ಹರಿಹರ ನಗರದಲ್ಲಿ ಭಾನುವಾರ ಜರುಗಿದ ಶ್ರೀ ಹರಿಹರೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ಅದ್ದೂರಿಯಾಗಿ ನಡೆಯಿತು.Chariot Festival
- ದೇವರ ನಾಮಸ್ಮರಣೆಯೊಂದಿಗೆ ತೇರು ಎಳೆದ ಭಕ್ತರು
- ಉತ್ಸವ ಮೂರ್ತಿ ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ
ಹರಿಹರ: ಮಧ್ಯ ಕರ್ನಾಟಕದ ಐತಿಹಾಸಿಕ ಪುರಾಣ ಪ್ರಸಿದ್ಧ ಕ್ಷೇತ್ರನಾಥ ಶ್ರೀ ಹರಿಹರೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ನಗರದಲ್ಲಿ ಭಾನುವಾರ ಶ್ರದ್ಧೆ, ಭಕ್ತಿ, ಸಡಗರದಿಂದ ಜರುಗಿತು.
ಬೆಳಗ್ಗೆ 10.55ಕ್ಕೆ ಮೇಷ ಲಗ್ನದ ಶುಭ ಮಹೂರ್ತದಲ್ಲಿ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವಸ್ಥಾನ ರಸ್ತೆಯ ತೇರುಗಡ್ಡೆ ವೃತ್ತದಿಂದ ಶಿವಮೊಗ್ಗ ವೃತ್ತದವರೆಗೆ ಭಕ್ತರು ಹರ ಹರ ಮಹಾದೇವ, ಗೋವಿಂದಾ... ಗೋವಿಂದಾ..., ಹರ ಹರ ಮಹಾದೇವ್ ಎಂದು ನಾಮಸ್ಮರಣೆ ಮಾಡುತ್ತಾ ರಥ ಎಳೆದರು.
ಕೆಲವರು ತೇರಿನ ಮುಕುಟಕ್ಕೆ ಬಾಳೆಹಣ್ಣು, ಹೂವು, ಉತ್ತತ್ತಿ ಎಸೆದರು. ತೇರಿನ ಗಾಲಿಗಳಿಗೆ ತೆಂಗಿನಕಾಯಿ ಒಡೆದು ಹರಕೆ ತೀರಿಸಿದರು. ರಥೋತ್ಸವದಲ್ಲಿ ಸಾವಿರಾರು ಜನ ಭಕ್ತಿ, ಶ್ರದ್ಧೆಯಿಂದ ಪಾಲ್ಗೊಂಡರು. ರಥ ಶಿವಮೊಗ್ಗ ವೃತ್ತಕ್ಕೆ ಆಗಮಿಸುತ್ತಿದ್ದಂತೆ ನಗರದ ಶಿವಮೊಗ್ಗ, ಹರಪನಹಳ್ಳಿ ಹಾಗೂ ದಾವಣಗೆರೆ ಮಾರ್ಗ ಬಂದ್ ಆಗಿದ್ದರಿಂದ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಯಿತು.
ಶಾಸಕ ಬಿ.ಪಿ. ಹರೀಶ್, ಬಿಜೆಪಿ ಮುಖಂಡರಾದ ಎಸ್.ಎಂ. ವೀರೇಶ್ ಹನಗವಾಡಿ, ಚಂದ್ರಶೇಖರ್ ಪೂಜಾರ್, ಕಾಂಗ್ರೆಸ್ ಪಕ್ಷದ ಮುಖಂಡ ನಂದಿಗಾವಿ ಶ್ರೀನಿವಾಸ್, ನಗರಸಭೆ ಸದಸ್ಯರು, ದೇವಸ್ಥಾನ ಸಮಿತಿ ಸದಸ್ಯರು, ಜನಪ್ರತಿನಿಧಿಗಳು ಭಾಗವಹಿಸಿದ್ದರು.
