ಮಕರ ಸಂಕ್ರಮಣ ಅಂಗವಾಗಿ ದಾವಣಗೆರೆಯ ಉದ್ಯಾನವೊಂದರಲ್ಲಿ ಸಹಭೋಜನ ಮಾಡಿದ ಕುಟುಂಬ.
- ಉದ್ಯಾನಗಳಲ್ಲಿ ಸಾರ್ವಜನಿಕರ ದಂಡು
- ರೊಟ್ಟಿ-ಬುತ್ತಿ ಸವಿದ ಕುಟುಂಬ ಸದಸ್ಯರು
- ದೇಗುಲಗಳಲ್ಲೂ ಅಲಂಕಾರ ವೈವಿಧ್ಯ
ದಾವಣಗೆರೆ: ದಾವಣಗೆರೆ ನಗರಾದ್ಯಂತ ಗುರುವಾರ ಇಡೀದಿನ ಕ್ಯಾಲೆಂಡರ್ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯ ಖುಷಿಯ ಕಿರಣಗಳೇ ಚಾಚಿದ್ದವು. ಪ್ರಮುಖ ಉದ್ಯಾನಗಳು, ಪ್ರವಾಸಿ ತಾಣಗಳು ಜನರ ಸಡಗರದಲ್ಲಿ ಮುಳುಗಿದ್ದವು.
ನೆತ್ತಿ ಸುಡುವ ಬಿಸಿಲಲ್ಲೂ ಸರ್ ಎಂ.ವಿಶ್ವೇಶ್ವರಯ್ಯ ಪಾರ್ಕ್, ಕಾಸಲ್ ಶ್ರೀನಿವಾಸ ಶೆಟ್ಟಿ ಪಾರ್ಕ್, ಚಿಣ್ಣರ ಉದ್ಯಾನ, ಗಂಗೂಬಾಯಿ ಹಾನಗಲ್ ಇನ್ನಿತರೆ ಪಾರ್ಕ್‌ಗಳತ್ತ ಜನರು ರೊಟ್ಟಿ ಬುತ್ತಿಯೊಂದಿಗೆ ದಾಂಗುಡಿ ಇಟ್ಟರು.
ಗಿಡ-ಮರಗಳ ಅಡಿಯಲ್ಲಿ ಚಾಪೆ, ಪ್ಲಾಸ್ಟಿಕ್ ಹಾಸು, ಹೊದಿಕೆ ಹಾಸಿ ಕುಟುಂಬ ಸದಸ್ಯರ ಜತೆಗೆ ಕೆಲ ಹೊತ್ತು ಕಳೆದರು. ಊಟದ ಬ್ಯಾಗ್ ಜತೆಯಲ್ಲೇ ನೀರಿನ ಕ್ಯಾನ್, ಬಾಟಲುಗಳು ಕಂಡುಬಂದವು. ಯುವತಿಯರು, ಮಕ್ಕಳು ಪ್ರಕೃತಿ ಮಡಿಲಿನಲ್ಲಿ ಮೊಬೈಲ್ ಸೆಲ್ಫೀ ತೆಗೆದುಕೊಳ್ಳುವ ಮೂಡಿಗೆ ಜಾರಿದ್ದರು.
ಜೋಳದ ರೊಟ್ಟಿ, ಚಪಾತಿ, ಮೊಸರುಬುತ್ತಿ, ಮುಳುಗಾಯಿ-ಮೆಣಸಿನಕಾಯಿ- ಹೀರೆಕಾಯಿ ಎಣಗಾಯಿ, ಗಡಸೆಪ್ಪು, ಶೇಂಗಾ ಇತರೆ ಚಟ್ನಿಪುಡಿಗಳು, ಪುಂಡಿ ಸೊಪ್ಪು, ಪೊಂಗಲ್, ಚಿತ್ರಾನ್ನ ಮೊದಲಾದ ಭಕ್ಷೃಗಳನ್ನು ಸವಿದರು.
ಚಿಣ್ಣರು ಉದ್ಯಾನಗಳಲ್ಲಿ ಜಾರುವ ಬಂಡಿ, ತಿರುಗುವ ಗಾಲಿ, ಜೋಕಾಲಿ, ಜಿಮ್ ಯಂತ್ರೋಪಕರಣಗಳ ಮೇಲೆ ಹತ್ತಿ ಕುಣಿದಾಡಿದರು. ಕೆಲವೆಡೆ ಸಿಮೆಂಟ್ ಕೆತ್ತನೆಯ ಸಿಂಹ, ಆನೆ ಮೇಲೇರಿಯೂ ಸವಾರಿ ಮಾಡಿದರು!
