ಹೊನ್ನಾಳಿ ತಾಲೂಕಿನ ಕುಂದೂರಿನಲ್ಲಿ ಶನಿವಾರ ಆಯೋಜಿಸಿದ್ದ 2075ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭವನ್ನು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಉದ್ಘಾಟಿಸಿದರು. ಲಕ್ಷ್ಮಣ್, ಸುಧಾಕರ್, ತಿಪ್ಪೇಶಪ್ಪ, ಶಿವಕುಮಾರ್ ಇತರರಿದ್ದರು. public awareness platform
- ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿಕೆ
- ಕುಂದೂರಿನಲ್ಲಿ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ
ಹೊನ್ನಾಳಿ: ಮದ್ಯವರ್ಜನ ಶಿಬಿರದ ಮೂಲಕ ನಿಮ ಗೊಂದು ಹೊಸ ಬದುಕು ಸಿಕ್ಕಿದೆ. ನಿಮ್ಮ ಜೀವನದ ಪರಿವರ್ತನೆಗೆ ಈ ಶಿಬಿರವು ದಾರಿ ಯಾಗಲಿ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆಶಯ ವ್ಯಕ್ತಪಡಿಸಿದರು.
ತಾಲೂಕಿನ ಕುಂದೂರು ಗ್ರಾಮದಲ್ಲಿ ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಜನಜಾಗೃತಿ ವೇದಿಕೆ ಹಾಗೂ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ 2075ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಇಲ್ಲಿಗೆ ಬಂದಿರುವ ಯಾರೂ ಕೆಟ್ಟವರಲ್ಲ. ಸಮಯ ಹಾಗೂ ಸಂದರ್ಭಗಳು ಅವರನ್ನು ವ್ಯಸನಿಗಳನ್ನಾಗಿ ಮಾಡಿವೆ. ಇಂತಹ ಪರಿಸ್ಥಿತಿಯಲ್ಲಿ ಡಾ.ಡಿ. ವೀರೇಂದ್ರ ಹೆಗ್ಗಡೆ ಯವರು ರಾಜ್ಯದ ಮೂಲೆ ಮೂಲೆಗಳಲ್ಲಿ ಜನಜಾಗೃತಿ ವೇದಿಕೆ ಮೂಲಕ ಈವರೆಗೆ 1.30 ಲಕ್ಷಕ್ಕೂ ಹೆಚ್ಚು ಜನರನ್ನು ಮದ್ಯಮುಕ್ತರನ್ನಾಗಿ ಮಾಡಿದ್ದಾರೆ. ಅಂತಹ ಪೂಜ್ಯರಿಗೆ ನಾವೆಲ್ಲರೂ ಕೃತಜ್ಞರಾಗಿರಬೇಕು ಎಂದು ಅವರ ಸಾಮಾಜಿಕ ಕಾರ್ಯಗಳನ್ನು ಸ್ಮರಿಸಿದರು.
ಶ್ರೀಕ್ಷೇತ್ರದ ಕಿರು ಆರ್ಥಿಕ ಯೋಜನೆ ಜಾರಿಗೆ ಬರದಿದ್ದರೆ ಬಡ ಕುಟುಂಬಗಳು ಆರ್ಥಿಕ ದುಸ್ಥಿತಿಗೆ ತಳ್ಳಲ್ಪಡುತ್ತಿದ್ದವು. ಆದರೆ ಪೂಜ್ಯರು ಎಲ್ಲ ವರ್ಗದ ಬಡ ಕುಟುಂಬಗಳನ್ನು ಆರ್ಥಿಕವಾಗಿ ಸದೃಢಗೊಳಿಸಿ ದಾರಿದೀಪವಾಗಿದ್ದಾರೆ ಎಂದರು.
