಸಿಗಳನ್ನು ಸಂಪರ್ಕಿಸಿ ವ್ಯವಸ್ಥೆ ಮಾಡಿಕೊಡಲಾಗಿತ್ತು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ 238 ಸಾರ್ವಜನಿಕರು, ವಿದ್ಯಾರ್ಥಿಗಳು ಆರೋಗ್ಯ ತಪಾಸಣೆ ಲಾಭ ಪಡೆದರೆ, 32 ರಕ್ತದಾನಿಗಳು ರಕ್ತದಾನ ಮಾಡಿದರು. ಸಮುದಾಯ ಆರೋಗ್ಯ ವಿಭಾಗದ ವೈದ್ಯೆ ಡಾ. ವಿದ್ಯಾ, ಬಾಪೂಜಿ ಬ್ಲಡ್ ಬ್ಯಾಂಕ್ ಅಧಿಕಾರಿ ಪ್ರೊ. ದಿವ್ಯಾ, ಡಾ. ಗೋವರ್ಧನ್, ವಾಸ್ತುಶಿಲ್ಪಿ ರಾಜೇಶ್ವರಿ, ಲಿಟಲ್ ಚಾಂಪ್ಸ್ ಪ್ರಾಚಾರ್ಯೆ ಛಾಯಾ, ಲೈಫ್‌ಲೈನ್ ಸಂಸ್ಥೆಯ ಉಪಾಧ್ಯಕ್ಷ ಪೃಥ್ವಿ ಬಾದಾಮಿ, ಖಜಾಂಚಿ ಶೇಷಾಚಲ, ಸಂತೋಷ್ ಗಾಯಕ್‌ವಾಡ್, ಮಾಧವ್‌ರಾವ್ ಪದಕಿ, ಎಂ.ಜಿ. ಶ್ರೀಕಾಂತ್ ಇತರರಿದ್ದರು.