ಕೃಷ್ಣವೇಣಿ ಎಜುಕೇಷನ್ ಫೌಂಡೇಷನ್ ಹಾಗೂ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್‌ನಿಂದ ದಾವಣಗೆರೆಯಲ್ಲಿ ಭಾನುವಾರ, ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ನೆರವೇರಿಸಲಾಯಿತು. ಓಂಕಾರ ಶಿವಾಚಾರ್ಯ ಸ್ವಾಮೀಜಿ, ಚಿಂದೋಡಿ ಚಂದ್ರಧರ, ವಿ. ಅವಿನಾಶ್, ಮಾಲಾ ನಾಗರಾಜ್, ವಾಸುದೇವ ರಾಯ್ಕರ್, ಕಣ್ಣಾಳ್ ಆಂಜಿನಪ್ಪ ಇತರರಿದ್ದರು.
- ಓಂಕಾರ ಶಿವಾಚಾರ್ಯ ಸ್ವಾಮೀಜಿ ಅನಿಸಿಕೆ
- 30ಕ್ಕೂ ಹೆಚ್ಚು ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ
- ಕೃಷ್ಣವೇಣಿ ಎಜುಕೇಷನ್ ಫೌಂಡೇಷನ್ ಆಯೋಜನೆ
ದಾವಣಗೆರೆ: ತಾಯಂದಿರಲ್ಲಿ ರೂಢಿಗತ ಉತ್ತಮ ಗುಣ -ಸಂಸ್ಕಾರಗಳು ಗರ್ಭದಲ್ಲಿನ ಭ್ರೂಣದ ಮೇಲೆಯೂ ಪ್ರಭಾವ ಬೀರಲಿವೆ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಕೃಷ್ಣವೇಣಿ ಎಜುಕೇಷನ್ ಫೌಂಡೇಷನ್ ಹಾಗೂ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ವತಿಯಿಂದ ಇಲ್ಲಿನ ರೋಟರಿ ಬಾಲಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ, ಗರ್ಭಿಣಿಯರ ಸಾಮೂಹಿಕ ಸೀಮಂತ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ತಾಯಿಯ ಗರ್ಭಾವಸ್ಥೆಯಲ್ಲೇ ಮಗುವಿನ ಭವಿಷ್ಯ ನಿರ್ಧಾರವಾಗಲಿದೆ. ತಾಯಿಯ ನಡೆ-ನುಡಿ, ಆಚಾರ- ವಿಚಾರ ಕೂಡ ಮಗುವಿನ ಮೇಲೆ ಪರಿಣಾಮ ಬೀರಲಿದೆ. ತಾಯಂದಿರ ಉತ್ತಮ ಕರ್ಮ, ಸಮಚಿತ್ತ, ಸಮಷ್ಠಿಪ್ರಜ್ಞೆ ಬೆಳೆಸಿಕೊಂಡಲ್ಲಿ ಆರೋಗ್ಯವಂತ ಮಗು ಭೂಮಿಗೆ ಬರಲಿದೆ ಎಂದರು.
ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ವಿ. ಅವಿನಾಶ್ ಮಾತನಾಡಿ ತಾಯಿಯ ಹೆಸರಲ್ಲಿ ಮಾಲಾ ನಾಗರಾಜ್ ಅವರು ಸಾಮಾಜಿಕ ಕಾರ್ಯ ನಡೆಸುತ್ತಿರುವುದು ಗಮನಾರ್ಹ ಎಂದರು.
ಚಿನ್ನಬೆಳ್ಳಿ ವರ್ತಕ ವಾಸುದೇವ ರಾಯ್ಕರ್ ಮಾತನಾಡಿ ತಾಯಂದಿರು 9 ತಿಂಗಳ ಕಾಲ ಮಗುವನ್ನು ಹೆರುವ ಸಂಕಷ್ಟ, ಹೆರಿಗೆಯ ಸಂಭ್ರಮ ಎರಡನ್ನೂ ಅನುಭವಿಸುತ್ತಾರೆ. ತಾಯಿಯ ಋಣ ತೀರಿಸಲಾಗದು ಎಂದರು.
ಇದೇ ವೇಳೆ ಸಂಸ್ಥೆ ವತಿಯಿಂದ 30ಕ್ಕೂ ಹೆಚ್ಚು ಗರ್ಭಿಣಿಯರಿಗೆ ಕಂಕಣ ಕಟ್ಟಿ ಸೀರೆ, ಬಳೆ, ಹಣ್ಣಿನ ಬುಟ್ಟಿ, ಸ್ಮರಣಿಕೆಯನ್ನು ಉಡಿದುಂಬಿ ಸೀಮಂತ ಮಾಡಲಾಯಿತು. ಶಿವಸಿಂಪಿ ಸಮಾಜದ ಮುಖಂಡ ಚಿಂದೋಡಿ ಚಂದ್ರಧರ, ಸಂಸ್ಥೆಯ ಅಧ್ಯಕ್ಷೆ ಮಾಲಾ ನಾಗರಾಜ್, ಪಾಲಿಕೆ ಆಶ್ರಯ ಸಮಿತಿಯ ಸದಸ್ಯ ಕಣ್ಣಾಳ್ ಆಂಜಿನಪ್ಪ, ಉದ್ಯಮಿಗಳಾದ ಮಂಜುನಾಥ, ಭಾರತಿ, ನ್ಯಾಯವಾದಿ ಅಮೀರಾಬಾನು, ಕೆ. ಪ್ರಕಾಶ್ ಇತರರಿದ್ದರು.