ಮನೆಯಿಂದ ತಂದಿದ್ದ ಆಟಿಕೆಗಳು, ಕ್ರಿಕೆಟ್ ಬಾಲ್-ಬ್ಯಾಟ್, ಷಟಲ್ ಬ್ಯಾಡ್ಮಿಂಟನ್ ಬಳಸಿ ಅಟವಾಡಿ ಸಂಭ್ರಮಿಸಿದರು. ಗಾಂಜಿವೀರಪ್ಪ ಸಾರ್ವಜನಿಕ ಈಜುಕೊಳದಲ್ಲಿ ಮಕ್ಕಳು, ಯುವಕರು ಈಜಾಡಿ ಬಿಸಿಲಿಗೆ ಮೈಯೊಡ್ಡಿದರು.
ದೊಡ್ಡಬಾತಿಯ ಪವಿತ್ರವನ, ಆನಗೋಡು ಪ್ರಾಣಿ ಸಂಗ್ರಹಾಲಯಗಳು ಕೂಡ ಹಬ್ಬದ ಸಡಗರಕ್ಕೆ ಸಾಕ್ಷಿಯಾದವು. ಪಾರ್ಕ್ ಹಾಗೂ ಕೆಲ ಪ್ರಮುಖ ತಾಣಗಳ ಬಳಿ ಐಸ್‌ಕ್ರೀಂ, ಕಬ್ಬಿನ ಹಾಲು, ಗೋಲಗುಪ್ಪ, ಕಡ್ಲೆಗಿಡ, ಎಳನೀರು, ಹಣ್ಣಿನ ಜ್ಯೂಸ್, ಕುರ್‌ಕುರೆ, ಶೇಂಗಾ, ಬೇಯಿಸಿದ ಮೆಕ್ಕೆಜೋಳ ವ್ಯಾಪಾರ ಹೆಚ್ಚಿತ್ತು. ನೀರಿನ ಬಾಟಲುಗಳಿಗೆ ಬೇಡಿಕೆ ಹೆಚ್ಚಿತ್ತು.
ಮನೆಗಳಲ್ಲೂ ಬಂಧುಗಳೊಂದಿಗೆ ವಿಶೇಷ ಸಿಹಿ ಖಾದ್ಯದ ಸವಿಯ ಜತೆಗೆ ಹಬ್ಬದ ಸಂಭ್ರಮ ಜೋರಾಗಿತ್ತು. ಕುಟುಂಬಸ್ಥರು, ಸ್ನೇಹಿತರಿಗೆ ಎಳ್ಳು-ಬೆಲ್ಲ ಹಂಚಿ ಶುಭಾಶಯ ಹೇಳಿದರು. ತಮಿಳು ಸಮುದಾಯದವರು ಮನೆಗಳಲ್ಲಿ ಪೊಂಗಲ್ ಅಡುಗೆ ಮಾಡಿ ಸ್ನೇಹಿತರೊಂದಿಗೆ ಸವಿದರು.
ದೇಗುಲಗಳಲ್ಲೂ ಬೆಳಗ್ಗಿನಿಂದಲೂ ಜನಸಂದಣಿ ಕಂಡುಬಂದಿತು. ಬೆಳಗಿನ ವಿಶೇಷ ಪೂಜೆ, ಅಭಿಷೇಕವನ್ನು ಭಕ್ತರು ಕಣ್ತುಂಬಿಕೊಂಡರು. ಮಾರುಕಟ್ಟೆಗಳಲ್ಲಿ ಜನರ ಪ್ರಮಾಣ ತಗ್ಗಿತ್ತು. ತರಕಾರಿ ವ್ಯಾಪಾರದ ಜತೆಯಲ್ಲೇ ಎಳ್ಳು-ಬೆಲ್ಲ, ಸಕ್ಕರೆ ಅಚ್ಚು, ಕಬ್ಬಿನ ಜಲ್ಲೆಗಳನ್ನು ಮಾರಾಟಕ್ಕೆ ಇರಿಸಲಾಗಿತ್ತು.
ಜನಾಕರ್ಷಿಸಿದ ಗಾಜಿನ ಮನೆ, ಥೀಮ್ ಪಾರ್ಕ್
ದಾವಣಗೆರೆಯ ಥೀಮ್ ಪಾರ್ಕ್, ಗಾಜಿನ ಮನೆಗಳಲ್ಲಿಯೂ ಜನರು ಬೆಳಗ್ಗಿನಿಂದಲೂ ಟಿಕೆಟ್‌ನೊಂದಿಗೆ ಪ್ರವೇಶ ಪಡೆದರು. ಮಕ್ಕಳೊಂದಿಗೆ ಪಾಲಕರು ಕೂಡ ಕಲಾಕೃತಿ, ವಿಶೇಷ ಮರಗಳ ಬಳಿ ಸೆಲ್ಫೀ ತೆಗೆದುಕೊಳ್ಳುತ್ತಿದ್ದರು.
