ಹಿರೇಕಲ್ಮಠದಲ್ಲಿ ಕಾರ್ತಿಕೋತ್ಸವದ ಅಂಗವಾಗಿ ಮಠದ ಆವರಣದಲ್ಲಿ ಲಕ್ಷ ದೀಪವನ್ನು ಹಚ್ಚಿ ಕಾರ್ತಿಕಮಾಸಕ್ಕೆ ಮೆರುಗು ತಂದ ಭಕ್ತರು.lamp 
ದಾವಣಗೆರೆ

ದೀಪಗಳ ಬೆಳಕು ಪರಿವರ್ತನೆಗೆ ನಾಂದಿ Lamp

ಪ್ರಮುಖ ಮುಖ್ಯಾಂಶಗಳು

  • ದೀಪಗಳ ಬೆಳಕು ಮನುಷ್ಯನ ಪರಿವರ್ತನೆ
  • ಕತ್ತಲೆಯಿಂದ ಬೆಳಕಿನೆಡೆಗೆ ಹೆಜ್ಜೆ
  • ಮನುಷ್ಯನ ಮನಸ್ಸು ಪ್ರಜ್ವಲಗೊಳ್ಳುತ್ತದೆ
ಹೊನ್ನಾಳಿ: ದೀಪಗಳ ಬೆಳಕು ಮನುಷ್ಯನ ಪರಿವರ್ತನೆಗೆ ನಾಂದಿಯಾಗುತ್ತದೆ. ಅಲ್ಲದೆ ಕತ್ತಲೆಯಿಂದ ಬೆಳಕಿನೆಡೆಗೆ ಹೆಜ್ಜೆ ಹಾಕುತ್ತಾನೆ ಆಗ ಮನುಷ್ಯನ ಮನಸ್ಸು ಪ್ರಜ್ವಲಗೊಳ್ಳುತ್ತದೆ ಎಂದು ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು ಹೇಳಿದರು. 
ಹಿರೇಕಲ್ಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ತಿಕ ಮಾಸದ ಚಟ್ಟಿ ಅಮಾವಸ್ಯೆ ಮಹಾಪೂಜೆ, ಕದಳಿ ಕಾರ್ತಿಕ ಲಕ್ಷ ದೀಪೋತ್ಸವ, ಗುರು ಚನ್ನೇಶ್ವರ ಬೆಳ್ಳಿ ರಥೋತ್ಸವ ಹಾಗೂ ಧರ್ಮಸಭೆಯನ್ನು ಉದ್ದೇಶಿಸಿ ಆಶೀರ್ವಚನ ನೀಡಿ ಮಾತನಾಡಿದರು.
ಕಾರ್ತಿಕದ ದೀಪದಂತೆ ಮನುಷ್ಯನ ಬದುಕಿನಲ್ಲಿ ಸಂಪೂರ್ಣ ಕತ್ತಲೆ ತೊರೆದು ಹೊಸ ಭರವಸೆ ಮೂಡಲಿ, ಕಾರ್ತಿಕ ಮಾಸದಲ್ಲಿ ದೀಪ ಹಚ್ಚುವುದು ಸಾಂಕೇತಿಕ. ದೀಪ ಇದ್ದಲ್ಲಿಯೇ ಇದ್ದು ಎಲ್ಲರಿಗೂ ಬೆಳಕು ನೀಡುತ್ತದೆ. ನಾವು ಸಹ ಇದ್ದಲ್ಲಿಯೇ ಸುಖ ಸಂತೋಷವನ್ನು ಕಾಣಬೇಕು. ಅದಕ್ಕಾಗಿ ಹುಡುಕಿಕೊಂಡು ಹೋಗಬಾರದು. ಮನಸ್ಸಿನಲ್ಲಿ ಒಳ್ಳೆಯ ಗುಣಗಳನ್ನು ಬೆಳಸಿಕೊಂಡಾಗ ದೊಡ್ಡ ದೀಪ ಹಚ್ಚಿದಂತಾಗುತ್ತದೆ ಎಂದರು.
ಕತ್ತಲೆ ನಂತರ ಬೆಳಕು ಬರುವುದು ಸಹಜ, ಅದರಂತೆ ಸುಖ ಹಾಗೂ ದುಃಖಗಳು ಬರುತ್ತದೆ ಎಂಬುದನ್ನು ನಾವು ಯಾರು ಮರೆಯಬಾರದು. ಭೌತಿಕ ಸಂಪತ್ತು ಬೆಟ್ಟದಷ್ಟಿದ್ದರೂ ಅದು ಶಾಶ್ವತವಲ್ಲ. ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಸತ್ಯ ಹಾಗೂ ಧರ್ಮವೇ ನಿಜವಾದ ಸಂಪತ್ತು. ಆಧ್ಯಾತ್ಮಿಕ ಚಿಂತನೆಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನೆಮ್ಮದಿಯ ಜೀವನಕ್ಕೆ ಭಂಗ ಇರುವುದಿಲ್ಲ ಎಂದು ತಿಳಿಸಿದರು.
ಮನುಷ್ಯ ಆಸೆ, ಸಂಪತ್ತು ಹಾಗೂ ಕೀರ್ತಿಯ ಹಿಂದೆ ಓಡಿದಾಗ ಮಾತ್ರ ತನ್ನ ಸುಖದ ಜೀವನವನ್ನು ಕಳೆದುಕೊಳ್ಳುತ್ತಾನೆ. ಆದ್ದರಿಂದ ದುರಾಸೆಯ ಹಿಂದೆ ಓಡಬೇಡಿ, ಇದ್ದುದ್ದರಲ್ಲೇ ತೃಪ್ತಿಪಟ್ಟರೆ ನಿಮ್ಮ ಜೀವನದಲ್ಲಿ ಶಾಶ್ವತವಾಗಿ ಶಾಂತಿ ನೆಲಸಿರುತ್ತದೆ ಎಂದು ನುಡಿದರು.
ಸನಾತನ ಭಾರತೀಯ ಪರಂಪರೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ತನ್ನದೆ ಆದ ವೈಶಿಷ್ಟ್ಯ ಹೊಂದಿವೆ. ಜಗತ್ತಿನಲ್ಲಿ ಪ್ರತಿಯೊಬ್ಬ ಮನುಷ್ಯನು ಬದುಕಲು ಶಾಂತಿ ಅವಶ್ಯಕವಾಗಿದೆ. ಸುಖ ಶಾಂತಿ ಬಯಸುವ ಮನುಷ್ಯರು ಯಾವಾಗಲೂ ಸತ್ಯದ ಮಾರ್ಗದಲ್ಲಿ ನಡೆದರೆ ಮಾತ್ರ ನಿಮಗೆ ಜಯ ನಿಶ್ಚಿತ ಎಂದು ತಿಳಿಸಿದರು.
ಆಡುವ ಮಾತು ಒಂದು ನಡೆಯುವ ದಾರಿ ಇನ್ನೊಂದಾದರೆ ಬದುಕಿನಲ್ಲಿ ನೆಮ್ಮದಿ ಕಾಣಲು ಅಸಾಧ್ಯ. ಆದ್ದರಿಂದ ನಮ್ಮ ನಡೆ ಹಾಗೂ ನುಡಿ ಒಂದಾಗಿರಬೇಕು ಎಂದರು.

