ದಾವಣಗೆರೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಬಿಐಇಟಿ ಕಾಲೇಜಿನ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ ಗಿಡಕ್ಕೆ ನೀರೆರೆವ ಮೂಲಕ ಉದ್ಘಾಟಿಸಿದರು. ಡಾ.ಬಿ.ಇ. ರಂಗಸ್ವಾಮಿ, ಕಮಲಾ ಸೊಪ್ಪಿನ್, ರಾಜಶೇಖರ ಪುರಾಣಿಕ್, ಡಾ.ವಿ. ರತ್ನಾ, ಗುರುಸಿದ್ದಸ್ವಾಮಿ, ಅಂಗಡಿ ಸಂಗಪ್ಪ, ಎಸ್.ಬಿ. ಶಿಲ್ಪಾ ಇತರರಿದ್ದರು.  
ದಾವಣಗೆರೆ

ವೃದ್ಧಿಸದ ಮಹಿಳಾ ವಿಜ್ಞಾನಿಗಳ ಸಂಖ್ಯೆ

ಪ್ರಮುಖ ಮುಖ್ಯಾಂಶಗಳು

  • ನಿಕಟಪೂರ್ವ ಕುಲಸಚಿವ ರಂಗಸ್ವಾಮಿ ವಿಷಾದ
  • ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ
  • 2047ನೇ ಇಸವಿಗೆ ಭಾರತದ ಆತ್ಮನಿರ್ಭರತೆ ನಿಶ್ಚಿತ
ದಾವಣಗೆರೆ: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಉನ್ನತ ವ್ಯಾಸಂಗ ಹಾಗೂ ಡಾಕ್ಟರೇಟ್ ಪದವಿ ಪಡೆಯುವ ಮಹಿಳೆಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಆದರೂ ಸಹ ಮಹಿಳಾ ಸಂಶೋಧಕರು ಮತ್ತು ವಿಜ್ಞಾನಿಗಳ ಸಂಖ್ಯೆ ಬೆಳೆಯುತ್ತಿಲ್ಲ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ನಿಕಟಪೂರ್ವ ಕುಲಸಚಿವ ಡಾ.ಬಿ.ಇ. ರಂಗಸ್ವಾಮಿ ವಿಷಾದಿಸಿದರು.
ನಗರದ ಎ.ವಿ. ಕಮಲಮ್ಮ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳೆಯರು ವೈಯಕ್ತಿಕ ಸಾಧನೆಗಿಂತಲೂ ಕುಟುಂಬದ ನಿರ್ವಹಣೆ, ಮಕ್ಕಳ ಶಿಕ್ಷಣಕ್ಕೆ ಗಮನ ನೀಡುವುದು ಹೆಚ್ಚಿದೆ. ಅಲ್ಲದೆ ಉನ್ನತ ಶಿಕ್ಷಣಕ್ಕಿಂತಲೂ ಹೆಣ್ಣುಮಕ್ಕಳ ಮದುವೆಗೆ ಆದ್ಯತೆ ನೀಡುವ ಬೌದ್ಧಿಕ ದೃಷ್ಟಿಕೋನವಿದೆ. ಇದರಿಂದ ಮಹಿಳೆಯರು ಹೊರಬರಬೇಕಿದೆ ಎಂದರು.
ಯುನೆಸ್ಕೋ ಇನ್ಸಿಟಿಟ್ಯೂಟ್ ಆಫ್ ಸ್ಟಾಟಿಸ್ಟಿಕ್ಸ್ ವರದಿಯನ್ವಯ ಶೇ.28.8ರಷ್ಟು ಮಹಿಳೆಯರು ವಿಜ್ಞಾನ ಮತ್ತು ಸಂಶೋಧನೆ ಅಭಿವೃದ್ಧಿಯಲ್ಲಿ ತೊಡಗಿದ್ದಾರೆ. ವಿಶ್ವದ ಎಲ್ಲ ರಾಷ್ಟ್ರಕ್ಕಿಂತಲೂ ಭಾರತೀಯ ಮಹಿಳಾ ಸಂಶೋಧಕರ ಪ್ರಮಾಣ ಶೇ.30ಕ್ಕಿಂತ ಕಡಿಮೆ ಇದೆ. ಭಾರತದಲ್ಲಿನ 3.42 ಲಕ್ಷ ಸಂಶೋಧಕರಲ್ಲಿ 56747 ಮಹಿಳಾ ಸಂಶೋಧಕರಿದ್ದಾರೆ ಎಂದು ವಿವರಿಸಿದರು.