ಬಿಎಲ್‌ಒಗಳಿಗೆ ಮಾಹಿತಿ ನೀಡಿ: ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿರುವುದರಿಂದ ನಿಮ್ಮ ಮನೆಗೆ ಬರುವ ಬಿಎಲ್‌ಒ ಗಳಿಗೆ ಸರಿಯಾದ ಮಾಹಿತಿ ನೀಡಿ. ಈ ಪರಿಷ್ಕರಣೆಯಲ್ಲಿ ಅನರ್ಹರು ಹಾಗೂ ಮೃತಪಟ್ಟ ವ್ಯಕ್ತಿಗಳ ಹೆಸರನ್ನು ಮಾತ್ರ ಪಟ್ಟಿಯಿಂದ ಕೈಬಿಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತಿಪ್ಪೇಶಪ್ಪ ಮಾತನಾಡಿ, ಶಿಬಿರ ಪ್ರಾರಂಭವಾದ ದಿನ ನಿಮ್ಮ ಮುಖದಲ್ಲಿ ರೌದ್ರಾವತಾರ ಕಂಡು, ಇವರು ಒಂದು ವಾರ ನಮ್ಮ ಜತೆ ಇರುತ್ತಾರಾ ಎಂಬ ಅನುಮಾನವಿತ್ತು. ಆದರೆ ಕಾರ್ಯಕರ್ತರು ನಿಮ್ಮನ್ನು ಮಕ್ಕಳಂತೆ ಪ್ರೀತಿಯಿಂದ ನೋಡಿಕೊಂಡಿದ್ದರಿಂದ ಇಂದು ನಿಮ್ಮ ಮುಖದಲ್ಲಿ ಸೌಮ್ಯತೆ ಕಾಣುತ್ತಿದೆ. ಮತ್ತೆ ಮದ್ಯಕ್ಕೆ ದಾಸರಾಗದಿದ್ದಾಗ ಮಾತ್ರ ಈ ಶಿಬಿರ ಸಾರ್ಥಕವಾಗುತ್ತದೆ ಎಂದು ಮನವಿ ಮಾಡಿದರು.
ಛತ್ರತ್ವ ಮಂತ್ರಾಲಯ ಪುಣ್ಯಸ್ಥಳದ ಧರ್ಮ ದರ್ಶಿ ಸುಧಾಕರ್ ಸಾನ್ನಿಧ್ಯ ವಹಿಸಿದ್ದರು. ಗೌರವಾಧ್ಯಕ್ಷ ಶಿವಕುಮಾರ್, ಆಂಜನೇಯಸ್ವಾಮಿ ಸಮುದಾಯ ಭವನ ಸಮಿತಿ ಅಧ್ಯಕ್ಷ ಶೇಖರಪ್ಪ ಮಾತನಾಡಿದರು.
ಇದೇ ವೇಳೆ ಶಿಬಿರಾರ್ಥಿಗಳಿಂದ ಮತ್ತೆ ಮದ್ಯ ವ್ಯಸನಿಗಳಾಗುವುದಿಲ್ಲ ಎಂದು ಮಂಜುನಾಥಸ್ವಾಮಿ ಮೇಲೆ ಪ್ರಮಾಣ ಮಾಡಿಸಲಾಯಿತು. ಜನಜಾಗೃತಿ ವೇದಿಕೆಯ ಅಣಬೇರು ಮಂಜಣ್ಣ, ಕಸಾಪ ತಾಲೂಕು ಅಧ್ಯಕ್ಷ ಮಧುಕುಮಾರ್, ಯೋಗೀಶ್, ಸಿದ್ದೇಶ್, ತಾಲೂಕು ಯೋಜನಾಧಿಕಾರಿಗಳಾದ ಬಾಲಕೃಷ್ಣ, ನಾಗರಾಜ್ ಕುಲಾಲ್, ಶಿಬಿರಾಧಿಕಾರಿ ವಿದ್ಯಾಧರ್, ವಿಠೋಬ, ವಿಕಾಸ್ ಇತರರಿದ್ದರು.
ಸಂಸಾರದ ನಂದಾದೀಪ ಪ್ರಜ್ವಲಿಸಲಿ
ಮದ್ಯವರ್ಜನ ಶಿಬಿರದಿಂದ ಮನೆಗೆ ಮರಳಿದ ನಂತರ ನಿಮ್ಮ ಸಂಸಾರದ ನಂದಾದೀಪ ಮತ್ತಷ್ಟು ಪ್ರಜ್ವಲಿಸಲಿದೆ. ನವ ಜೀವನಕ್ಕೆ ಕಾಲಿಟ್ಟಿರುವ ನೀವು ಸೀತಾರಾಮರಂತೆ ಆದರ್ಶ ಜೀವನ ನಡೆಸಬೇಕು. ಕಳೆದ ದಿನಗಳನ್ನು ಮರೆತು ಕುಟುಂಬವನ್ನು ಸಂತೋಷದಿಂದ ನೋಡಿಕೊಳ್ಳಿ ಎಂದು ಯೋಜನೆ ಜಿಲ್ಲಾ ನಿರ್ದೇಶಕ ಲಕ್ಷ್ಮಣ್ ಹೇಳಿದರು.