ಕದಳಿ ಹಾಗೂ ಲಕ್ಷ ದೀಪೋತ್ಸವ

ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಇಲ್ಲಿನ ಹಿರೇಕಲ್ಮಠದ ಆವರಣದಲ್ಲಿ ಲಕ್ಷ ದೀಪೋತ್ಸವ ನಡೆಯುತ್ತಿದ್ದು, ಓಂಕಾರ, ಶ್ರೀಕಾರ, ಲಿಂಗ, ಚನ್ನಪ್ಪಸ್ವಾಮಿ, ಶ್ರೀಮಠದ ಚಿತ್ರಗಳನ್ನು ದೀಪದಲ್ಲಿ ಬಿಡಿಸಿ ಹಣತೆ ಹಚ್ಚಿದರು. ನೋಡುವುದಕ್ಕೆ ಎರಡು ಕಣ್ಣು ಸಾಲದಾಗಿತ್ತು. ಸಹಸ್ರಾರು ಭಕ್ತರು ಮಠದ ಆವರಣದಲ್ಲಿ ಹಣತೆ ಹಚ್ಚಿ ಸಂಭ್ರಮಿಸಿದರು.

ಮುಗಿಲೆತ್ತರಕ್ಕೆ ಆಕಾಶಬುಟ್ಟಿ ದೀಪಾ

ಕಾರ್ತಿಕ ಮಾಸದ ಅಂಗವಾಗಿ ಹಿರೇಕಲ್ಮಠದ ಆವರಣದಲ್ಲಿ ಆಕಾಶ ಬುಟ್ಟಿ ದೀಪಾ ಹಚ್ಚಿ ಮೇಲಕ್ಕೆ ಕಳುಹಿಸುತ್ತಿದ್ದಂತೆ ಸದ್ಭಕ್ತರಲ್ಲಿ ಸಂಭ್ರಮ ಮುಗಿಲು ಮುಟ್ಟುವಂತೆ ಮಾಡಿತ್ತು. ಬಣ್ಣಬಣ್ಣದ ನಕ್ಷತ್ರ, ಚೌಕಾಕಾರ ಹಾಗೂ ಉದ್ದನೆಯ ಆಕಾಶ ಬುಟ್ಟಿಗಳಿಗೆ ದೀಪಾ ಹಚ್ಚಿ ಆಕಾಶಕ್ಕೆ ಬಿಟ್ಟು ಸಂಭ್ರಮಿಸಿದರು. ಈ ಸಂಭ್ರಮದಲ್ಲಿ ಸಹಸ್ರಾರು ಮಹಿಳೆಯರು, ಮಕ್ಕಳು ಹಾಗೂ ಮಠದ ಭಕ್ತರು ಆಕಾಶ ಬುಟ್ಟಿಗಳನ್ನು ಆಕಾಶಕ್ಕೆ ಹಾರಿಬಿಡುವ ಮೂಲಕ ಪಾರಂಪರಿಕ ಹಾಗೂ ಸನಾತನದ ಪ್ರತಿಬಿಂಬವಾದ ಈ ಕಾರ್ಯಕ್ರಮ 2 ಗಂಟೆಗಳ ಕಾಲ ನಡೆಯಿತು.