ಸಿದ್ದರಾಮಯ್ಯ ಅವರು ದೀರ್ಘಾವಧಿ ಸಿಎಂ ಆಗಿ ಡಿ. ದೇವರಾಜ ಅರಸು ಅವರ ದಾಖಲೆ ಮುರಿಯುತ್ತಿರುವ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಮಂಗಳವಾರ ಅವರ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸಿದರು. ಡಿ. ಬಸವರಾಜ, ದಿನೇಶ್ ಕೆ. ಶೆಟ್ಟಿ, ಹಾಲೇಕಲ್ ಲಿಂಗರಾಜ್, ಬಿ.ಎಚ್. ಪರಶುರಾಮಪ್ಪ, ಅಯೂಬ್ ಪೈಲ್ವಾನ್, ಗೋಣೆಪ್ಪ, ಮಂಜುನಾಥ್ ಇಟ್ಟಿಗುಡಿ, ಎಸ್.ಎಲ್. ಆನಂದಪ್ಪ, ಹಾಲೇಕಲ್ ಅರವಿಂದ್, ಎ. ನಾಗರಾಜ್, ಎಸ್. ಮಲ್ಲಿಕಾರ್ಜುನ್, ಜಯಣ್ಣ, ರೇವಣ್ಣ, ಹರೀಶ್, ಸುಧಾ ಮಂಜುನಾಥ್ ಇಟ್ಟಿಗುಡಿ, ಕವಿತಾ ಚಂದ್ರಶೇಖರ, ಉಮಾ ಕುಮಾರ್ ಇದ್ದರು. 
ದಾವಣಗೆರೆ