ರಥೋತ್ಸವಕ್ಕೂ ಮುನ್ನ ಹರಿಹರೇಶ್ವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ರಥಬೀದಿಯಲ್ಲಿ ಮೆರವಣಿಗೆ ನಡೆಸಿ ನಂತರ ರಥದೊಳಗೆ ಇರಿಸಲಾಯಿತು. ರಥೋತ್ಸವದಲ್ಲಿ ಸರ್ವಧರ್ಮೀಯರೂ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ದೇವಸ್ಥಾನದ ಸಮಿತಿ ಹಾಗೂ ಕೋಟೆಕೇರಿ ಗಜಾನನ ಯುವಕ ಸಂಘದ ಸಹಯೋಗದಲ್ಲಿ ಸಮೀಪದ ಬಿರ್ಲಾ ಕಲ್ಯಾಣ ಮಂಟಪದಲ್ಲಿ ಎನ್.ಎಚ್. ಶ್ರೀನಿವಾಸ್ ಬಳಗ, ಗಣಪಾಸ್ ಇನೋವೇಟಿವ್ ಗ್ರೂಪ್, ನಡುವಲ ಪೇಟೆ ಗೆಳೆಯರ ಬಳಗ ಸೇರಿ ಮತ್ತಿತರ ಸಂಘಗಳಿಂದ ಭಕ್ತರಿಗೆ ಮಜ್ಜಿಗೆ, ಶರಬತ್ ಪಾನಕ ವಿತರಿಸುತ್ತಿದ್ದ ದೃಶ್ಯ ಕಂಡು ಬಂತು.
ಹರಿಹರೇಶ್ವರ ಸ್ವಾಮಿ ಹಾಗೂ ಲಕ್ಷ್ಮೀ ದೇವಿಗೆ ಬೆಳಗಿನಿಂದಲೇ ಪೂಜಾ ಕಾರ್ಯಕ್ರಮಗಳು ನಡೆದವು. ಗ್ರಾಮದ ಶಾನಭೋಗರು, ಪಟೇಲರು ಹಾಗೂ ಮುಜರಾಯಿ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಫೆ.2ರ ಸೋಮವಾರ ಸ್ಥಾಪಿತ ದೇವತಾ ಪೂಜೆ, ನಾಂದಿ, ಕಂಕಣ ವಿಸರ್ಜನೆ, ಧ್ವಜಾ ವಿಸರ್ಜನೆ, ಅವಭೃತ ಸ್ನಾನಗಳೊಂದಿಗೆ ಉತ್ಸವಾದಿಗಳು ಪೂರ್ಣಗೊಳ್ಳುವವು. ಸಂಜೆ 6ಕ್ಕೆ ಎಂ.ಜಿ. ಜಗದೀಶ್ ಮತ್ತು ಎಚ್.ಎನ್. ಸಮರ್ಥ ಇವರಿಂದ ಸುಗಮ ಸಂಗೀತ, ವೀರಪ್ಪ ಅಂದಲಗಿ ಇವರಿಂದ ಏಕಪಾತ್ರಾಭಿನಯ ಕಾರ್ಯಕ್ರಮ ಆಯೋಜಿಸಲಾಗಿದೆ.
ರಥೋತ್ಸವ ನಿಮಿತ್ತ ದೇವಸ್ಥಾನ ರಸ್ತೆಯಲ್ಲಿ ಖಾರಾ ಮಂಡಕ್ಕಿ, ಬೆಂಡು, ಬತಾಸೆ, ಮಕ್ಕಳ ಆಟಿಕೆ, ಬಳೆ ಸೇರಿ ಮಹಿಳೆಯರ ಅಲಂಕಾರಿಕ ವಸ್ತುಗಳ ನೂರಾರು ಅಂಗಡಿಗಳು ತಲೆಎತ್ತಿದ್ದು, 3 ದಿನ ಜಾತ್ರಾ ಸಡಗರ ನಡೆಯಲಿದೆ. ಪ್ರತಿ ವರ್ಷ ನಡೆಯುವ ರಥೋತ್ಸವಕ್ಕೆ ಬೆಂಗಳೂರು, ಹಾಸನ, ಅರಸೀಕೆರೆ, ಕಡೂರು, ಬೀರೂರು ಸೇರಿ ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ರಥೋತ್ಸವದಲ್ಲಿ ನಗರ ಹಾಗೂ ತಾಲೂಕಿನ ವಿವಿಧ ಭಾಗಗಳಿಂದ ದಾಸ ಪರಂಪರೆ ಅನುಯಾಯಿಗಳು ಶ್ವೇತವಸ್ತ್ರ ಧಾರಿಗಳಾಗಿ ಭಾಗಿಯಾಗಿ ಕೀರ್ತನೆಗಳನ್ನು ಹಾಡಿದ್ದು ಜನಮನ ಸೆಳೆಯಿತು.