2500ಕ್ಕೂ ಹೆಚ್ಚು ಜನರು-ಮಕ್ಕಳು ಗಾಜಿನಮನೆ ವೀಕ್ಷಣೆ ನಡೆಸಿದ್ದರಿಂದ ಒಂದೇ ದಿನ 62 ಸಾವಿರಕ್ಕೂ ಹೆಚ್ಚಿನ ವರಮಾನ ಕಂಡುಬಂದಿತು. ಪಾಲಕರು-ಮಕ್ಕಳು ಸಂಜೆ ವೇಳೆ ಸಂಗೀತ ಕಾರಂಜಿ ಜತೆಗೆ ಲೇಸರ್ ಷೋ ಸವಿ ಅನುಭವಿಸಿದರು. ಸದ್ಯೋಜಾತ ಮಠದಲ್ಲಿ ಮಕರ ಸಂಕ್ರಾಂತಿ ವಿಷಯಾಧಾರಿತ ಆಯೋಜಿಸಿದ್ದ ಚಿತ್ರಕಲೆ ಹಾಗೂ ರಂಗೋಲಿ ಸ್ಪರ್ಧೆಯಲ್ಲಿ ಮಕ್ಕಳು ಭಾಗವಹಿಸಿದ್ದರು.
ಹಬ್ಬದಂಗವಾಗಿ ದಾವಣಗೆರೆಯ ಕೆಲ ದೇವಸ್ಥಾನಗಳಲ್ಲಿನ ವೈವಿಧ್ಯಮಯ ಅಲಂಕಾರಗಳು ಜನರ ಗಮನ ಸೆಳೆದವು. ದೊಡ್ಡಪೇಟೆಯ ಗಣೇಶ ದೇವಸ್ಥಾನದ ಮೂರ್ತಿ ತರಕಾರಿ- ಸಿಹಿ ಖಾದ್ಯಗಳೊಂದಿಗೆ ಅಲಂಕರಿಸಲಾಗಿತ್ತು. ಧನುರ್ಮಾಸದ ಕೊನೆ ದಿನವಾದ ಸಂಕ್ರಾಂತಿ ದಿನಕ್ಕೆ ಪ್ರತಿ ವರ್ಷವೂ ಅಲಂಕರಿಸುತ್ತ ಬರಲಾಗಿದೆ ಎಂದು ಅಲ್ಲಿನ ಪೂಜಾರರಾದ ವೀರಯ್ಯ ಹಿರೇಮಠ್ ಪತ್ರಿಕೆಗೆ ತಿಳಿಸಿದರು.
ಆವರೆಕಾಯಿ, ಕ್ಯಾರೆಟ್, ಮೂಲಂಗಿ, ಟೊಮ್ಯಾಟೋ, ನವಿಲುಕೋಸು, ಹೂಕೋಸು, ಶೇಂಗಾ, ಗೆಣಸು, ಸೌತೆಕಾಯಿ, ಎಳ್ಳಿನ ಹೋಳಿಗೆ, ಶೇಂಗಾ ಹೋಳಿಗೆ, ಸುರಂಗದ ಹೋಳಿಗೆ, ರವೆಉಂಡಿ, ಶೇಂಗಾ ಉಂಡೆ, ಕರಿಗೆಡುಬು, ಮೋದಕ ಮೊದಲಾದವುಗಳಿಂದ ಅಲಂಕೃತ ಗಣೇಶನನ್ನು ಜನರು ಕಣ್ತುಂಬಿಕೊಂಡರು.
ಇನ್ನು ಚೌಕಿಪೇಟೆಯ ಶಿವಯೋಗಿ ಬಕ್ಕೇಶ್ವರ ದೇವಸ್ಥಾನದ ಗರ್ಭಗುಡಿ ಕೂಡ ಆಕರ್ಷಕವಾಗಿತ್ತು. ಕಬ್ಬಿನ ಜಲ್ಲೆಗಳ ಮೇಲೆ ನೆರಕೆಮನೆ ಸೃಷ್ಟಿಸಿ ಅದರೊಳಗೆ ಸ್ವಾಮಿಯ ಮೂರ್ತಿಯನ್ನು ಅಲಂಕರಿಸಲಾಗಿತ್ತು.