ಸಾಮಾಜಿಕ ನ್ಯಾಯದ ಸುವರ್ಣ ಯುಗ

ಪ್ರಮುಖ ಮುಖ್ಯಾಂಶಗಳು

  • ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸವರಾಜ್ ಬಣ್ಣನೆ
  • ಸಿಹಿ ವಿತರಿಸಿ ಸಂಭ್ರಮಾಚರಣೆ
  • ದೇವಸ್ಥಾನದಲ್ಲಿ ವಿಶೇಷ ಪೂಜೆ
ದಾವಣಗೆರೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ಕೇವಲ ದಾಖಲೆಯಲ್ಲ, ಸಾಮಾಜಿಕ ನ್ಯಾಯದ ಸುವರ್ಣ ಯುಗ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಬಣ್ಣಿಸಿದರು.
ಸಿದ್ದರಾಮಯ್ಯ ಅವರು ದೀರ್ಘಾವಧಿ ಸಿಎಂ ಆಗಿ ಡಿ. ದೇವರಾಜ ಅರಸು ಅವರ ದಾಖಲೆ ಮುರಿಯುತ್ತಿರುವ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ನಗರದ ಪಿ.ಬಿ. ರಸ್ತೆಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಬಳಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಹರಿಕಾರರು. ಇದು ಕೇವಲ ಆಡಳಿತದ ಅವಧಿಯ ದಾಖಲೆ ಅಲ್ಲ, ಸಾಮಾಜಿಕ ನ್ಯಾಯ, ಹಿಂದುಳಿದವರ ಧ್ವನಿ ಮತ್ತು ಸಂವಿಧಾನಾತ್ಮಕ ಮೌಲ್ಯಗಳ ಪರಂಪರೆಯನ್ನು ಮುಂದುವರಿಸಿದ ದಾಖಲೆಯಾಗಿದೆ ಎಂದು ಹೇಳಿದರು.
ಅರಸು ಯುಗದಲ್ಲಿ ಮೊಳಕೆಯೊಡೆದ ಸಾಮಾಜಿಕ ನ್ಯಾಯದ ಬೀಜ, ಸಿದ್ದರಾಮಯ್ಯ ಅವರ ಕಾಲದಲ್ಲಿ ಗಟ್ಟಿಯಾದ ವೃಕ್ಷವಾಗಿ ಬೆಳೆದಿದೆ ಎಂಬುದಕ್ಕೆ ಈ ಮೈಲಿಗಲ್ಲೇ ಸಾಕ್ಷಿಯಾಗಿದೆ ಎಂದು ಅಭಿಪ್ರಾಯ ಪಟ್ಟರು.
ಹಿಂದುಳಿದ ವರ್ಗಗಳ ಹೋರಾಟದ ಗರ್ಭದಿಂದ ಹೊರಬಂದು, ಸಮಾಜದ ಅಸಮಾನತೆಯನ್ನು ಹತ್ತಿಕ್ಕುವ ಸಂಕಲ್ಪದೊಂದಿಗೆ ರಾಜಕೀಯ ಪಥವನ್ನು ಆರಿಸಿಕೊಂಡ ನಾಯಕ ಸಿದ್ದರಾಮಯ್ಯ ತಮ್ಮ ನಡೆ, ನುಡಿ, ನೀತಿಗಳ ಮೂಲಕ ಸಾಮಾಜಿಕ ನ್ಯಾಯದ ರಾಜಕಾರಣಕ್ಕೆ ಸ್ಪಷ್ಟ ಅರ್ಥ ನೀಡಿದ್ದಾರೆ ಎಂದು ತಿಳಿಸಿದರು.
ಅಹಿಂದ ಚಿಂತನೆ, ಬಡವರ ಪರ ಬಜೆಟ್, ಶಿಕ್ಷಣ, ಆರೋಗ್ಯ, ಆಹಾರ ಭದ್ರತೆ, ಸಂವಿಧಾನಾತ್ಮಕ ಮೌಲ್ಯಗಳ ರಕ್ಷಣೆ ಅವರ ಆಡಳಿತದ ಗುರುತುಗಳು. ಇಂತಹ ನಾಯಕತ್ವದ ಚಿಂತನೆ ಮುಂದಿನ ಪೀಳಿಗೆಗೆ ಸಾಗದಿದ್ದರೆ, ಶೋಷಿತ, ಹಿಂದುಳಿದ ಸಮುದಾಯಗಳ ಧ್ವನಿ ಮಂಕಾಗುವ ಅಪಾಯವಿದೆ. ಆದ್ದರಿಂದ ಸಿದ್ದರಾಮಯ್ಯ ಅವರ ಜತೆಗೆ ಹಾಗೂ ಅವರ ನಂತರವೂ, ಅದೇ ಮೌಲ್ಯಗಳನ್ನು ಹೊತ್ತ ಹೊಸ ನಾಯಕತ್ವ ಬೆಳೆಸುವುದು ಕಾಲಘಟ್ಟದ ಅನಿವಾರ್ಯತೆಯಾಗಿದೆ ಎಂದರು.
ರಾಜಕೀಯವೆಂದರೆ ಸ್ಥಾನಮಾನವಲ್ಲ, ಅದು ಸಮಾಜದ ಹೊಣೆಗಾರಿಕೆ. ಅಧಿಕಾರಕ್ಕಿಂತ ಮೊದಲು ಅರಿವು, ಜನಪ್ರಿಯತೆಗಿಂತ ಮೊದಲು ಪ್ರಾಮಾಣಿಕತೆ, ಸ್ವಾರ್ಥಕ್ಕಿಂತ ಮೊದಲು ಸಮಾನತೆ. ಇವನ್ನೇ ಜೀವನದ ದಾರಿಯಾಗಿಸಿಕೊಂಡಾಗ ಮಾತ್ರ ನಿಜವಾದ ನಾಯಕತ್ವ ರೂಪುಗೊಳ್ಳುತ್ತದೆ ಎಂದು ಹೇಳಿದರು.
ಸಾಮಾಜಿಕ ನ್ಯಾಯ, ಸಂವಿಧಾನ ಮತ್ತು ಮಾನವೀಯ ಮೌಲ್ಯಗಳ ಪರ ನಿಂತು, ನಡೆಯುವ ಧೈರ್ಯವೇ ನಾಳಿನ ಕರ್ನಾಟಕವನ್ನು ರೂಪಿಸುತ್ತದೆ. ದೇವರಾಜ ಅರಸು ಮತ್ತು ಸಿದ್ದರಾಮಯ್ಯ ಬಡವರ ಪಾಲಿನ ಭಾಗ್ಯವಿಧಾತರು. ಅವರು ಬಡವರಿಗೆ ಎರಡು ಕಣ್ಣುಗಳಿದ್ದಂತೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಭಿಮಾನಿಗಳು ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು.
ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಕಾಂಗ್ರೆಸ್ ಪಕ್ಷದ ಹಾಗೂ ಶೋಷಿತ ಸಮಾಜಗಳ ಮುಖಂಡರಾದ ಹಾಲೇಕಲ್ ಲಿಂಗರಾಜ್, ಬಿ.ಎಚ್. ಪರಶುರಾಮಪ್ಪ, ಅಯೂಬ್ ಪೈಲ್ವಾನ್, ಗೋಣೆಪ್ಪ, ಮಂಜುನಾಥ್ ಇಟ್ಟಿಗುಡಿ, ಎಸ್.ಎಲ್. ಆನಂದಪ್ಪ, ಹಾಲೇಕಲ್ ಅರವಿಂದ್, ಎ. ನಾಗರಾಜ್, ಎಸ್. ಮಲ್ಲಿಕಾರ್ಜುನ್, ಜಯಣ್ಣ, ರೇವಣ್ಣ, ಲಿಯಾಕತ್ ಅಲಿ, ಹರೀಶ್, ಸುಧಾ ಮಂಜುನಾಥ್ ಇಟ್ಟಿಗುಡಿ, ಕವಿತಾ ಚಂದ್ರಶೇಖರ, ಉಮಾ ಕುಮಾರ್ ಇದ್ದರು.