ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ, ಶಂಕರಾಚಾರ್ಯರ ಜಯಂತ್ಯುತ್ಸವದಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ಗಿರೀಶ್ ನಾಡಿಗ್, ಅನಿಲ್ ಬಾರೆಂಗಳ್ ಇದ್ದರು.
- ಸನಾತನ ಸಂಸ್ಕೃತಿಗೆ ಜಗದ್ಗುರುಗಳ ಕೊಡುಗೆ ಅನನ್ಯ
- ಡಿಸಿ ಜಿ.ಎಂ. ಗಂಗಾಧರಸ್ವಾಮಿ ಹೇಳಿಕೆ
- ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಯಂತ್ಯುತ್ಸವ
ದಾವಣಗೆರೆ: ಮನುಷ್ಯನ ಮನಸ್ಸಿನ ನಿಯಂತ್ರಣವೇ ಇಂದಿನ ಜಗದ ಅತ್ಯಂತ ಕಠಿಣ ಕೆಲಸವಾಗಿದೆ. ಶಂಕರಾಚಾರ್ಯರ ತತ್ವಗಳು, ಸ್ತೋತ್ರಗಳನ್ನು ಕೇಳುವುದರಿಂದ ಮನಸ್ಸಿನ ನಿಯಂತ್ರಣದ ಜತೆಗೆ ಶಾಂತಿ ಮತ್ತು ಆತ್ಮಸ್ಥೈರ್ಯ ಸಿಗಲಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ, ಶಂಕರಾಚಾರ್ಯರ ಜಯಂತ್ಯುತ್ಸವದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಜಗದ್ಗುರು ಆದಿ ಶಂಕರಾಚಾರ್ಯರು ಭಾರತೀಯ ಸನಾತನ ಸಂಸ್ಕೃತಿಗೆ ನೀಡಿದ ಕೊಡುಗೆ ಅನನ್ಯ. ಅವರು ರಚಿಸಿದ ಸ್ತೋತ್ರಗಳು, ಭಾಷ್ಯಗಳು ಮತ್ತು ಸೌಂದರ್ಯ ಲಹರಿ ಕೃತಿಗಳು ಮನುಕುಲಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು.
ಭಾರತ ದೇಶ ಆಧ್ಯಾತ್ಮಿಕವಾಗಿ ಶ್ರೀಮಂತವಾಗಿದೆ. ಬಸವಣ್ಣ ಸೇರಿ ಅನೇಕ ಮಹಾಪುರುಷರು ತೋರಿದ ಮಾರ್ಗದಲ್ಲಿ ನಡೆಯುವುದು ಇಂದಿನ ಅಗತ್ಯವಾಗಿದೆ. ಇಂತಹ ಜಯಂತಿಗಳು ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸಹಕಾರಿಯಾಗಿವೆ. ಮಹಾನ್ ಪುರುಷರ ಜಯಂತಿ ಆಚರಣೆ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಮಾತನಾಡಿ, ಸಮಾಜದಲ್ಲಿ ಸಮಾನತೆ ಹಾಗೂ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಶಾಂತಿಯ ಸಂದೇಶ ಸಾರಿದ ಆದಿ ಶಂಕರಾಚಾರ್ಯರ ತತ್ವಗಳು ಇಂದಿಗೂ ಪ್ರಸ್ತುತ ಎಂದು ಹೇಳಿದರು.
ಅದ್ವೈತ ವೇದಾಂತದ ಮೂಲಕ ಸಮಾಜಕ್ಕೆ ಅತ್ಯುತ್ತಮ ಮಾರ್ಗದರ್ಶನ ನೀಡಿರುವ ಶಂಕರಾಚಾರ್ಯರು ಸ್ತ್ರೀ-ಪುರುಷರಲ್ಲಿ ಸಮಾನತೆ ಹಾಗೂ ಸರ್ವರಿಗೂ ಸಮಾನ ಅವಕಾಶಗಳಿರಬೇಕು ಎಂಬ ಆಶಯ ಹೊಂದಿದ್ದರು. ಜ್ಞಾನಾರ್ಜನೆ ಮತ್ತು ವಿದ್ಯೆಗೆ ಹೆಚ್ಚಿನ ಪ್ರಾಧಾನ್ಯ ನೀಡಿ ಸಮಾಜದಲ್ಲಿ ಶಾಂತಿ ಸ್ಥಾಪಿಸುವುದು ಅವರ ಗುರಿಯಾಗಿತ್ತು. ಅವರ ದಾರಿಯಲ್ಲಿ ಸಾಗಿದರೆ ದೇಶದ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಶಂಕರ ಸೇವಾ ಸಂಘದ ಅಧ್ಯಕ್ಷ ಡಾ.ಬಿ.ಟಿ. ಅಚ್ಯುತ್, ಕಾರ್ಯದರ್ಶಿ ಸೋಮನಾಥ ಕುಲಕರ್ಣಿ, ಉಪಾಧ್ಯಕ್ಷ ಗಿರೀಶ್ ನಾಡಿಗ್, ವಿನಾಯಕ ಜೋಷಿ, ರಮೇಶ್ ಪಾಟೀಲ್, ಡಾ. ಎಂ.ಸಿ. ಶಶಿಕಾಂತ್, ಬಾಲಕೃಷ್ಣ ವೈದ್ಯ, ಅನಿಲ್ ಬಾರೆಂಗಳ್ ಇದ್ದರು. ಈ ವೇಳೆ ನಳಿನಿ ಅಚ್ಯುತ್ ಮತ್ತು ಅವರ ತಂಡದಿಂದ ಸ್ತೋತ್ರ ಪಠಣ ನಡೆಯಿತು.