ದಾವಣಗೆರೆ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವದಲ್ಲಿ ಕವಾಯತು ತಂಡಗಳಿಂದ ಧ್ವಜ ವಂದನೆ ಸ್ವೀಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್.ಮಲ್ಲಿಕಾರ್ಜುನ್.
- ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅನಿಸಿಕೆ
- ದಾವಣಗೆರೆ ಮಾದರಿ ಜಿಲ್ಲೆಗೆ ಸಂಕಲ್ಪ
- 77ನೇ ಗಣರಾಜ್ಯೋತ್ಸವದ ಸಂದೇಶ
ದಾವಣಗೆರೆ: ನೀರಾವರಿ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ರಾಜ್ಯ ಸರ್ಕಾರ ಬದ್ಧವಿದೆ. ರೈತರ ಹಿತ, ಯುವಕರಿಗೆ ಉದ್ಯೋಗ ಕಲ್ಪಿಸುವುದೇ ನಮ್ಮ ಗುರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸ್ಪಷ್ಟಪಡಿಸಿದರು.
ಜಿಲ್ಲಾಡಳಿತ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ, 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು.
ಭಾರತ ಗಣರಾಜ್ಯೋತ್ಸವ ಸಂದರ್ಭದಲ್ಲಿ ಹುತಾತ್ಮ ಸ್ವಾತಂತ್ರೃಯೋಧರನ್ನು ಹಾಗೂ ಸೈನಿಕರ ಸೇವೆ ಸ್ಮರಿಸೋಣ. ಭಾರತವನ್ನು ಬಲಿಷ್ಠರಾಜ್ಯವಾಗಿಸುವ ಪಣ ತೊಡೋಣ. ಜಾತಿ-ಧರ್ಮ ಭೇದ ಮರೆತು, ಸಮಗ್ರ ಅಭಿವೃದ್ಧಿಯೊಂದಿಗೆ ಜಿಲ್ಲೆಯನ್ನು ಮಾದರಿ ಆಗಿಸುವೆಡೆ ಗಮನ ಹರಿಸೋಣ ಎಂದು ಹೇಳಿದರು.
ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ 12.30 ಕೋಟಿ ಮಹಿಳೆಯರು ಪ್ರಯಾಣಿಸಿದ್ದು, 361.67 ಕೋಟಿ ರೂ. ವೆಚ್ಚ ಭರಿಸಲಾಗಿದೆ. ಗೃಹಲಕ್ಷ್ಮಿಯಡಿ 3.74 ಲಕ್ಷ ಮನೆ ಯಜಮಾನಿಯರ ಖಾತೆಗೆ 1690 ಕೋಟಿ ರೂ. ಜಮೆ ಮಾಡಲಾಗಿದೆ. ಯುವನಿಧಿಯಲ್ಲಿ 9,858 ಪದವೀಧರರಿಗೆ 28.63 ಕೋಟಿ, ಡಿಪ್ಲಮೋ ಪದವೀಧರರಿಗೆ 23.29 ಲಕ್ಷ ರೂ. ನಿರುದ್ಯೋಗ ಭತ್ಯೆ ನೀಡಲಾಗಿದೆ ಎಂದು ವಿವರಿಸಿದರು.
ದಾವಣಗೆರೆಗೆ ಏಪ್ರಿಲ್‌ಗೆ ನಿರಂತರ ನೀರು
ಜಿಲ್ಲೆಯ 62 ಗ್ರಾಮಗಳು 24*7 ನೀರು ಪೂರೈಕೆ ಗ್ರಾಮಗಳಾಗಿ ಘೋಷಿಸಲ್ಪಟ್ಟಿದ್ದು, ಜಲಸಿರಿ ಯೋಜನೆಯಡಿ ದಾವಣಗೆರೆ ನಗರದ ಜನರಿಗೆ ಏಪ್ರಿಲ್ ಒಳಗಾಗಿ ನಿರಂತರ ನೀರು ಒದಗಿಸಲಾಗುವುದು. ಅಮೃತ 2 ಯೋಜನೆಯಡಿ ಟಿವಿ ಸ್ಟೇಷನ್ ಕೆರೆ, ಆವರಗೆರೆ ಕೆರೆ ಅಭಿವೃದ್ಧಿಗೆ 9 ಕೋಟಿ ರೂ. ಅನುಮೋದನೆಯಾಗಿದ್ದು ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಸಚಿವರು ಹೇಳಿದರು.