ಮಹಿಳಾ ವಿಜ್ಞಾನಿಗಳು, ವಿವಿಧ ಕ್ಷೇತ್ರಗಳಲ್ಲಿನ ಸಾಧನೆ ಹಾಗೂ ನವೋದ್ಯಮಿಗಳ ಕಾರ್ಯದಕ್ಷತೆ ಗಮನಿಸಿದಾಗ 2047ನೇ ಇಸವಿಗೆ ಭಾರತ ಆತ್ಮನಿರ್ಭರ ದೇಶವಾಗುವುದು ಕಷ್ಟವಲ್ಲ. ಯುವ ಉದ್ಯಮಿಗಳು ತಯಾರಾಗಲು ಮಹಿಳೆಯರಲ್ಲೂ ಆತ್ಮವಿಶ್ವಾಸ ಮೂಡಬೇಕು ಎಂದು ಆಶಿಸಿದರು.
ಅನುದಾನಿತ ಸಂಶೋಧನಾ ಯೋಜನೆಗಳಲ್ಲಿ ಮಹಿಳಾ ಸಂಶೋಧಕರ ಪಾಲುದಾರಿಕೆ ಪ್ರಮಾಣ 2016-17ರ ಅವಧಿಯಲ್ಲಿ ಶೇ.24ರಷ್ಟಿತ್ತು. 2018-19ನೇ ಸಾಲಿನಲ್ಲಿ ಇದು ಶೇ.28ಕ್ಕೇರಿದೆ. ಭಾರತದಲ್ಲಿ ವಿಜ್ಞಾನ- ತಂತ್ರಜ್ಞಾನ ಮೊದಲಾದ ವಿಷಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಶೇ. 43ರಷ್ಟು ಮಹಿಳೆೆಯರಿದ್ದು ಇದು ಜಾಗತಿಕ ಸರಾಸರಿ ಮಿತಿ ಮೀರಿರುವುದು ಗಮನಾರ್ಹ ಅಂಶ ಎಂದರು.
ಭಾರತದಲ್ಲಿ ಉನ್ನತ ಶಿಕ್ಷಣ ಪಡೆಯುವವರಲ್ಲಿ ಮಹಿಳೆಯರ ಪಾಲು ಶೇ.48ರಷ್ಟಿದೆ. ದಾಖಲಾದ 4.33 ಕೋಟಿ ವಿದ್ಯಾರ್ಥಿಗಳಲ್ಲಿ 2.10 ಕೋಟಿ ವಿದ್ಯಾರ್ಥಿನಿಯರೇ ಇದ್ದಾರೆ. ಮಹಿಳೆಯರು ಉದ್ಯೋಗ, ಸಂಶೋಧನೆ ಹಾಗೂ ನಾಯಕತ್ವದ ವಿಭಾಗದಲ್ಲಿ ಸಮಾಜ ಪ್ರಾತಿನಿಧ್ಯ ಪಡೆಯಬೇಕಿದೆ. ಅವರಿಗೆ ಸಮಾನಾವಕಾಶ ದೊರೆತಲ್ಲಿ ವೈಜ್ಞಾನಿಕ ಕ್ಷೇತ್ರದ ಅಭಿವೃದ್ಧಿಗೆ ಇನ್ನಷ್ಟು ಕೊಡುಗೆ ನೀಡಬಹುದು ಎಂದರು.
ಅತ್ಯುನ್ನತ ಪ್ರಶಸ್ತಿಗಳಲ್ಲೂ ಮಹಿಳೆಯರು ಹಿಂದಿದ್ದಾರೆ. ನೋಬೆಲ್ ಪ್ರಶಸ್ತಿಗಳು ಇದುವರೆಗೆ 894 ಪುರುಷ ವಿಜ್ಞಾನಿಗಳಿಗೆ ದೊರಕಿವೆ. ಮಹಿಳಾ ವಿಜ್ಞಾನಿಗಳಲ್ಲಿ 67 ಮಂದಿಗೆ ಮಾತ್ರವೇ ದಕ್ಕಿದೆ. ಭಟ್ನಾಕರ್ ಪ್ರಶಸ್ತಿ ಪದ್ಮಭೂಷಣ, ಭಾರತರತ್ನ ಪ್ರಶಸ್ತಿಯಲ್ಲೂ ಮಹಿಳೆ ಹಿಂದಿದ್ದಾಳೆ. ಇದುವರೆಗೆ ಯಾವುದೇ ಮಹಿಳಾ ವಿಜ್ಞಾನಿಗೆ ಪದ್ಮವಿಭೂಷಣ ಪ್ರಶಸ್ತಿ ದಕ್ಕಿಲ್ಲ.
