ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ
ಗ್ರಾಮೀಣ ಪ್ರದೇಶದ ಎಸ್ಸಿ, ಎಸ್ಟಿ ಹಾಗೂ ಇತರ ಹಿಂದುಳಿದ ವರ್ಗಗಳ ಬಡ ರೈತರು, ಕೂಲಿ ಕಾರ್ಮಿಕರ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಕಲಿಯುವ ಸರ್ಕಾರಿ ಶಾಲೆ ಮೂಲಸೌಕರ್ಯಗಳಿಲ್ಲದೆ ಕಣ್ಣೀರು ಹಾಕುತ್ತಿದೆ.
ಹೌದು, ಮತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಣಿವಾಡ ಗ್ರಾಮದ ಶತಮಾನ ದಾಟಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡ ಸಂಪೂರ್ಣ ಶಿಥಿಲವಾಗಿದ್ದು, ಕುಸಿದುಬೀಳುವ ಆತಂಕ ಎದುರಾಗಿದೆ. ಜತೆಗೆ ಸಮರ್ಪಕ ಕುಡಿಯುವ ನೀರು, ಶೌಚಗೃಹ, ಅಡುಗೆಮನೆ ವ್ಯವಸ್ಥೆಗಳಿಲ್ಲದೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನಿತ್ಯ ಪರದಾಡುತ್ತಿದ್ದಾರೆ.
ಸುಮಾರು 100 ವರ್ಷಗಳ ಹಿಂದೆ ಕಲ್ಲು ಮತ್ತು ಕೆಂಪು ಹಂಚಿನಿಂದ ನಿರ್ಮಿಸಲಾದ ಈ ಶಾಲೆಯಲ್ಲಿ ಒಟ್ಟು 5 ಕೊಠಡಿಗಳಿವೆ. ಇವುಗಳಲ್ಲಿ 2 ಕೊಠಡಿಗಳ ಗೋಡೆಗಳು ಮಳೆ ನೀರು ತುಂಬಿ ಸಂಪೂರ್ಣ ಹಾಳಾಗಿವೆ. ಉಳಿದ 3 ಕೊಠಡಿಗಳಲ್ಲಿ ಒಂದನ್ನು ಕಚೇರಿಯಾಗಿ ಬಳಸುತ್ತಿದ್ದು, ಇನ್ನೆರಡು ಕೊಠಡಿಗಳಲ್ಲಿ 1 ರಿಂದ 7ನೇ ತರಗತಿಯ ಒಟ್ಟು 42 ವಿದ್ಯಾರ್ಥಿಗಳಿಗೆ ಏಕಕಾಲಕ್ಕೆ ಪಾಠ ಮಾಡಲಾಗುತ್ತಿದೆ.
ಬಿಸಿಯೂಟ ತಯಾರಿಕೆ ಕೊಠಡಿಯ ಗೋಡೆಗಳು ಬಿರುಕುಬಿಟ್ಟಿದ್ದು, ಮಳೆ ಬಂದಾಗ ಅಕ್ಕಿ, ಬೇಳೆ ಸೇರಿ ಇತರ ಆಹಾರ ಪದಾರ್ಥಗಳು ನೀರಿನಲ್ಲಿ ತೇಲಾಡುವ ಪರಿಸ್ಥಿತಿ ಇದೆ. ಛಾವಣಿಯ ಕಾಂಕ್ರೀಟ್ ಕಳಚಿ ಬೀಳುತ್ತಿದ್ದು, ಅಡುಗೆ ಸಿಬ್ಬಂದಿ ಜೀವ ಭಯದಲ್ಲೇ ಕೆಲಸ ಮಾಡಬೇಕಿದೆ. ಇನ್ನು ಶಾಲೆಯ ಏಕೈಕ ಶೌಚಗೃಹದ ಸಿಮೆಂಟ್ ಶೀಟ್ಗಳು ಒಡೆದು ಹೋಗಿದ್ದು, ವಿದ್ಯಾರ್ಥಿಗಳು ಶೌಚಕ್ಕೆ ಹೋಗಲು ಭಯಪಡುವಂತಾಗಿದೆ.
ಶಾಲೆಯ 5 ಕೊಠಡಿಗಳಲ್ಲಿ 2 ಸಂಪೂರ್ಣ ಹಾಳಾಗಿದೆ. ಉಳಿದ ಮೂರು ಕೊಠಡಿಗಳಲ್ಲಿ ಕಚೇರಿ ಹಾಗೂ ಬೋಧನೆಗೆ ಬಳಸಲಾಗುತ್ತಿದೆ. ಅಡುಗೆ ಮನೆ ಹಾಗೂ ಶೌಚಗೃಹ ಶಿಥಿಲಾವಸ್ಥೆ ತಲುಪಿರುವ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.ಜಿ.ಪಿ. ಉಮಾ ಪ್ರಭಾರ ಮುಖ್ಯ ಶಿಕ್ಷಕಿ.
ಶಾಲೆಯಲ್ಲಿ ಮೂಲ ಸೌಕರ್ಯ ಗಳ ಕೊರತೆ ಇದೆ. ಕ್ಷೇತ್ರದ ಶಾಸಕರು ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.ಮಂಜುನಾಥ್ ಗೋಣಿವಾಡ, ಗ್ರಾಪಂ ಮಾಜಿ ಸದಸ್ಯ.