1.30 ಲಕ್ಷ ಭೂ ದಾಖಲೆಗಳ ಡಿಜಿಟಲೀಕರಣವಾಗಿದೆ. ಬೆಳೆವಿಮೆಯಡಿ 11 ಸಾವಿರ ರೈತರಿಗೆ 41.27 ಕೋಟಿ ರೂ. ಪರಿಹಾರ ನೀಡಲಾಗಿದೆ. ಯುವಕರ ಉದ್ಯೋಗಾವಕಾಶಕ್ಕಾಗಿ ‘ಐ.ಟಿ. ಹಬ್’ ಮೂಲಕ ಪ್ರತಿಷ್ಠಿತ ಕಂಪನಿಗಳನ್ನು ಆಹ್ವಾನಿಸಲಾಗಿದೆ. ಮೆಟ್ರಿಕ್ ನಂತರದ 3 ಹಾಸ್ಟೆಲ್‌ಗಳ ನಿರ್ಮಾಣಕ್ಕೆ 20 ಕೋಟಿ ರೂ. ಮಂಜೂರಾಗಿದೆ ಎಂದು ವಿವರಿಸಿದರು.
ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಕೈಗೊಂಡ ವೈಜ್ಞಾನಿಕ ಕ್ರಮಗಳಿಗಾಗಿ ದಾವಣಗೆರೆಗೆ ರಾಜ್ಯ ಮಟ್ಟದ ’ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ’ ಲಭಿಸಿದೆ ಎಂದ ಸಚಿವರು, ಹಾವೇರಿಯಲ್ಲಿ ಫೆ. 13ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ 10 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದು ಪ್ರಕಟಿಸಿದರು.
ಕಾರ್ಯಕ್ರಮದಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಬಯಲುಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಮಂಜಪ್ಪ, ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ್, ಐಜಿಪಿ ಡಾ.ಬಿ.ಆರ್. ರವಿಕಾಂತೇಗೌಡ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಎಸ್ಪಿ ಉಮಾ ಪ್ರಶಾಂತ್, ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಇತರರಿದ್ದರು.
ಪೊಲೀಸ್ ವಾದ್ಯವೃಂದ ಸೇರಿ ಪೊಲೀಸ್ ತುಕಡಿಗಳು, ಶಾಲಾ-ಕಾಲೇಜು ಹಾಗೂ ಎನ್‌ಸಿಸಿ ತಂಡಗಳು ಆಕರ್ಷಕ ಕವಾಯತು ನಡೆಸಿದವು. ಅಜೀಂ ಫಾತೀಮಾ, ಟಿ. ಅಮೃತಾ ಸೇರಿ ಎಸ್ಸೆಸ್ಸೆಲ್ಸಿ ಪ್ರತಿಭಾನ್ವಿತರನ್ನು ಗೌರವಿಸಲಾಯಿತು. ಜಾರಿಗೊಳಿಸಲಾದ ನೂತನ ಪೀಕ್ ಕ್ಯಾಪ್‌ಗಳನ್ನು ಪೊಲೀಸರ ತಲೆಗೆ ತೊಡಿಸಿದ ಸಚಿವರು ಚಾಲನೆ ನೀಡಿದರು.
ಜಿಲ್ಲಾ ಕ್ರೀಡಾಂಗಣದಲ್ಲಿನ ಬಿಸಿಲಿನ ನಡುವೆಯೂ ಕೆಲವು ಶಾಲಾ ತಂಡಗಳು ನೃತ್ಯ ಪ್ರದರ್ಶಿಸಿದವು. ಬೀಡಿ ಲೇಔಟ್‌ನ ಮೌಲಾನ ಅಬ್ದುಲ್ ಕಲಾಂ ಪಬ್ಲಿಕ್ ಶಾಲೆ ಮಕ್ಕಳು ಹುತಾತ್ಮರ ಯೋಧರ ಕಲ್ಪಿತ ಶವಯಾತ್ರೆ, ಗೌರವಾರ್ಪಣೆ ಮಾಡಿದರು. ‘ಕುಛ್ ಯಾದ್ ಉನ್ಹೇಬಿ ಕರ್‌ಲೋ’ ಹಾಡು ಎಲ್ಲರ ಮನ ತಟ್ಟಿತು. ಮಹಾತ್ಮ ಗಾಂಧೀಜಿ, ಅಂಬೇಡ್ಕರ್, ಇಂದಿರಾಗಾಂಧಿ, ನೆಹರು, ಒನಕೆಓಬವ್ವ, ಕಿತ್ತೂರು ಚನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮಿಬಾಯಿ ಮೊದಲಾದ ವೇಷಗಳಲ್ಲಿ ಚಿಣ್ಣರು ಗಮನ ಸೆಳೆದರು.
ಸೀತಮ್ಮ ಪ್ರೌಢಶಾಲಾ ವಿದ್ಯಾರ್ಥಿನಿಯರು ಭಾರತಾಂಬೆ ನಿನ್ನ ಜನುಮದಿನ ಹಾಡಿಗೆ ಹೆಜ್ಜೆ ಹಾಕಿದರು. ಮಿಲ್ಲತ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಕೋಲಾಟದೊಂದಿಗೆ ನೃತ್ಯ ರಂಜಿಸಿದರು.
ದಾವಣಗೆರೆ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವದಲ್ಲಿ ಕವಾಯತು ತಂಡಗಳಿಂದ ಧ್ವಜ ವಂದನೆ ಸ್ವೀಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್.ಮಲ್ಲಿಕಾರ್ಜುನ್.