ಉಭಯ ಸರ್ಕಾರಗಳು ಹಾಗೂ ವೈಜ್ಞಾನಿಕ ಸಂಸ್ಥೆಗಳು ವಿಜ್ಞಾನ ಮತ್ತು ತಂತ್ರಜ್ಞಾನದ ಆಸಕ್ತ ಮಹಿಳೆಯರನ್ನು ಉತ್ತೇಜಿಸಬೇಕಿದೆ. ಪಿಎಚ್‌ಡಿ ಅಧ್ಯಯನ ಮುಗಿಸಿ ವಿಜ್ಞಾನದಿಂದ ದೂರ ಉಳಿದ ಮಹಿಳೆಯರನ್ನು ಪ್ರೋತ್ಸಾಹಿಸಬೇಕಿದೆ. ಅವರಿಂದಲೂ ಜಿಡಿಪಿಗೆ ಕೊಡುಗೆ ನಿರೀಕ್ಷಿಸಬಹುದು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಐಇಟಿ ಕಾಲೇಜಿನ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ, ಯಾವುದೇ ಪದವಿ ಪಡೆಯದಿದ್ದರೈಊ ಆಹಾರ ವಿಜ್ಞಾನದಲ್ಲಿ ಪಕ್ವತೆ ಗಳಿಸಿದ್ದ ತಾಯಿ, ಅಜ್ಜಿಯಂದಿರೇ ನಿಜವಾದ ವಿಜ್ಞಾನಿಗಳು. ಉಡುತಡಿಯಲ್ಲಿದ್ದ ಅಕ್ಕಮಹಾದೇವಿ ಕದಳಿಯಲ್ಲಿ ಐಕ್ಯವಾಗಿದ್ದರೆ ಜ್ಞಾನವೇ ಅದಕ್ಕೆ ಕಾರಣ. ಹೀಗಾಗಿ ಅಕ್ಕ ಕೂಡ ವಿಜ್ಞಾನಿ ಎಂದು ಪ್ರತಿಪಾದಿಸಿದರು.
ಟೆಸ್ಸಿ ಥಾಮಸ್, ಜಾನಕಿ ಅಮ್ಮಾಳ್, ಆನಂದಿ ಗೋಪಾಲರಾವ್ ಜೋಷಿ, ಮೇಡಂ ಕ್ಯೂರಿ, ಕಮಲಾ ಸೋಹನಿ ಮೊದಲಾದ ಮಹಿಳಾ ವಿಜ್ಞಾನಿಗಳ ಕೊಡುಗೆ ಉದಾಹರಿಸಿದ ಅವರು, ಇಂತಹ ವಿಜ್ಞಾನಿಗಳ ಸಾಧನೆಯನ್ನು ನಾವಿಂದು ಕೃತಜ್ಞತೆಯಿಂದ ಸ್ಮರಿಸಬೇಕು. ಅವರು ವಿದ್ಯಾರ್ಥಿನಿಯರಿಗೆ ಆದರ್ಶವಾಗಬೇಕು ಎಂದು ಹೇಳಿದರು.
ಕರ್ನಾಟಡಕ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ವಿಜ್ಞಾನ ಪರಿಷತ್ತು, ದಾವಣಗೆರೆ ಸೈನ್ಸ್ ಫೌಂಡೇಷನ್ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಾಚಾರ್ಯೆ ಕಮಲಾ ಸೊಪ್ಪಿನ್, ಜಿಲ್ಲಾ ಪರಿಸರ ಅಧಿಕಾರಿ ರಾಜಶೇಖರ ಪುರಾಣಿಕ್, ವಿಜ್ಞಾನಿ ಡಾ.ವಿ. ರತ್ನಾ, ವಿಜ್ಞಾನ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಗುರುಸಿದ್ದಸ್ವಾಮಿ, ಖಜಾಂಚಿ ಅಂಗಡಿ ಸಂಗಪ್ಪ, ಡಾ.ಬಿ.ಜಿ. ರುದ್ರೇಶ್, ಡಾ. ಪ್ರವೀಣ್, ಎಸ್.ಬಿ. ಶಿಲ್ಪಾ ಇತರರಿದ್ದರು.